ADVERTISEMENT

ರೈಲು ಸೌಲಭ್ಯ ಉದ್ಘಾಟನಾ ಸಮಾರಂಭ: ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಆದ್ಯತೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 15:26 IST
Last Updated 22 ಮೇ 2025, 15:26 IST
ಗೋಕಾಕ ಸಮೀಪದ ಗೋಕಾಕ ರೋಡ್ ರೈಲ್ವೆ ನಿಲ್ದಾಣದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈಲು ಸೌಲಭ್ಯಗಳ ಉದ್ಘಾಟನಾ ಸಮಾರಂಭವನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೆರವೇರಿಸಿದರು
ಗೋಕಾಕ ಸಮೀಪದ ಗೋಕಾಕ ರೋಡ್ ರೈಲ್ವೆ ನಿಲ್ದಾಣದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈಲು ಸೌಲಭ್ಯಗಳ ಉದ್ಘಾಟನಾ ಸಮಾರಂಭವನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೆರವೇರಿಸಿದರು   

ಗೋಕಾಕ: ಸುಮಾರು ₹18 ಕೋಟಿ ವೆಚ್ಚದಲ್ಲಿ ಉನ್ನತೀಕರಣ ಮಾಡಲಾಗಿರುವ ಗೋಕಾಕ ರೋಡ್ ನಿಲ್ದಾಣದಲ್ಲಿ ಅತಿ ಶೀಘ್ರದಲ್ಲಿ ಎಕ್ಸ್‌ಪ್ರೆಸ್‌ ರೈಲುಗಳಿಗೆ ನಿಲುಗಡೆ ಒದಗಿಸುವಂತೆ ರಾಜ್ಯಸಭಾ ಸದಸ್ಯ ಈರಣ್ಞ ಕಡಾಡಿ ನೈರುತ್ಯ ರೈಲ್ವೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಗುರುವಾರ ಇಲ್ಲಿಗೆ ಸಮೀಪದ ಗೋಕಾಕ-ರೋಡ್ (ಕೊಣ್ಣೂರ) ರೈಲ್ವೆ ನಿಲ್ದಾಣವನ್ನು ಅಮೃತ ಭಾರತ ಯೋಜನೆ ಅಡಿ ಮೇಲ್ದರ್ಜೆಗೆ ಏರಿಸಿದ ಹಿನ್ನೆಲೆಯಲ್ಲಿ ದೇಶದ ಇತರೆ 103 ಇಂತಹ ನಿಲ್ದಾಣಗಳೊಂದಿಗೆ ಪ್ರಧಾನಿ‌ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶಕ್ಕೆ ಸಮರ್ಪಿಸುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 

ಬೆಳಗಾವಿ ಜಿಲ್ಲೆಯ ಇನ್ನೂ ಅನೇಕ ರೈಲ್ವೆ ನಿಲ್ದಾಣಗಳಲ್ಲೂ ಅಭಿವೃದ್ಧಿ ಕಾಮಗಾರಿಗಳು ಸಾಗಿದ್ದು, ಶೀಘ್ರದಲ್ಲಿ ಘಟಪ್ರಭಾ ಮೊದಲಾದ ನಿಲ್ದಾಣಗಳೂ ಸಹ ಪ್ರಯಾಣಿಕರಿಗೆ ಗುಣಮಟ್ಟದ ಸೇವೆಯನ್ನು ಒದಗಿಸಲಿವೆ ಎಂದರು.

ADVERTISEMENT

ಬೆಳಗಾವಿ ಜಿಲ್ಲೆಯ ರೈಲು ಪ್ರಯಾಣಿಕರ ಕನಸಾದ ಬೆಳಗಾವಿ-ಬೆಂಗಳೂರು ವಂದೇ ಭಾರತ ರೈಲು ಸೇವೆ ಶೀಘ್ರ  ಆರಂಭಗೊಳ್ಳಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಮೀರಜ್-ಬೆಳಗಾವಿ ನಡುವೆ ದಿನಕ್ಕೆರಡು ಬಾರಿ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್‌ ಗಾಡಿಗಳನ್ನು ಪ್ಯಾಸೆಂಜರ್ ಪ್ರಯಾಣ ದರದಲ್ಲಿ ಓಡಿಸಲು ಕೂಡಲೇ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಡೆಮೋ ರೈಲು ಸೇವೆಯನ್ನೂ ಈ ಮಾರ್ಗದಲ್ಲಿ ಒದಗಿಸಿ ನಿತ್ಯವೂ ಕನಿಷ್ಟ ನಾಲ್ಕು ಬಾರಿ ಸಂಚಾರ ಸೇವೆ ಲಭಿಸುವಂತಾಗಲಿ ಎಂದು ಕೋರಿದರು.

ಭವಿಷ್ಯದ ದಿನಗಳಲ್ಲಿ ಗೋಕಾಕ ನೂತನ ಜಿಲ್ಲಾ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದರು.

ಪ್ರಯಾಣಿಕರ‌ ಅನುಕೂಲಕ್ಕಾಗಿ ಉತ್ತರ ಭಾರತದ ಪ್ರವಾಸಿ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳಿಗೆ ಗೋಕಾಕ ರೋಡ್ ನಿಲ್ದಾಣದಲ್ಲಿ ನಿಲುಗಡೆ ಒದಗಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸಾರ್ವಜನಿಕರು ಪ್ರತ್ಯೇಕ ಮನವಿಗಳನ್ನು ಸಲ್ಲಿಸಿದರು.

ಮಾಜಿ ಸಚಿವ ಆರ್.ಎಂ.ಪಾಟೀಲ, ನೈರುತ್ಯ ರೈಲ್ವೆ ವಲಯದ ಮುಖ್ಯ ಕಮರ್ಷಿಯಲ್ ಮ್ಯಾನೇಜರ ಅನೂಪ ಸಾಧು, ಡಿ.ಆರ್.ಯು.ಸಿ.ಸಿ. ಸದಸ್ಯ ಫಕೀರಗೌಡ ಸಿದ್ದನಗೌಡರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ, ರಾಮಣ್ಣ ಹುಕ್ಕೇರಿ, ರಾಜು ಕತ್ತಿ, ಸುರೇಶ ಪಾಟೀಲ, ಮಾರುತಿ ವಿಜಯನಗರ, ಮಹ್ಮದ ಗೌಸ್ ಬಾಗೇವಾಡಿ, ಹಿರಿಯ ವಿಭಾಗೀಯ ಸುರಕ್ಷಾ ನೀರಿಕ್ಷಕ  ಕಾರ್ತಿಕ, ಬೆಳಗಾವಿ ವಿಭಾಗದ ಕಮರ್ಷಿಯಲ್ ಮ್ಯಾನೇಜರ್ ಭೀಮಪ್ಪ ಮೇದಾರ, ರವೀಂದ್ರ ಮಾದರ, ಅಮರ ಬಡೋದೆ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.