ADVERTISEMENT

ಕಾಲ್ತುಳಿತ ಪ್ರಕರಣ | ಲೋಪವೆಸಗಿದ ಎಲ್ಲರ ಮೇಲೆ ಕ್ರಮ ವಹಿಸಿದ್ದೇವೆ: ಎಚ್.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 8:25 IST
Last Updated 6 ಜೂನ್ 2025, 8:25 IST
<div class="paragraphs"><p>ಕಾಲ್ತುಳಿತ ದುರಂತ ಸಂಭವಿಸಿದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಚಪ್ಪಲಿಗಳ ರಾಶಿ</p></div>

ಕಾಲ್ತುಳಿತ ದುರಂತ ಸಂಭವಿಸಿದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಚಪ್ಪಲಿಗಳ ರಾಶಿ

   

ಪಿಟಿಐ

ಬೆಳಗಾವಿ: ‘ಬೆಂಗಳೂರಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡದ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ, ಪೊಲೀಸರು ಮಾತ್ರವಲ್ಲ; ಲೋಪವೆಸಗಿದ ಎಲ್ಲರ ಮೇಲೂ ಕ್ರಮ ವಹಿಸಿದ್ದೇವೆ. ತನಿಖೆ ಆರಂಭವಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ADVERTISEMENT

‘ಈ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿದ್ದು ಸರಿಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ, ಇಲ್ಲಿ ಶುಕ್ರವಾರ ಅವರು ಹೀಗೆ ಪ್ರತಿಕ್ರಿಯಿಸಿದರು.

‘ಕಾಲ್ತುಳಿತ ಪ್ರಕರಣದಲ್ಲಿ ಏನು ಕ್ರಮ ಕೈಗೊಳ್ಳಬೇಕಿತ್ತೋ, ಅದನ್ನು ಕೈಗೊಂಡಿದ್ದೇವೆ. ಆರ್‌ಸಿಬಿ ತಂಡದ ಮುಖ್ಯಸ್ಥರ ಬಂಧನಕ್ಕೆ ಸೂಚನೆ ನೀಡಿದ್ದೇವೆ. ತನಿಖೆಗಾಗಿ ಏಕಸದಸ್ಯ ಆಯೋಗ ರಚಿಸಿದ್ದೇವೆ. ತರಾತುರಿಯಲ್ಲಿ ಸಂಭ್ರಮಾಚರಣೆಗೆ ಅವಕಾಶ ಕೊಟ್ಟಿದ್ದೇವೆಯೇ ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ.​ ತನಿಖೆ ನಡೆಯುತ್ತಿರುವ ಕಾರಣ ಘಟನೆ ಬಗ್ಗೆ ನಾನು ವಿಶ್ಲೇಷಿಸುವುದಿಲ್ಲ’ ಎಂದರು.

‘ವಿವಿಧ ಟೂರ್ನಿಗಳ ಸಂದರ್ಭ ಮುಂಬೈ, ಹೈದರಾಬಾದ್‌ನಲ್ಲಿ ನಡೆದ ಸಂಭ್ರಮಾಚರಣೆಗೆ ಈ ಘಟನೆ ಹೋಲಿಸಬಾರದು‘ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

​ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ, ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿಯವರು ಒತ್ತಾಯಿಸುತ್ತಿರುವ ಕುರಿತ ಪ್ರಶ್ನೆಗೆ, ‘ಘಟನೆ ಕುರಿತು ಮಾಹಿತಿ ಗೊತ್ತಾದ ತಕ್ಷಣ ಸಿದ್ದರಾಮಯ್ಯ ಆಸ್ಪತ್ರೆಗೆ ಹೋ​ಗಿದ್ದಾರೆ. ಶಿವಕುಮಾರ್‌ ಅವರು ನೆರವಿಗೆ ಧಾವಿಸಿದ್ದಾರೆ. ​ಈ ಬಗ್ಗೆ ಬಿಜೆಪಿಯವರು ಖಂಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ​ಈ ವಿಷಯ ರಾಜಕೀಯವಾಗಿ ಬಳಸಿಕೊಳ್ಳಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ​ಆಗುತ್ತದೆ’ ​ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.