
ಹಂಪಿ ಸಮೀಪ ಶುಕ್ರವಾರ ನಡೆದ ಅಂಗವಿಕಲರ ಕಬಡ್ಡಿಯ ಸನ್ನಿವೇಶ
–ಪ್ರಜಾವಾಣಿ ಚಿತ್ರ/ ಸಿ.ಶಿವಾನಂದ
ಹಂಪಿ (ವಿಜಯನಗರ): ಹಂಪಿ ಉತ್ಸವದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಅಂಗವಿಕಲರ ಕಬಡ್ಡಿಯನ್ನು ವೀಕ್ಷಿಸಲು ನೂರಾರು ಜನ ಸೇರಿದ್ದರು. ಹೊಸ ಮಲಪನಗುಡಿಯ ವಿದ್ಯಾರಣ್ಯ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ನಡೆದ ಮ್ಯಾಟ್ ಸಿಟ್ಟಿಂಗ್ ಕಬಡ್ಡಿಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಕ್ರೀಡಾಪಟುಗಳು ತೋರಿದ ಕ್ರೀಡಾ ಮನೋಭಾವ ಅನುಕಂಪ ಬೇಡ, ಅವಕಾಶ ಕೊಡಿ ಎನ್ನುವಂತಿತ್ತು. ಮಂಡಿಯಲ್ಲಿ ತೆವಳುತ್ತಾ ಕೈ ಮೂಲಕವೇ ಪಾಯಿಂಟ್ ಗಳಿಸುವ ಪರಿ ಹುಬ್ಬೇರಿಸುವಂತಿತ್ತು.
ಬೆಳಗಾವಿ, ಕೊಪ್ಪಳ, ಹರಪನಹಳ್ಳಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದವು.
ಆರಂಭಿಕ ಲೀಗ್ ಪಂದ್ಯದಲ್ಲಿ ಬೆಳಗಾವಿ ಮತ್ತು ಕೊಪ್ಪಳ ತಂಡಗಳ ಮಧ್ಯೆ ನಡೆಯಿತು. ಪಂದ್ಯವನ್ನು ಸಚಿವ ಜಮೀರ್ ಅಹಮದ್ ಖಾನ್ ವೀಕ್ಷಿಸಿದ್ದರಿಂದ ಪಂದ್ಯಕ್ಕೆ ಭಾರಿ ಮಹತ್ವ ತಂದಿತ್ತು. ಒಂದು ರೈಡ್‍ನಲ್ಲಿ ಅತಿಹೆಚ್ಚು ಅಂಕಗಳಿಸುವ ತಂಡಕ್ಕೆ ₹50 ಸಾವಿರ ನಗದು ನೀಡುವುದಾಗಿ ಸಚಿವರು ಘೋಷಿಸಿದ್ದೇ ತಡ, ಎರಡೂ ತಂಡಗಳಲ್ಲೂ ಸಂಚಲನ ಉಂಟಾಯಿತು. ಬೆಳಗಾವಿಯ ರಾಹುಲ್ ಕಾಳೆ ರೈಡ್ ಮಾಡಿ ತಂಡಕ್ಕೆ ಜಯ ತಂದರು. ಸಚಿವರು ಸ್ಥಳದಲ್ಲಿಯೇ ₹50 ಸಾವಿರ ನಗದು ನೀಡಿದರು. ಕೊಪ್ಪಳ ತಂಡಕ್ಕೆ ₹25 ಸಾವಿರ ನೀಡಿದರು.
ಹೊಸಪೇಟೆ ಹಾಗೂ ಹರಪನಹಳ್ಳಿ ತಂಡಗಳ ನಡುವೆ ನಡೆದ ಲೀಗ್ ಪಂದ್ಯದಲ್ಲಿ ಹರಪನಹಳ್ಳಿ ತಂಡ ಜಯಗಳಿಸಿತು, ಮತ್ತೊಂದು ಬೆಳಗಾವಿ ಮತ್ತು ಹೂವಿನಹಡಗಲಿ ನಡುವಿನ ಪಂದ್ಯದಲ್ಲಿ ಬೆಳಗಾವಿ ವಿಜಯದ ನಗೆ ಬೀರಿತು. ಅಂತಿಮ ಲೀಗ್ ಪಂದ್ಯ ಹರಪನಹಳ್ಳಿ ಮತ್ತು ಹಗರಿಬೊಮ್ಮನಳ್ಳಿ ನಡುವೆ ನಡೆಯಿತು. ಹರಪನಹಳ್ಳಿ ತಂಡ ಜಯಗಳಿಸಿ ಫೈನಲ್ ಹಂತಕ್ಕೆ ತಲುಪಿತು.
ಅಂತಿಮ ಫೈನಲ್ ಹಣಾಹಣಿಯಲ್ಲಿ ಬೆಳಗಾವಿ ತಂಡ ಹರಪನಹಳ್ಳಿ ತಂಡವನ್ನು 15-11 ಅಂಕಗಳ ಅಂತರದಲ್ಲಿ ಸೋಲುಣಿಸಿತು. ರಾಹುಲ್ ಅತ್ಯುತ್ತಮವಾಗಿ ರೈಡ್ ಮಾಡಿದರೆ, ಸದಾಶಿವ ಟ್ಯಾಕಲ್ ಮಾಡಿ ಪಂದ್ಯವನ್ನು ಗೆಲುವಿನ ದಡ ಸೇರಿಸಿದರು. ಪಂದ್ಯ ಭಾರಿ ರೋಚಕತೆಯಿಂದ ಕೂಡಿತ್ತು, ಹರಪನಹಳ್ಳಿ ತಂಡ ವಿರೋಚಿತ ಹೋರಾಟ ನಡೆಸಿ ಸೋಲು ಒಪ್ಪಿಕೊಂಡಿತು. ನೆರೆದಿದ್ದ ಕ್ರೀಡಾಪ್ರೇಮಿಗಳು ಕೇಕೆ, ಶಿಳ್ಳೆಗಳ ಮೂಲಕ ಎರಡೂ ತಂಡಗಳ ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಜಯಗಳಿಸಿದ ತಂಡಕ್ಕೆ ಜಿಲ್ಲಾಡಳಿತ ₹20 ಸಾವಿರ ನಗದು, ರನ್ನರ್ ಅಪ್ ತಂಡಕ್ಕೆ ₹10 ಸಾವಿರ ನಗದು ಬಹುಮಾನ ನೀಡಲಾಯಿತು.
ಶಿವಕುಮಾರ್, ಜಿ.ಗೋಪಿ, ಪ್ರಶಾಂತ್, ಶ್ರೀಧರ್ ನಿರ್ಣಾಯಕರಾಗಿದ್ದರು, ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ ಉಮೇಶ್, ದೈಹಿಕ ಶಿಕ್ಷಣ ಶಿಕ್ಷಕ ಅಶೋಕ್ ಕ್ರೀಡಾಕೂಡದ ಉಸ್ತುವಾರಿ ವಹಿಸಿಕೊಂಡಿದ್ದರು.
ಹಂಪಿ ಉತ್ಸವದ ಅಂಗವಾಗಿ ಹೊಸ ಮಲಪನ ಗುಡಿಯ ವಿದ್ಯಾರಣ್ಯ ಪ್ರೌಢಶಾಲೆಯ ಮೈದಾನದಲ್ಲಿ ನಡೆದ ಅಂಗವಿಕಲರ ಸಿಟ್ಟಿಂಗ್ ಕಬಡ್ಡಿಯ ಫೈನಲ್ ಪಂದ್ಯದಲ್ಲಿ ಬೆಳಗಾವಿಯ ತಂಡ ಜಯ ಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.