ADVERTISEMENT

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ: ವಿಎಚ್‌ಪಿ, ಬಜರಂಗ ದಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 14:34 IST
Last Updated 26 ಅಕ್ಟೋಬರ್ 2021, 14:34 IST
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿಯಲ್ಲಿ ವಿಎಚ್‌ಪಿ ಹಾಗೂ ಬಜರಂಗ ದಳ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತುಪ್ರಜಾವಾಣಿ ಚಿತ್ರ
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೆಳಗಾವಿಯಲ್ಲಿ ವಿಎಚ್‌ಪಿ ಹಾಗೂ ಬಜರಂಗ ದಳ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತುಪ್ರಜಾವಾಣಿ ಚಿತ್ರ   

ಬೆಳಗಾವಿ: ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ವಿಶ್ವ ಹಿಂದೂ ಪರಿಷತ್– ಬಜರಂಗ ದಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಣಿ ಚನ್ನಮ್ಮ ವೃತ್ತದ ಗಣೇಶ ಮಂದಿರ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ ಭಗವಾಧ್ವಜಗಳನ್ನು ಹಿಡಿದಿದ್ದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

‘ನೆರೆಯ ಪಾಕಿಸ್ತಾನ, ಅಪ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಉಳಿದಿರುವ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ಖರ ವಿರುದ್ಧ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದೀಚೆಗೆ ಹಿಂಸಾಚಾರ ಮಿತಿಮೀರಿದೆ. ಹಿಂದೂಗಳನ್ನು ಹಿಂಸಿಸಲಾಗುತ್ತಿದೆ; ಕೊಲ್ಲಲಾಗುತ್ತಿದೆ. ಹೆಣ್ಣು ಮಕ್ಕಳ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ದುರ್ಗಾ ಪೂಜೆ ಸಂದರ್ಭದಲ್ಲಿ ಬಾಂಗ್ಲಾದಲ್ಲಿ 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಿಂಸಾಚಾರ ಘಟನೆಗಳು ವರದಿಯಾಗಿವೆ. 150ಕ್ಕೂ ಹೆಚ್ಚು ದುರ್ಗಾಮಾತಾ ಪೂಜಾ ಮಂಟಪಗಳನ್ನು ನಾಶಗೊಳಿಸಲಾಗಿದೆ. ಇಸ್ಕಾನ್, ಡಾಕೇಶ್ವರಿ, ಲಾಮಾ ಹರಿ ದೇವಸ್ಥಾನ, ರಾಮಕೃಷ್ಣ ಆಶ್ರಮ, ಕಾಳಿ ದೇವಸ್ಥಾನ ಹೀಗೆ... ಅನೇಕ ಮಂದಿರಗಳು, ಅಂಗಡಿಗಳು ಮತ್ತು ಮನೆಗಳಲ್ಲಿ ಲೂಟಿ ಮಾಡಲಾಗಿದೆ. ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಅಲ್ಲಿನ ಸರ್ಕಾರ ವಿಫಲವಾಗಿದೆ’ ಎಂದು ದೂರಿದರು.

‘ಅಲ್ಲಿ ನಡೆಯುತ್ತಿರುವ ದಾಳಿಗಳನ್ನು ಕೂಡಲೇ ತಡೆಯುವಂತೆ ಕೇಂದ್ರ ಸರ್ಕಾರವು ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಕೊಡಬೇಕು. ಪ್ರಾಣ ಮತ್ತು ಆಸ್ತಿ ನಷ್ಟವಾಗಿದ್ದಕ್ಕೆ ಪರಿಹಾರ ಒದಗಿಸಬೇಕು. ದಾಳಿ ನಡೆಸಿದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಮತಾಂತರ, ಲವ್ ಜಿಹಾದ್ ಮತ್ತು ಮಂದಿರ ಧ್ವಂಸ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

‘ಕೆಲವರು ಅಮಾಯಕರ ತಲೆಯಲ್ಲಿ ಭಾವನಾತ್ಮಕ ವಿಷಯಗಳನ್ನು ತುಂಬಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ. ಇಂತಹ ಹುನ್ನಾರ ಅಲ್ಲಲ್ಲಿ ನಡೆಯುತ್ತಿದೆ. ಇದು ಮುಂದುವರಿಯಲು ಬಿಡಬಾರದು. ತಾಲ್ಲೂಕಿನ ರಣಕುಂಡೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮಂದಿರವನ್ನು ಕೆಲವು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಸಿದ್ದನಕೊಳ್ಳದ ಗಂಗಾಧ ಸ್ವಾಮೀಜಿ, ವಿಶ್ವಹಿಂದೂ ಪರಿಷತ್ ಉತ್ತರ ಕರ್ನಾಟಕ ಕೋಶಾಧ್ಯಕ್ಷ ಕೃಷ್ಣ ಭಟ್, ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ ಕದಂ, ನಗರ ಅಧ್ಯಕ್ಷ ಡಾ.ಬಾಗೋಜಿ, ಕಾರ್ಯದರ್ಶಿ ವಿಜಯ ಜಾಧವ, ಜಿಲ್ಲಾ ಸಂಯೋಜಕ ಭಾವಕಣ್ಣ ಲೋಹಾರ, ಆದಿನಾಥ ಗಾವಡೆ, ಕೃಷ್ಣಾನಂದ ಕಾಮತ್, ಶಶಿಕಾಂತ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.