ADVERTISEMENT

ಸೋಲಿನ ಭಯದಿಂದ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸದ ಸರ್ಕಾರ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 9:45 IST
Last Updated 5 ಡಿಸೆಂಬರ್ 2021, 9:45 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಳಗಾವಿ: ಸೋಲಿನ ಭಯದಿಂದಾಗಿ ಈ ಸರ್ಕಾರವು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.

ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಲ್ಲೂರಿನ ಸಿದ್ದೇಶ್ವರ ದೇವಸ್ಥಾನದ‌ ಸಮುದಾಯ ಭವನದಲ್ಲಿ ಕಾಂಗ್ರೆಸ್‌ನಿಂದ ಭಾನುವಾರ ಆಯೋಜಿಸಿದ್ದ ಸವದತ್ತಿ ಹಾಗೂ ರಾಮದುರ್ಗ ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳ ಸದಸ್ಯರ ಸಮ್ಮಿಲನ‌ ಸಮಾವೇಶದಲ್ಲಿ ಅವರು ಮಾತನಾಡಿದರು.

ಈ ಚುನಾವಣೆಯಲ್ಲಿ ಮತದಾರರು ಸ್ವಾಭಿಮಾನ ಹಾಗೂ ಆತ್ಮಗೌರವ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ನಿಮ್ಮ ಧ್ವನಿ ವಿಧಾನಪರಿಷತ್‌ಗೆ ಹೋಗಬೇಕು. ಅಲ್ಲಿ ನಿಮ್ಮ‌ ಸಮಸ್ಯೆಗಳ ಬಗ್ಗೆ ಮಾತನಾಡುವವರನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.

'ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಮ್ಮ ಎಂದು ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಕಾರ್ಯಕರ್ತ ಅಂತ ಕೊಟ್ಟಿದ್ದೇವೆ ಎಂದು ಸಮರ್ಥಿಸಿಕೊಂಡರು.

ಬೇರೆ ಅಭ್ಯರ್ಥಿ ನಿಮ್ಮ ಬಗ್ಗೆ ಮಾತನಾಡುತ್ತಾರೆಯೇ ಎನ್ನುವುದನ್ನು ಯೋಚಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ತುಂಬಿದವರು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಮೀಸಲಾತಿ ಕೊಟ್ಟವರು ನಾವು. ಉದ್ಯೋಗ ಖಾತ್ರಿ ಯೋಜನೆ ಮಾಡಿದವರು ನಾವು. ಪಂಚಾಯಿತಿಯಲ್ಲಿ ₹ 2 ಕೋಟಿಯಿಂದ ₹ 5 ಕೋಟಿ‌ ಖರ್ಚು ಮಾಡಲು ಶಕ್ತಿ ತುಂಬಿದ್ದೇವೆ ಎಂದರು.

'ಅವರು ಅಷ್ಟು ಹಣ ಕೊಟ್ಟರೆಂದು ಹೋಗಬೇಡಿ. ಪಂಚಾಯಿತಿ ಸದಸ್ಯರಾಗಲು ಪಕ್ಷವು ನಿಮಗೆ ಶಕ್ತಿ ಕೊಟ್ಟಿರುವುದನ್ನು ಮರೆಯಬಾರದು. ಯಾರ‌ ಬಳಿಯೂ ಚೀಟಿ ಪಡೆಯಬೇಡಿ. ನಿಮ್ಮ ಮತವನ್ನು ನೀವೇ ಚಲಾಯಿಸಬೇಕು.‌ ನಮ್ಮ ಏಜೆಂಟರು ಇರುತ್ತಾರೆ. ಧೈರ್ಯವಾಗಿ ಬಂದು ಮತ ಚಲಾಯಿಸಬೇಕು. ಸ್ವಾಭಿಮಾನದ ಮತವನ್ನು ಕೊಡಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.