ADVERTISEMENT

ಉತ್ತರದಲ್ಲಿ ಹಬ್ಬಿದ ಕಬ್ಬಿನ ‘ಕಿಚ್ಚು’: ಟನ್‌ಗೆ ₹3,500 ದರ ನಿಗದಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 20:52 IST
Last Updated 6 ನವೆಂಬರ್ 2025, 20:52 IST
ಕಬ್ಬು ದರ ಪರಿಷ್ಕರಣೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ ಬಳಿ ರೈತರು ನಡೆಸಿದ ಅನಿರ್ದಿಷ್ಟಾವಧಿ ಮುಷ್ಕರ, ಮಂಗಳವಾರ ಡ್ರೋನ್‌ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕಬ್ಬು ದರ ಪರಿಷ್ಕರಣೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ ಬಳಿ ರೈತರು ನಡೆಸಿದ ಅನಿರ್ದಿಷ್ಟಾವಧಿ ಮುಷ್ಕರ, ಮಂಗಳವಾರ ಡ್ರೋನ್‌ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ   

ಬೆಳಗಾವಿ/ಬಾಗಲಕೋಟೆ: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸ ಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಗುರ್ಲಾಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ ಉತ್ತರ ಕರ್ನಾಟಕದ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಿಗೂ ಹೋರಾಟ ಹಬ್ಬಿದೆ. 

ರೈತರ ಹೋರಾಟ ಬೆಂಬಲಿಸಿ ಗುರುವಾರ ಮೂಡಲಗಿ ಬಂದ್‌ ಮಾಡಲಾಯಿತು. ವ್ಯಾಪಾರಸ್ಥರು, ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಗೆ ಧುಮುಕಿದರು. 

ಗುರ್ಲಾಪುರದ ರಾಜ್ಯ ಹೆದ್ದಾರಿಯಲ್ಲಿ ಧರಣಿ ನಡೆಸುತ್ತಿದ್ದ ರೈತರನ್ನು ಸಚಿವ ಶಿವಾನಂದ ಪಾಟೀಲ ಭೇಟಿಯಾಗಿ ಮಾತುಕತೆಗೆ ಪ್ರಯತ್ನಿಸಿದರು. ಆದರೆ ಅವರಿಗೆ ಮಾತನಾಡುವು ದಕ್ಕೆ ಬಿಡದೇ ಪ್ರತಿಭಟನಕಾರರು ಕೂಗಾಡಿದರು. ಮಧ್ಯ ಪ್ರವೇಶಿಸಿದ ರೈತ ಮುಖಂಡರು, ‘ಸಚಿವರಿಗೆ ಮಾತಾಡಲು ಬಿಡಿ’ ಎಂದು ಮನವಿ ಮಾಡಿದರು.

ADVERTISEMENT

ನಂತರ ಮಾತು ಮುಂದುವರಿಸಿದ ಶಿವಾನಂದ ಪಾಟೀಲ, ‘ರೈತರ ವಿಚಾರದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲ. ಈ ವಿಷಯದ ಬಗ್ಗೆ ಚರ್ಚೆ ಮಾಡಬೇಕಿದೆ. ಹೆದ್ದಾರಿ ಬಂದ್‌ ಮಾಡುವುದನ್ನು ಎರಡು ದಿನ ಮುಂದಕ್ಕೆ ಹಾಕಿ’ ಎಂದು ಕೋರಿದರು. ‘ಎರಡು ದಿನ ಗಡುವು ಕೊಡುತ್ತೇವೆ. ಇಲ್ಲಿ ಧರಣಿ ನಿಲ್ಲಿಸುವುದಿಲ್ಲ. ಗಡುವು ಮುಗಿದ ಮೇಲೆ ಮತ್ತೆ ಗಡುವು ಕೇಳಲು ಬಂದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ರೈತ ಮುಖಂಡರು ಎಚ್ಚರಿಸಿದರು.

ಸಚಿವರು ಮಾತು ಮುಗಿಸಿ ಧರಣಿ ಸ್ಥಳದಿಂದ ಹೊರಡುತ್ತಿದ್ದಂತೆಯೇ ಜನಸಂದಣಿ ಕಡೆಯಿಂದ ತೂರಿಬಂದ ಚಪ್ಪಲಿ ಸಚಿವರ ಕಾರಿನ ಮೇಲೆ ಬಿದ್ದಿತು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಲೋಕಾಪುರ, ಕಮತಗಿ, ಬೀಳಗಿ ತಾಲ್ಲೂಕಿನ ಕಾತರಕಿಯಲ್ಲಿ‌ ರೈತರು ರಸ್ತೆ ತಡೆ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಬ್ಬಿಗೆ ದರ ನಿಗದಿ ಮಾಡಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರೆ ಯಲಿದೆ ಎಂದು ಎಚ್ಚರಿಸಿದರು.  

ಕಲಬುರಗಿ ಜಿಲ್ಲೆಯ ಅಫಜಲಪುರ ದಲ್ಲೂ ರೈತರು ಪ್ರತಿಭಟನೆ ನಡೆಸಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆದಿದ್ದರಿಂದ ವಾಹನ ಸಂಚಾರ
ಅಸ್ತವ್ಯಸ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.