ಬೆಳಗಾವಿ: ‘ಪಂಚಮಸಾಲಿ ಸಮಾಜದ ಹೋರಾಟ ಹತ್ತಿಕ್ಕಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸಂಚು ನಡೆಸಿದ್ದಾನೆ. ಹೋರಟಗಾರರ ವಾಹನಗಳ ಸಂಚಾರ ನಿಷೇಧ ಮಾಡಿದ್ದಾನೆ. ಈ ಜಿಲ್ಲಾಧಿಕಾರಿ ಎಷ್ಟು ಮೂರ್ಖ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಏಕವಚನದಲ್ಲೇ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.
‘ಉದ್ದೇಶಪೂರ್ವಕ ಒಂದು ಸಮುದಾಯದ ಹೋರಾಟ ಹತ್ತಿಕ್ಕುತ್ತಿದ್ದಾನೆ. ವಾಹನ ಸಂಚಾರ ನಿರ್ಬಂಧ ಮಾಡುತ್ತೇನೆ, ಕರ್ಫ್ಯೂ ಹೇರುತ್ತೇನೆ ಅಂದಿದ್ದಾನೆ. ಕರ್ಫ್ಯೂ ಹೇರಿದ ಮೇಲೆ ಎಲ್ಲ ಶಾಸಕರು, ಅಧಿಕಾರಿಗಳ ವಾಹನಗಳನ್ನೂ ನಿರ್ಬಂಧಿಸಬೇಕು. ನಿನಗೆ ಅಷ್ಟು ಪವರ್ ಇದ್ದರೆ ಎಲ್ಲರ ವಾಹನ ತಡೆ. ಯಾರೊಬ್ಬರೂ ಸುವರ್ಣ ವಿಧಾನಸೌಧಕ್ಕೆ ಹೋಗಬಾರದು. ಅಧಿವೇಶನ ಹೇಗೆ ನಡೆಯುತ್ತದೆ ಹೇಳಲಿ ಅವನು’ ಎಂದು ಅವರು ನಗರದಲ್ಲಿ ಸೋಮವಾರ ಮಾಧ್ಯಮದವರ ಮುಂದೆ ಕಿಡಿ ಕಾರಿದರು.
’ಈ ಜಿಲ್ಲಾಧಿಕಾರಿ ಯಾರ ಸಪೋರ್ಟಿನ ಮೇಲೆ ಇಷ್ಟು ಅಹಂಕಾರ ತೋರುತ್ತಿದ್ದಾನೆ ಎಲ್ಲವೂ ಗೊತ್ತಿದೆ. ನಗರದ ಸ್ಮಾರ್ಟ್‌ಸಿಟಿಯಲ್ಲಿ ಬರೀ ತಮ್ಮದೇ ಸಮುದಾಯದವರನ್ನು ತಂದು ಇಟ್ಟುಕೊಂಡಿದ್ದಾನೆ. ಎಲ್ಲವನ್ನೂ ನಾವು ಗಮನಿಸುತ್ತಿದ್ದೇವೆ. ಅಧಿವೇಶನದಲ್ಲಿ ಹೋರಾಟ ತಡೆದರೆ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡುತ್ತೇವೆ’ ಎಂದರು.
‘ಬೃಹತ್ ಹೋರಾಟಗಳಲ್ಲಿ ಜಿಲ್ಲಾಡಳಿತ ತನ್ನ ಸಿದ್ಧತೆ ಮಾಡಿಕೊಳ್ಳಬೇಕು. ನಿಷೇಧ ಮಾಡುವುದಲ್ಲ. ಹಿಂದೆ ಆಲಮಟ್ಟಿಯಲ್ಲೂ ದೊಡ್ಡ ಹೋರಾಟ ಮಾಡಿದೆವು. ಆಗ ಪೊಲೀಸರೇ ಸಹಕಾರ ಮಾಡಿದರು. ಅಲ್ಲಿಯೂ ಪ್ರತಿಭೆಗಳಿಗೆ ಅನ್ಯಾಯ ಆಗುತ್ತಿದೆ ಎಂಬುದು ಅವರಿಗೂ ಗೊತ್ತಿದೆ. ನಮ್ಮ ಹೋರಾಟ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲ ಸಮುದಾಯಗಳಿಗೂ ಫಲ ನೀಡುವಂಥದ್ದು’ ಎಂದರು.
‘ಇದರಲ್ಲಿ ಜೈನರು, ಮರಾಠ, ಲಿಂಗಾಯತ, ಕ್ರಿಶ್ಚಿಯನ್ ಸಮಯದಾಯದವರಿಗೂ ಅನುಕೂಲವಿದೆ. ಕುರುಬ ಸಮಾಜ ಪರಿಶಿಷ್ಟ ಪಂಗಡಕ್ಕೆ ಹೋದಾಗ ಅವರಿಗೆ ಸೂಕ್ತ ಮೀಸಲಾತಿ ಸಿಗುತ್ತದೆ. ಹಾಲುಮತ ಸಮಾಜ ಬಹಳ ದೊಡ್ಡದು. ಅವರ ಪಾಲನ್ನು ನಾವು ಕಸಿದುಕೊಳ್ಳಲು ತಯಾರಿಲ್ಲ. ಸಂವಿಧಾನದಲ್ಲಿ ಧರ್ಮ ಆಧರಿತ ಮೀಸಲಾತಿ ಇಲ್ಲ. ಜಾತಿ ಆಧರಿಸಿ ನೀಡಬೇಕು ಎಂದಿದೆ. ಆದರೆ, ಕಾಂಗ್ರೆಸ್ಸಿಗರು ಮುಸ್ಲಿಮರಿಗೆ ಮೂರು ಕಡೆ ಮೀಸಲಾತಿ ನೀಡಿದ್ದಾರೆ. ಪ್ರವರ್ಗ– 1, 2ಎ, ಅಲ್ಪಸಂಖ್ಯಾತರಲ್ಲಿ ಲಾಭ ಪಡೆಯುತ್ತಿದ್ದಾರೆ. ಇದನ್ನು ತೆಗೆಯಿರಿ. ಇದನ್ನು ತೆಗೆದೇ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಸಮಿತ್ ಶಾ ಅವರು ಹೊಸ ಸೂತ್ರ ಕಂಡುಹಿಡಿದರು. 2ಸಿ ಒಕ್ಕಲಿಗರಿಗೆ, 2ಡಿ ಉಳಿದೆಲ್ಲ ಲಿಂಗಾಯತ, ಮರಾಠ, ಜೈನ, ಕ್ರಿಶ್ಚಿಯನ್ನರಿಗೆ ಕೊಟ್ಟಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಒಂದೇ ಪರ್ಸೆಂಟ್ ಸಿಕ್ಕರೂ ಸಾಕು. ನಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗುತ್ತದೆ’ ಎಂದರು.
ಇಂಥ ಹೋರಾಟವನ್ನೇ ಹತ್ತಿಕ್ಕಲು ಜಿಲ್ಲಾಧಿಕಾರಿ ಮುಂದಾಗಿದ್ದಾನೆ. ಹೈಕೋರ್ಟ್ ನಲ್ಲಿ ವಿಚಾರಿಸಿಕೊಳ್ಳುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.