ADVERTISEMENT

ಕೂಡಿ ಬಾಳುತ್ತಿದೆ ಮಾನೆ ಕುಟುಂಬ; ಕೃಷಿಯಲ್ಲಿ ವರ್ಷಕ್ಕೆ ₹1 ಕೋಟಿ ಲಾಭ ಗಳಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 6:47 IST
Last Updated 3 ಜನವರಿ 2025, 6:47 IST
ಚಿಕ್ಕೋಡಿ ಹೊರವಲಯದ ಮಾನೆ ಅವರ ತೋಟದಲ್ಲಿ ಹುಲುಸಾಗಿ ಬೆಳೆದ ಟೊಮೆಟೊ
ಚಿಕ್ಕೋಡಿ ಹೊರವಲಯದ ಮಾನೆ ಅವರ ತೋಟದಲ್ಲಿ ಹುಲುಸಾಗಿ ಬೆಳೆದ ಟೊಮೆಟೊ   

ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ 36 ಎಕರೆ ಜಮೀನು ಹೊಂದಿರುವ, 50 ಜನರ ಅವಿಭಕ್ತ ಕುಟುಂಬ ಈಗ ಕೃಷಿಯಲ್ಲೂ ಹಿರಿಮೆ ಸಾಧಿಸಿದೆ. ಮಾನೆ ಕುಟುಂಬದವರು ಸಮಗ್ರ ಕೃಷಿ, ಅರಣ್ಯ ಕೃಷಿ, ತೋಟಗಾರಿಕೆ, ಸಾವಯವ ಕೃಷಿ, ಆಧುನಿಕ ಕೃಷಿ ಸೇರಿದಂತೆ ಹಲವು ಪ್ರಯೋಗಗಳ ಮೂಲಕ ಮಾದರಿಯಾಗಿದ್ದಾರೆ.

ಅನಿಲ ಮಾನೆ, ಜ್ಯೋತಿಬಾ ಮಾನೆ, ಶ್ರೀಕಾಂತ ಮಾನೆ, ಶ್ರೀಧರ ಮಾನೆ, ಮಾರುತಿ ಮಾನೆ ಸಹೋದರರು ಜೊತೆಗೂಡಿ ಈ ಸಾಧನೆ ಮಾಡಿದ್ದಾರೆ. ಪಟ್ಟಣದ ಜೀವನಕ್ಕಿಂತ ನೆಮ್ಮದಿ ನೀಡುವ ಕೃಷಿಯೇ ಇವರಿಗೆ ಅಚ್ಚು ಮೆಚ್ಚು.

12 ಎಕರೆ ಕಬ್ಬು, 4 ಎಕರೆ ವೀಳ್ಯದೆಲೆ, 3 ಎಕರೆ ಟೊಮೆಟೊ, 2 ಎಕರೆ ಮೆಣಸಿನಕಾಯಿ, 2 ಎಕರೆ ತರಕಾರಿ, ಹೊಲದ ಬದುವಿನಲ್ಲಿ 100ಕ್ಕೂ ಹೆಚ್ಚು ತೆಂಗು, ಮಾವು, ಹುಣಸೆ, ಪೇರಲ ಹಾಕಲಾಗಿದೆ. ಮನೆಗೆ ಬೇಕಾಗುವ ಗೋಧಿ, ಮೆಕ್ಕೆಜೋಳ, ಶೇಂಗಾ, ಕಡಲೆ ಮುಂತಾದ ಬೆಳೆಯನ್ನೂ ಬೆಳೆಯಲಾಗುತ್ತಿದೆ. ನಾಲ್ಕು ಬಾವಿಗಳು, 4 ಕೊಳವೆಬಾವಿಗಳು ಇವೆ. ಹನಿ ನೀರಾವರಿ ಮೂಲಕವೇ ನೀರು ಕೊಡಲಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ನೀರಿನ ತೊಂದರೆ ಬರುವ ಪ್ರಮೇಯವೇ ಇವರಿಗಿಲ್ಲ.

ADVERTISEMENT

ಇದೀಗ 1 ಎಕರೆ ಪ್ರದೇಶದಲ್ಲಿ ಹಾಕಿದ ಟೊಮೆಟೊ ಕೊಯ್ಲಿಗೆ ಬಂದಿದ್ದು, 30 ಟನ್ ಇಳುವರಿಯ ನಿರೀಕ್ಷೆ ಹೊಂದಲಾಗಿದೆ. ಬೀಜ, ಗೊಬ್ಬರ, ಕಳೆ ತೆಗೆಯುವುದು ಸೇರಿದಂತೆ ₹1 ಲಕ್ಷದವರೆಗೆ ಖರ್ಚು ಮಾಡಲಾಗಿದೆ. ಒಂದು ಎಕರೆಯಿಂದ ₹7.5 ಲಕ್ಷ ಆದಾಯದ ನಿರೀಕ್ಷೆ ಹೊಂದಲಾಗಿದೆ.

4 ಎಕರೆ ಪ್ರದೇಶದಲ್ಲಿ ಬೇರೆ ಬೇರೆ ಪ್ಲಾಟ್‌ನಲ್ಲಿ ಬೆಳೆದ ವೀಳ್ಯದೆಲೆಯು ಪ್ರತಿ ಎಕರೆಗೆ ₹4 ಲಕ್ಷದಂತೆ ಒಟ್ಟು ₹20 ಲಕ್ಷ ಆದಾಯ ಬಂದಿದೆ. ಪ್ರತಿ ಎಕರೆಗೆ 50 ಟನ್ ಇಳುವರಿ ಬಂದು, ಟನ್ ಕಬ್ಬಿಗೆ ₹3,000 ದರ ಸಿಕ್ಕರೂ 12 ಎಕರೆ ಪ್ರದೇಶದಲ್ಲಿ ಬೆಳದ ಕಬ್ಬಿಗೆ ₹18 ಲಕ್ಷ ಆದಾಯ ಸಿಗುವ ಸಾಧ್ಯತೆ ಇದೆ.

20 ಎಮ್ಮೆ, 5 ದೇಸಿ ಹಸುಗಳನ್ನು ಸಾಕಿದ್ದು, ಸಿಗುವ ಹಾಲನ್ನು ಮನೆಗೆ ಬಳಸುತ್ತಾರೆ. 2 ಹೋರಿ, 12 ಮೇಕೆಗಳು ಇವೆ. ಜಾನುವಾರುಗಳಿಂದ ದೊರೆಯುವ ಗೊಬ್ಬರವನ್ನು ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಸರದಿಯಂತೆ ಜಮೀನಿಗೆ ಹಾಕುತ್ತಿದ್ದು, ವರ್ಷದಿಂದ ವರ್ಷಕ್ಕೆ ಇಳುವರಿ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ. ಜೀವನೋಪಾಯದ ಖರ್ಚು ತೆಗೆದು ಏನಿಲ್ಲವೆಂದರೂ ₹1ಕೋಟಿ ಆದಾಯ ಕೈ ಸೇರುತ್ತದೆ ಎಂಬುದು ಕುಟುಂಬದ ಲೆಕ್ಕಾಚಾರ.

ಮಾನೆ ಕುಟುಂಬ ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಯೊಂದಿಗೆ ಆಧುನಿಕ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡಿದೆ.

ಗ್ರಾಮೀಣ ಕೃಷಿ ಬದುಕೇ ನನಗೆ ನನ್ನ ಎಲ್ಲ ಸಹೋದರರಿಗೂ ಇಷ್ಟ. ಆದಾಯ ಎಷ್ಟು ಬರುತ್ತದೆ ಎಂಬುದಕ್ಕಿಂತ ಕೃಷಿಯಿಂದ ಬದುಕು ನೆಮ್ಮದಿಯಾಗಿದೆ.
–ಅನಿಲ ಮಾನೆ, ಪ್ರಗತಿಪರ ಕೃಷಿಕ
ವಯಸ್ಸು 77 ಆದರೂ ಹೊಲದಲ್ಲಿ ಕೆಲಸ ಮಾಡುವ ಶಕ್ತಿ ಉಳಿದಿದೆ. ಇದಕ್ಕೆ ಕಾರಣ ಕೃಷಿ ಕಾಯಕ. ಮಾನಸಿಕ ಹಾಗೂ ದೈಹಿಕ ಸದೃಢತೆ ಸಿಕ್ಕಿದೆ.
–ಶ್ರೀಕಾಂತ ಮಾನೆ, ಹಿರಿಯ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.