ADVERTISEMENT

ಕೋವಿಡ್–19: ಬೆಳಗಾವಿ ಜಿಲ್ಲೆಯಲ್ಲಿ 90 ಶಿಕ್ಷಕರು ಸಾವು

​ಪ್ರಜಾವಾಣಿ ವಾರ್ತೆ
Published 17 ಮೇ 2021, 7:10 IST
Last Updated 17 ಮೇ 2021, 7:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್–19ನಿಂದಾಗಿ ಭಾನುವಾರದವರೆಗೆ 90 ಮಂದಿ ಶಿಕ್ಷಕರು ಸಾವಿಗೀಡಾಗಿದ್ದಾರೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೋವಿಡ್ ಮೊದಲನೇ ಅಲೆಯಲ್ಲಿ 23 ಹಾಗೂ 2ನೇ ಅಲೆಯಲ್ಲಿ 20 ಮಂದಿ, ಅಂತೆಯೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 18 ಮತ್ತು 29 ಶಿಕ್ಷಕರು ಮರಣ ಹೊಂದಿದ್ದಾರೆ. ಈ ವಿಷಯವನ್ನು ಡಿಡಿಪಿಐಗಳಾದ ಆನಂದ ಪುಂಡಲೀಕ ಹಾಗೂ ಗಜಾನನ ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ 2ನೇ ಅಲೆ ಕಾಣಿಸಿಕೊಂಡ ನಂತರ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 20 ಮಂದಿ ಶಿಕ್ಷಕರು ಕೋವಿಡ್ ಸೋಂಕಿನಿಂದ ಮರಣ ಹೊಂದಿದ್ದಾರೆ. ಅವರಲ್ಲಿ 10 ಮಂದಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾಗವಹಿಸಿದ್ದರೆಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಆನಂದ ಮಾಹಿತಿ ನೀಡಿದರು.

ADVERTISEMENT

‘ಪ್ರಸ್ತುತ 53 ಮಂದಿ ಶಿಕ್ಷಕರು ಕೋವಿಡ್ ಬಾಧಿತರಾಗಿದ್ದಾರೆ. ಅವರಲ್ಲಿ ಕೆಲವರು ಆಸ್ಪತ್ರೆಯಲ್ಲಿದ್ದಾರೆ. ಕೆಲವರು ಹೋಂ ಐಸೊಲೇಷನ್‌ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಬಿಇಒ, ಬಿಆರ್‌ಸಿ, ಸಿಆರ್‌ಪಿಗಳ ಮೂಲಕ ಶಿಕ್ಷಕರಿಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳಿ. ಅವಶ್ಯವಿದ್ದರಷ್ಟೆ ಮನೆಗಳಿಂದ ಹೊರ ಬನ್ನಿ ಎಂದು ತಿಳಿಸುತ್ತಿದ್ದೇವೆ. ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದೆ. ಇದಕ್ಕಾಗಿ ಹಲವು ಬಾರಿ ಗೂಗಲ್ ಮೀಟ್, ವೆಬಿನಾರ್‌ ನಡೆಸಿದ್ದೇವೆ. ಮಕ್ಕಳಿಗೂ ಅರಿವು ಮೂಡಿಸುವಂತೆ ತಿಳಿಸುತ್ತಿದ್ದೇವೆ’ ಎಂದರು.

‘1ರಿಂದ 9ನೇ ತರಗತಿಯ ಎಲ್ಲ ಮಕ್ಕಳಿಗೂ ಪರೀಕ್ಷೆ ಇಲ್ಲದೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗಿದೆ. ಮಕ್ಕಳು ಮನೆಯಲ್ಲಿ ಏನೇನು ಅಭ್ಯಾಸ ಮಾಡಬೇಕು ಎಂಬ ಮಾಹಿತಿಯನ್ನು ಶಿಕ್ಷಕರ ಮೂಲಕ ಕೊಡಿಸಲಾಗುತ್ತಿದೆ. ಶಾಲೆ ಪ್ರಾರಂಭವಾದಾಗ ಅವರಿಗೆ ‘ಸೇತುಬಂಧ’ ಕಾರ್ಯಕ್ರಮ ನಡೆಸಿ, ಪುನರ್ಮನನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ಮಿಷನ್ 625’ ಉಪಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು ಮೊಬೈಲ್‌ ಫೋನ್‌ಗಳ ಮೂಲಕ ಮಾರ್ಗದರ್ಶನ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.