
ಮುಂಡಗೋಡ: ಪಡಿತರ ವಿತರಕರ ಸಮಸ್ಯೆಗಳು ಬಹಳಷ್ಟಿದ್ದು, ಅವುಗಳು ಸರ್ಕಾರದ ಮಟ್ಟದಲ್ಲಿ ಪರಿಪೂರ್ಣವಾಗಿ ಇತ್ಯರ್ಥವಾಗಿಲ್ಲ. ಪಡಿತರ ವಿತರಕರ 6 ತಿಂಗಳ ಕಮಿಷನ್ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣ ಡಿ.ನಾಯ್ಕ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಡಿತರ ವಿತರಕರ ಸಂಘದ ಸಮಾವೇಶ ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಂತರ, ಪತ್ರಕರ್ತರೊಂದಿಗೆ ಮಾತನಾಡಿದರು.
ಈ ಹಿಂದೆ ಪಡಿತರ ವಿತರಕರು ಮೃತಪಟ್ಟರೆ, ಅನುಕಂಪದ ಆಧಾರದ ಮೇಲೆ ಅವರ ಕುಟುಂಬದವರೇ ಪಡಿತರ ಅಂಗಡಿಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಆದರೆ, ಸರ್ಕಾರ ಇದನ್ನು ಬದಲಾವಣೆ ಮಾಡಿರುವುದರಿಂದ, ಅನೇಕ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಮೊದಲಿನ ನಿಯಮವನ್ನು ಮತ್ತೆ ಜಾರಿಗೆ ತರಬೇಕು. ಕಮಿಷನ್ ಹಣವನ್ನು 250ಕ್ಕೆ ಹೆಚ್ಚಿಸಬೇಕು. ಸ್ಮಾರ್ಟ್ ಪಡಿತರ ಅಂಗಡಿಗಳ ರಚನೆ ಮಾಡಲು ಕ್ರಮ ಕೈಗೊಳ್ಳಬೇಕು. ಪಡಿತರ ವಿತರಕರಿಗೆ ಆರೋಗ್ಯ ವಿಮೆ ಮಾಡುವಂತೆ ಆಗ್ರಹಿಸಿದರೂ, ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.
ಸಂಘದ ಕೋಶಾಧ್ಯಕ್ಷ ಡಿ.ಜಿ.ಶಿವಾನಂದಪ್ಪ ಮಾತನಾಡಿ, ಕಮಿಷನ್ ನೀಡುವ ವಿಚಾರದಲ್ಲಿ ಸರ್ಕಾರ ಗೊಂದಲ ಮಾಡುತ್ತಿದೆ. ಸ್ಪಷ್ಟವಾಗಿ ಮಾಹಿತಿ ನೀಡುತ್ತಿಲ್ಲ. ಈ ವಿಷಯದಲ್ಲಿ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾತನಾಡಿ, ಒಂದು ದೇಶ, ಒಂದು ಪಡಿತರ ಘೋಷಣೆಯಂತೆ, ದೇಶಾದ್ಯಂತ ಒಂದೇ ರೀತಿಯಾಗಿ ಕಮಿಷನ್ ನೀಡಬೇಕು ಎಂದು ಆಗ್ರಹಿಸಿದರು.
ಗೌರವಾಧ್ಯಕ್ಷ ಡಿ.ಎಮ್.ಹಾಲಸ್ವಾಮಿ ಮತ್ತು ರಾಜ್ಯ ಘಟಕದ ಉಪಾಧ್ಯಕ್ಷ ಅಬ್ದುಲ್ ರಜಾಕ್ ತಹಶೀಲ್ದಾರ್ ಮಾತನಾಡಿದರು. ತಿಪ್ಪೇಸ್ವಾಮಿ, ರಾಜು ಗೊಂದಿ, ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಘಟಕದ ಅಧ್ಯಕ್ಷ ಶ್ರೀಧರ ಡೋರಿ, ರಾಜ್ಯ ಸಂಘದ ಕಾರ್ಯದರ್ಶಿ ಸಿ.ಕೆ.ಅಶೋಕ, ಹರಿಹರ ತಾಲ್ಲೂಕು ಪಡಿತರ ಸಂಘದ ಅಧ್ಯಕ್ಷ ನಾಗರಾಜಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.