ADVERTISEMENT

ಮಹದಾಯಿ: ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ- ಸತೀಶ ಜಾರಕಿಹೊಳಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 15:44 IST
Last Updated 31 ಜನವರಿ 2021, 15:44 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹಾರ ಮಾಡಿಕೊಡಬೇಕು’ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಗ್ರಹಿಸಿದರು.

‘ಕರ್ನಾಟಕಕ್ಕೆ ಮಹದಾಯಿಯ ಒಂದು ಹನಿ ನೀರು ಕೊಡುವುದಿಲ್ಲ’ ಎಂಬ ಗೋವಾ ಮುಖ್ಯಮಂತ್ರಿ ಹೇಳಿಕೆಗೆ ಇಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ಈ ಹಿಂದೆ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಿಸೆಂಬರ್‌ನಲ್ಲಿ ಸಿಹಿ ಸುದ್ದಿ ನೀಡುವುದಾಗಿ ಘೋಷಣೆ ಮಾಡಿದ್ದರು. ವರ್ಷ ಕಳೆದರೂ ಶುಭ ಸುದ್ದಿ ನೀಡಿಲ್ಲ. ಕರ್ನಾಟಕ ಮತ್ತು ಗೋವಾ ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಪ್ರಧಾನಿಯು ಆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ವಿವಾದ ಇತ್ಯರ್ಥಗೊಳಿಸಬೇಕು’ ಎಂದರು.

‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜಕೀಯ ಉದ್ದೇಶದಿಂದ ಗಡಿ ವಿವಾದ ಕೆಣಕಿದ್ದಾರೆ. ಅದಕ್ಕೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ. ಇಲ್ಲಿ ಮರಾಠಿಗರಿಗೆ ಅನ್ಯಾಯ ಮಾಡಿಲ್ಲ. ಅದರಲ್ಲೂ ಯಮನಕಮರಡಿ ಕ್ಷೇತ್ರದಲ್ಲಿ ಮರಾಠಿಗರು ಜಾಸ್ತಿ ಇದ್ದು, ಅವರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಕನ್ನಡ ಶಾಲೆಗಳಿಗೆ ನೀಡಿದಷ್ಟೆ ಪ್ರಾಮುಖ್ಯತೆ ಮರಾಠಿ ಶಾಲೆಗಳಿಗೂ ಕೊಡಲಾಗಿದೆ. ಅಥಣಿಯಿಂದ ಹಿಡಿದು ಕಾರವಾರದವರೆಗೂ ಸಾವಿರಾರು ಕೋಟಿ ರೂಪಾಯಿ ಅನುದಾನ ಬಳಕೆ ಮಾಡಲಾಗಿದೆ. ರಾಜ್ಯ ಸರ್ಕಾರ ಈ ಅಂಕಿ ಅಂಶಗಳುಳ್ಳ ಪುಸ್ತಕ ಸಿದ್ಧಪಡಿಸಿ ಮಹಾರಾಷ್ಟ್ರ ಸರ್ಕಾರಕ್ಕೆ ಪ್ರತ್ಯತ್ತರ ನೀಡಬೇಕು’ ಎಂದು ಒತ್ತಾಯಿಸಿದರು.

‘ಮುಂಬೈ ನಮ್ಮದು’ ಎಂದ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆಗೆ, ‘ಮುಂಬೈ ಪಡೆದು ನಾವೇನು ಮಾಡೋಣ? ಅದರ ಅಗತ್ಯ ನಮಗಿಲ್ಲ. ಬೆಂಗಳೂರೆ ಸಾಕು. ಸಾಕಷ್ಟು ಹಳ್ಳಿಗಳ ಅಭಿವೃದ್ಧಿ ಆಗಬೇಕಿದೆ. ಮೊದಲು ಆ ಕೆಲಸ ಮಾಡೋಣ’ ಎಂದರು.

***

‘ರಾಹುಲ್ ಗಾಂಧಿ ಕರೆ ಮಾಡಿಲ್ಲ’

‘ಲೋಕಸಭಾ ಉಪ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನನಗೆ ಕರೆ ಮಾಡಿಲ್ಲ’ ಎಂದು ಸತೀಶ ಸ್ಪಷ್ಟಪಡಿಸಿದರು.

‘ವರಿಷ್ಠರು ಹೇಳಿದಂತೆ ನಡೆದುಕೊಳ್ಳುತ್ತೇನೆ. ಸದ್ಯ ನಾಲ್ವರ ಹೆಸರು ಕೇಳಿಬಂದಿದೆ. ಚರ್ಚೆ ನಡೆದಿದೆ. ಪ್ರಕಾಶ ಹುಕ್ಕೇರಿ ಅವರಿಗೆ ಟಿಕೆಟ್ ಕೊಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಇಲ್ಲೂ ಆಕಾಂಕ್ಷಿಗಳಿದ್ದಾರೆ. ಚಿಕ್ಕೋಡಿಯಲ್ಲೇ ಟಿಕೆಟ್ ಪಡೆಯಲು ಅವರಿಗೆ ಅವಕಾಶವಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.