ADVERTISEMENT

ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಕಾರ್ಖಾನೆಗೆ ಬೀಗ: ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:52 IST
Last Updated 1 ಜನವರಿ 2026, 6:52 IST
ರಾಮದುರ್ಗ ತಾಲ್ಲೂಕಿನ ಖಾನಪೇಟೆಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ವಾರ್ಷಿಕ ಸಾಮಾನ್ಯ ಸಭೆಯನ್ನು ತೊರಗಲ್‌ ಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ರಾಮದುರ್ಗ ತಾಲ್ಲೂಕಿನ ಖಾನಪೇಟೆಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ವಾರ್ಷಿಕ ಸಾಮಾನ್ಯ ಸಭೆಯನ್ನು ತೊರಗಲ್‌ ಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು   

ರಾಮದುರ್ಗ: 'ಕಾರ್ಖಾನೆಯ ಲೀಜ್‌ ವೇಳೆಗೆ ಮಾಡಿಕೊಂಡ ಒಡಂಬಡಿಕೆಯಂತೆ ಈಐಡಿ ಪ್ಯಾರಿ ಕಂಪನಿ ನಡೆದುಕೊಳ್ಳುತ್ತಿಲ್ಲ. ಎಲ್ಲವನ್ನೂ ರೈತರ ವಿರೋಧಿ ಧೋರಣೆ ಅನುಸರಿಸುತ್ತಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ವರದಿ ಮಾಡಲು ಶ್ರೀಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಖಾನಪೇಟೆಯ ಸರ್ಕಾರಿ ಶಾಲಾ ಆವರಣದಲ್ಲಿ ಭಾನುವಾರ ಕಾರ್ಖಾನೆಯ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಷೇರುದಾರರು ಕಾರ್ಖಾನೆ ಲೀಜ್‌ ಪಡೆದ ಚನ್ನೈ ಮೂಲದ ಇಐಡಿ ಪ್ಯಾರಿ ಕಂಪನಿ ವಿರುದ್ಧ ಕಿಡಿಕಾರಿದರು.

ಲೀಜ್‌ ಪಡೆದ ಆರಂಭದಲ್ಲಿ ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದ ಪ್ಯಾರಿ ಕಂಪನಿ ಸಿಬ್ಬಂದಿ ಈಗೀಗ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಷೇರುದಾರರ ಕಬ್ಬು ಮೊದಲಿಗೆ ಕಟಾವು ಮಾಡಬೇಕು. ಸ್ಥಳೀಯ ಕಬ್ಬು ಕಟಾವು ಗ್ಯಾಂಗಿನ ಬದಲಾಗಿ ಮಹಾರಾಷ್ಟ್ರದ ಗ್ಯಾಂಗ್‌ಗಳನ್ನು ಕರೆಯಿಸಬೇಕು ಎಂಬ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಆಡಳಿತ ಮಂಡಳಿ ಸಭೆ ಕರೆದಾಗಲೂ ಪ್ಯಾರಿ ಕಂಪನಿ ಸಿಬ್ಬಂದಿ ಸಹಕರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ADVERTISEMENT

ಒಂದು ವಾರದಲ್ಲಿ ಮಹಾರಾಷ್ಟ್ರದಿಂದ ಕಬ್ಬಿನ ಗ್ಯಾಂಗಗಳನ್ನು ಕರೆಯಿಸಿಕೊಂಡು ನಿಷ್ಪಕ್ಷಪಾತದಿಂದ ಕಬ್ಬು ಕಟಾವು ಮಾಡದಿದ್ದರೆ ಸಾಮಾನ್ಯ ಸಭೆಯಲ್ಲಿ ಸೇರಿದ ಎಲ್ಲ ಷೇರುದಾರರು ಮತ್ತು ಆಡಳಿತ ಮಂಡಳಿಯ ಸದಸ್ಯರು ಒಟ್ಟಾಗಿ ಕಾರ್ಖಾನೆ ಬೀಗ ಹಾಕಲಾಗುವುದು. ಇದನ್ನು ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರೇ ಕಾರ್ಖಾನೆಯನ್ನು ನಡೆಸಿಕೊಂಡು ಹೋಗುವುದಾಗಿ ಷೇರುದಾರರು ಎಚ್ಚರಿಸಿದರು.

ಖಾನಪೇಟೆ ಗ್ರಾಮದಲ್ಲಿ ಕಾರ್ಖಾನೆ ಆರಂಭಿಸಿದ್ದರಿಂದ ಗ್ರಾಮಸ್ಥರಿಗೆ ಕಾರ್ಖಾನೆಯ ಬೂದಿ ಹಾರುತ್ತಿದೆ. ಟ್ರ್ಯಾಕ್ಟರ್‌ಗಳನ್ನು ರಸ್ತೆಯ ಮೇಲೆಯೇ ನಿಲ್ಲಿಸುವುದರಿಂದ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಿದೆ. ಇಂಥ ಸಮಸ್ಯೆಗಳನ್ನು ಗ್ರಾಮಸ್ಥರು ಎದುರಿಸುತ್ತಿದ್ದರೂ 15 ತಿಂಗಳಾದ ಕಬ್ಬು ಕಟಾವು ಮಾಡುತ್ತಿಲ್ಲ. ಸಿಬ್ಬಂದಿ ರೈತರ ಮೂಗಿಗೆ ತುಪ್ಪ ಒರೆಸುವಂತ ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಷೇರುದಾರರು ಮತ್ತು ಆಡಳಿತ ಮಂಡಳಿ ಸದಸ್ಯರು ನೇರವಾಗಿ ಆರೋಪಿಸಿದರು.

ಸ್ಥಳೀಯ ಕಬ್ಬು ಕಟಾವು ಗ್ಯಾಂಗಿನ ಶ್ರಮಿಕರು, ಟ್ರ್ಯಾಕ್ಟರ್‌ ಮಾಲೀಕರು, ಕೋಯಿತಾ ಮಸೆಯುವವರು, ಸಂಬಂಧಿಕರ ಕಬ್ಬು ಸಾಗಿದ ನಂತರವೇ ಕಾರ್ಖಾನೆ ಆರಂಭಕ್ಕೆ ಷೇರು ನೀಡದ ರೈತರ ಕಬ್ಬನ್ನು ಕಟಾವು ಮಾಡಲಾಗುತ್ತಿದೆ. ಈ ಕುರಿತು ಆಡಳಿತ ಮಂಡಳಿ ಸೂಚನೆ ನೀಡುವ ಮಾತುಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ನಿರ್ದೇಶಕ ಮಲ್ಲಣ್ಣ ಯಾದವಾಡ ಅಸಹಾಯಕತೆ ತೋಡಿಕೊಂಡರು.

ಕಬ್ಬು ಕಟಾವು ಮಾಡಲು ಪ್ರತಿವರ್ಷ 100–150 ಗ್ಯಾಂಗಗಳನ್ನು ಮಹಾರಾಷ್ಟ್ರದಿಂದ ಕರೆಯಿಸಬೇಕು. ಸ್ಥಳೀಯ ಗ್ಯಾಂಗ್‌ಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಬಾರದು. ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಲು ಜಾಗ ಗೊತ್ತುಪಡಿಸಿ ಟ್ರಾಫಿಕ್‌ ಸಮಸ್ಯೆ ನಿವಾರಿಸಬೇಕು. ಷೇರುದಾರರ ಕಬ್ಬು ಮೊದಲಿಗೆ ಕಟಾವು ಮಾಡಬೇಕು. ಲೀಜ್‌ ಪಡೆದ ಪ್ಯಾರಿ ಕಂಪನಿ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಲು ಷೇರುದಾರರು ಸರ್ವಾನುಮತದ ನಿರ್ಣಯ ತೆಗೆದುಕೊಂಡರು.

ಕಾರ್ಖಾನೆ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತೊರಗಲ್‌ ಗಚ್ಚಿನಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿರ್ದೇಶಕ ಬಸವರಾಜ ಹಿರೇರಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಣ್ಣ ಯಾದವಾಡ ವಾರ್ಷಿಕ ವರದಿ ಓದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.