
ಚಿಕ್ಕೋಡಿ: ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 12 ಸಕ್ಕರೆ ಕಾರ್ಖಾನೆಗಳಿದ್ದು, ಪ್ರತಿ ವರ್ಷ 10 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಕಬ್ಬು ನುರಿಸುತ್ತವೆ. ಇಷ್ಟೊಂದು ಪ್ರಮಾಣದಲ್ಲಿ ಕಬ್ಬು ಕಟಾವು ಮಾಡಿ ಕಾರ್ಖಾನೆಗಳಿಗೆ ಸಾಗಿಸುವುದು ರೈತರಿಗೆ ಸವಾಲಿನ ಕೆಲಸವೇ ಆಗಿದೆ. ಲಾರಿ, ಟ್ರ್ಯಾಕ್ಟರ್ ಹಾಗೂ ಎತ್ತಿನಗಾಡಿಗಳ ಮೂಲಕ ಕಟಾವು ಮಾಡಿದ ಕಬ್ಬನ್ನು ಕಾರ್ಖಾನೆಗಳಿಗೆ ಸಾಗಾಟ ಮಾಡಲಾಗುತ್ತದೆ. ವಾಹನಗಳಲ್ಲೂ ಮಿತಿಗಿಂತ ಹೆಚ್ಚು ಲೋಡ್ ಮಾಡುವುದು ಸಹಜ. ಆದರೆ, ಎತ್ತುಗಳಿಗೂ ಹೆಚ್ಚು ಹೊರೆ ಹೊರಿಸುವ ಮೂಲಕ ಶೋಷಣೆ ಮಾಡುತ್ತಿರುವುದು ನಡೆದೇ ಇದೆ.
ಎತ್ತುಗಳು ಕಬ್ಬು ಕಟಾವು ಮಾಡುವ ನಾಲ್ಕು ತಿಂಗಳಲ್ಲಿ ನಿತ್ಯ ನರಕಯಾತನೆ ಅನುಭವಿಸುತ್ತವೆ. ರಾಜ್ಯದ ವಿಜಯಪುರ, ಬಾಗಲಕೋಟೆ ಹಾಗೂ ಮಹಾರಾಷ್ಟ್ರದ ಬೀಡ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಬ್ಬು ಕಟಾವು ಮಾಡಲು ಬರುವ ಕಾರ್ಮಿಕರು ತಮ್ಮೊಂದಿಗೆ ಎತ್ತು ಹಾಗೂ ಗಾಡಿಗಳನ್ನು ತರುತ್ತಾರೆ.
ಹೀಗೆ ಕಬ್ಬು ಕಟಾವು ಮಾಡಿ ಸಕ್ಕರೆ ಕಾರ್ಖಾನೆಗಳಿಗೆ ಕಳುಹಿಸಲು ಪ್ರತಿ ಎತ್ತಿನಗಾಡಿಯವರು 3 ಟನ್‌ಗಿಂತ ಹೆಚ್ಚಿನ ಪ್ರಮಾಣದ ಕಬ್ಬನ್ನು ಸಾಗಾಟ ಮಾಡಬಾರದು ಎಂಬ ಮಿತಿಯನ್ನು ಪಶು ಸಂಗೋಪನೆ ಇಲಾಖೆ ನಿಗದಿ ಮಾಡಿದೆ. ಇದನ್ನು ಲೆಕ್ಕಿಸದೇ ಕಬ್ಬು ಕಟಾವು ಮಾಡಲು ಆಗಮಿಸಿರುವ ಬಹುತೇಕ ಕಬ್ಬು ಕಟಾವು ಕಾರ್ಮಿಕರು ಇದಕ್ಕೂ ಹೆಚ್ಚಿನ ಭಾರದ ಕಬ್ಬನ್ನು ಎತ್ತಿನಗಾಡಿಗಳ ಮೂಲಕ ಕಾರ್ಖಾನೆಗಳಿಗೆ ಸಾಗಾಟ ಮಾಡುವುದರಿಂದ ಎತ್ತುಗಳು ಭಾರಕ್ಕೆ ನಲುಗುತ್ತಿವೆ.
ಕಬ್ಬಿನ ಗದ್ದೆಯಿಂದ ಕಬ್ಬು ಸಾಗಾಟ ಮಾಡುವಾಗ ಎತ್ತಿನಗಾಡಿಯನ್ನು ಎಳೆಯಲು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತದೆ. ಎತ್ತಿನಗಾಡಿಯ ನೊಗಕ್ಕೆ ಹಗ್ಗ ಬಿಗಿದು ಟ್ರ್ಯಾಕ್ಟರ್ ಮೂಲಕ ಎತ್ತಿನ ಗಾಡಿಯನ್ನು ಎಳೆದು ರಸ್ತೆಗೆ ತಂದು ಬಿಡಲಾಗುತ್ತದೆ ಎಂದರೆ ಎಷ್ಟೊಂದು ಪ್ರಮಾಣದಲ್ಲಿ ಎತ್ತಿನಗಾಡಿಯಲ್ಲಿ ಕಬ್ಬುಸಾಗಾಟ ಮಾಡಲಾಗುತ್ತದೆ ಎಂದು ತಿಳಿಯಬಹುದು. ಕಬ್ಬು ಕಟಾವು ಮಾಡುವ ಕಾರ್ಮಿಕರೇ ಹೇಳುವಂತೆ; ಒಂದೊಂದು ಎತ್ತಿನಗಾಡಿಯಲ್ಲಿ 3ರಿಂದ 4 ಟನ್‌ಗೂ ಹೆಚ್ಚು ಕಬ್ಬು ಸಾಗಾಟ ಮಾಡಲಾಗುತ್ತದೆ. ಇಷ್ಟೊಂದು ಭಾರದ ಕಬ್ಬನ್ನು 5ರಿಂದ 10 ಕಿ.ಮೀ ದೂರದಲ್ಲಿರುವ ಕಾರ್ಖಾನೆಗಳಿಗೆ ಎಳೆದೊಯ್ಯಲು ಎತ್ತುಗಳು ಪಡುವ ಕಷ್ಟ ದೇವರಿಗೇ ಪ್ರೀತಿ ಎನ್ನುವುದು ಪ್ರಾಣಿ ಪ್ರಿಯರ ದೂರು.
ಗಾಡಿಗಳನ್ನು ಎಳೆಯುವ ಎತ್ತುಗಳು ಹೊತ್ತ ನೊಗಕ್ಕೆ ಕತ್ತಿಗೆ ಚುಚ್ಚುವಂತೆ ಮುಳ್ಳಿನ ಜತಿಗೆಯನ್ನು ಹಾಕಲಾಗಿರುತ್ತದೆ. ಹೀಗಾಗಿ ಕೆಲವೊಂದು ಎತ್ತುಗಳ ಕತ್ತಿನಿಂದ ರಕ್ತ ಜಿಣುಗುತ್ತಿರುವುದುನ್ನು ನೋಡಬಹುದು. ಕಬ್ಬು ಕಟಾವು ಮಾಡುವ ಜಾಗದಲ್ಲಿ ತೂಕದ ಯಂತ್ರ ಇಲ್ಲದೇ ಇರುವುದರಿಂದ ಗಾಡಿಯಲ್ಲಿ ಎಷ್ಟು ಕಬ್ಬು ಹೇರಲಾಗಿದೆ ಎಂಬ ಅಂದಾಜು ಸಿಗುವುದಿಲ್ಲ.
ಹೀಗಾಗಿ ಕಬ್ಬು ಕಟಾವು ಕಾರ್ಮಿಕರು ವಿಪರೀತವಾಗಿ ಭಾರ ಹೇರುವ ಮೂಲಕ ಎತ್ತುಗಳು ನಲುಗುವುದು ಒಂದೆಡೆಯಾದರೆ, ಕಬ್ಬು ಕಟಾವು ಮಾಡುವ ಹಂಗಾಮು ಮುಗಿದ ಬಳಿಕ ಎತ್ತುಗಳನ್ನು ಕಸಾಯಿಖಾನೆಯವರಿಗೆ ಮಾರಾಟ ಮಾಡುವುದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ ಎಂಬುದು ಜನರ ದೂರು.
ಎತ್ತುಗಳಿಗೆ ಹಚ್ಚಿನ ಭಾರ ಹೊರಿಸುವ ಕುರಿತು ಸಕ್ಕರೆ ಕಾರ್ಖಾನೆಗಳು ಜಿಲ್ಲಾಡಳಿತ ಪಶುಸಂಗೋಪನೆ ಇಲಾಖೆ ಜಾಗೃತಿ ಮೂಡಿಸಬೇಕಿದೆಚಂದ್ರಕಾಂತ ಹುಕ್ಕೇರಿ ಸಾಮಾಜಿಕ ಕಾರ್ಯಕರ್ತ
ಎತ್ತಿನಗಾಡಿಯಲ್ಲಿ 3 ಟನ್ ಕಬ್ಬು ಹೇರಲು ಮಿತಿ ಇದೆ. ಆದಾಗಿಯೂ ಹಲವು ಕಡೆಗೆ ಹೆಚ್ಚಿನ ಭಾರ ಹೇರುವುದು ಕಂಡು ಬಂದಿದೆ. ಈ ಕುರಿತು ಜಾಗೃತಿ ಮೂಡಿಸಲಾಗುವುದುಟಿ.ಎಸ್. ಘಂಟಿ ತಾಲ್ಲೂಕು ಪಶು ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.