ADVERTISEMENT

ತೊಗರಿ ಖರೀದಿ ಕೇಂದ್ರ | ಬಾರದ ರೈತರು: 14 ಜಿಲ್ಲೆಗಳ ಪೈಕಿ 8ರಲ್ಲಿ ಮಾತ್ರ ಮಾರಾಟ

ಇಮಾಮ್‌ಹುಸೇನ್‌ ಗೂಡುನವರ
Published 27 ಫೆಬ್ರುವರಿ 2026, 0:06 IST
Last Updated 27 ಫೆಬ್ರುವರಿ 2026, 0:06 IST
ಅಥಣಿಯಲ್ಲಿ ತೊಗರಿ ಖರೀದಿಗಾಗಿ ತೆರೆದಿರುವ ಕೇಂದ್ರ 
ಅಥಣಿಯಲ್ಲಿ ತೊಗರಿ ಖರೀದಿಗಾಗಿ ತೆರೆದಿರುವ ಕೇಂದ್ರ    

ಬೆಳಗಾವಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ತೊಗರಿ ಖರೀದಿಗೆಂದೇ ರಾಜ್ಯ ಸರ್ಕಾರವು 14 ಜಿಲ್ಲೆಗಳಲ್ಲಿ ಒಟ್ಟು 567 ಖರೀದಿ ಕೇಂದ್ರಗಳನ್ನು ತೆರೆದಿದೆ. ಎಫ್‌ಎಕ್ಯೂ ಗುಣಮಟ್ಟದ ತೊಗರಿಗೆ ಕ್ವಿಂಟಲ್‌ಗೆ ₹ 8 ಸಾವಿರ ದರ ನಿಗದಿಪಡಿಸಿದೆ.

ಖರೀದಿ ಕೇಂದ್ರಗಳಲ್ಲಿ ಈವರೆಗೆ 97,956 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಈವರೆಗೆ 10,922 ರೈತರು ಮಾತ್ರ 1.72 ಲಕ್ಷ ಕ್ವಿಂಟಲ್‌ ತೊಗರಿ ಮಾರಿದ್ದಾರೆ. ಉಳಿದ ರೈತರು ಆಸಕ್ತಿ ತೋರುತ್ತಿಲ್ಲ.

ಕಳೆದ ವರ್ಷ ಕೇಂದ್ರ ಸರ್ಕಾರವು ಎಂಎಸ್‌ಪಿ ಅಡಿ ಕ್ವಿಂಟಲ್‌ಗೆ ₹7,550 ದರ ನಿಗದಿಪಡಿಸಿತ್ತು. ರಾಜ್ಯ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ₹450 ಪ್ರೋತ್ಸಾಹಧನ ಘೋಷಿಸಿತ್ತು. ಒಟ್ಟಾರೆ ಕ್ವಿಂಟಲ್‌ಗೆ ₹8 ಸಾವಿರ ದರ ಸಿಕ್ಕಿತ್ತು. 6 ಲಕ್ಷ ಕ್ವಿಂಟಲ್‌ಗೂ ಹೆಚ್ಚು ಖರೀದಿ ಆಗಿತ್ತು.

ADVERTISEMENT

ಈ ಸಲ ಖರೀದಿ ಪ್ರಕ್ರಿಯೆ ಮುಗಿಯಲು ಇನ್ನೂ 18 ದಿನಗಳಷ್ಟೇ (ಮಾರ್ಚ್‌ 16 ಕೊನೆಯ) ಬಾಕಿ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಲ ಖರೀದಿ ಪ್ರಮಾಣ ಕುಸಿಯುವ ಸಾಧ್ಯತೆ ಹೆಚ್ಚಿದೆ.

ಎಂಟೇ ಜಿಲ್ಲೆಗಳಲ್ಲಿ ಖರೀದಿ

ಬೆಳಗಾವಿ, ಬೀದರ್‌, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಕಲಬುರಗಿ, ಯಾದಗಿರಿ, ಬಾಗಲಕೋಟೆ, ಬಳ್ಳಾರಿ, ಕೋಲಾರ, ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಆದರೆ, ಫೆ.26ರವರೆಗೆ ಎಂಟೇ ಜಿಲ್ಲೆಗಳಲ್ಲಿ ಮಾತ್ರ ಖರೀದಿ ಪ್ರಕ್ರಿಯೆ ನಡೆದಿದೆ. ಉಳಿದ ಕಡೆ ಒಬ್ಬ ರೈತರೂ ತಮ್ಮ ಉತ್ಪನ್ನ ಮಾರಿಲ್ಲ.

‘ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ. ತೊಗರಿ ಖರೀದಿಸಲು ಖರೀದಿ ಕೇಂದ್ರಗಳಲ್ಲಿ ಇಲ್ಲಸಲ್ಲದ ಕಾರಣಗಳನ್ನು ಕೇಳಲಾಗುತ್ತದೆ. ಹಲವು ದಾಖಲೆಪತ್ರಗಳನ್ನು ಕೇಳಿ ಸತಾಯಿಸಲಾಗುತ್ತಿದೆ. ಖರೀದಿಸಿದ ಬಳಿಕ ಸಕಾಲಕ್ಕೆ ಹಣ ಸಿಗುವುದಿಲ್ಲ. ಅದಕ್ಕೆ ಇದ್ಯಾವುದರ ಗೊಡವೆ ಬೇಡವೆಂದು ಸಿಕ್ಕಷ್ಟು ಹಣಕ್ಕೆ ತೊಗರಿಯನ್ನು ಖಾಸಗಿಯವರಿಗೆ ಮಾರುತ್ತಿದ್ದೇವೆ’ ಎಂದು ರೈತರು ತಿಳಿಸಿದರು.

ಮುಕ್ತ ಮಾರುಕಟ್ಟೆಯಲ್ಲಿ ಸಿಗುವಷ್ಟೇ ದರ ಕನಿಷ್ಠ ಬೆಂಬಲ ಬೆಲೆ ಯೋಜನೆ ಖರೀದಿ ಕೇಂದ್ರಗಳಲ್ಲಿ ಸಿಕ್ಕರೆ ರೈತರಿಗೇನು ಪ್ರಯೋಜನ? ಹೆಚ್ಚಿನ ದರ ನಿಗದಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಕ್ರಮ ವಹಿಸಬೇಕು 
ಮಹಾದೇವ ಮಡಿವಾಳ, ರೈತ ಅಥಣಿ
ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್ ತೊಗರಿ ದರ ₹7800 ಇದೆ. ನಮ್ಮ ಕೇಂದ್ರಗಳಲ್ಲಿ ₹ 8 ಸಾವಿರ ದರ ಇದೆ. ಅದಕ್ಕೆ ಖಾಸಗಿಯವರು ರೈತರ ಬಳಿ ನೇರ ತೊಗರಿ ಖರೀದಿಸುತ್ತಿದ್ದಾರೆ. ರೈತರು ಖರೀದಿ ಕೇಂದ್ರಗಳತ್ತ ಬರುತ್ತಿಲ್ಲ.
ಮಹಾದೇವಪ್ಪ ಚಬನೂರ, ಉಪನಿರ್ದೇಶಕ ಕೃಷಿ ಮಾರಾಟ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.