ADVERTISEMENT

ಅಥಣಿಯಲ್ಲಿ ವಿದ್ಯಾಗಮ ಕಾರ್ಯಕ್ರಮ: ಮನೆ ಬಾಗಿಲಲ್ಲಿ ಶಿಕ್ಷಕರಿಂದ ಮಾರ್ಗದರ್ಶನ

ಪರಶುರಾಮ ನಂದೇಶ್ವರ
Published 19 ಸೆಪ್ಟೆಂಬರ್ 2020, 19:30 IST
Last Updated 19 ಸೆಪ್ಟೆಂಬರ್ 2020, 19:30 IST
ಅಥಣಿ ತಾಲ್ಲೂಕಿನ ಹಾಲಳ್ಳಿ ಗ್ರಾಮದ ಗಚ್ಚಿನಗುಡಿ ಬಸವೇಶ್ವರ ದೇವಸ್ಥಾನದಲ್ಲಿ ‘ವಿದ್ಯಾಗಮ’ ಕಾರ್ಯಕ್ರಮದಲ್ಲಿ ಶಿಕ್ಷಕ ಪಿ.ಆರ್. ಇಂಗಳಗಾವಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು
ಅಥಣಿ ತಾಲ್ಲೂಕಿನ ಹಾಲಳ್ಳಿ ಗ್ರಾಮದ ಗಚ್ಚಿನಗುಡಿ ಬಸವೇಶ್ವರ ದೇವಸ್ಥಾನದಲ್ಲಿ ‘ವಿದ್ಯಾಗಮ’ ಕಾರ್ಯಕ್ರಮದಲ್ಲಿ ಶಿಕ್ಷಕ ಪಿ.ಆರ್. ಇಂಗಳಗಾವಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು   

ಅಥಣಿ: ಕೊರೊನಾ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಲಾಗುತ್ತಿರುವ ‘ವಿದ್ಯಾಗಮ’ ಕಾರ್ಯಕ್ರಮದಲ್ಲಿ ಶಿಕ್ಷಕರು ಮಕ್ಕಳ ಮನೆಗಳ ಬಳಿಗೆ ತೆರಳಿ ಮಾರ್ಗದರ್ಶನ ನೀಡುತ್ತಿದ್ದಾರೆ.

ತಾಲ್ಲೂಕಿನಲ್ಲಿ 1ರಿಂದ 10ನೇ ತರಗತಿವರೆಗೆ ಸರ್ಕಾರಿ, ಅನುದಾನಿತ ಶಾಲೆಗಳು ಸೇರಿ 524 ಶಾಲೆಗಳಿವೆ. 1,350 ಶಿಕ್ಷಕರು, ಸಾವಿರಾರು ಮಕ್ಕಳಿಗೆ ವಿದ್ಯಾಗಮ ಯೋಜನೆಯಲ್ಲಿ ಕಲಿಸುತ್ತಿದ್ದಾರೆ. ಖಾಸಗಿ ಶಾಲೆಯ ಮಕ್ಕಳು ಆನ್‌ಲೈನ್‌ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಸರ್ಕಾರಿ ಶಾಲೆಗಳ ಮಕ್ಕಳ ಮನೆ ಬಾಗಿಲಿಗೆ ಶಿಕ್ಷಕರೇ ಹೋಗುತ್ತಿರುವುದು ಕಂಡುಬಂದಿದೆ.

ಗ್ರಾಮಗಳಲ್ಲಿರುವ ದೇವಸ್ಥಾನ, ಸಮುದಾಯ ಭವನಗಳು, ಗುಡಿಸಲು, ರಸ್ತೆಯ ಪಕ್ಕದ ಖಾಲಿ ಜಾಗಗಳೇ ತಾತ್ಕಾಲಿಕ ಶಾಲೆಗಳಾಗಿ ಬದಲಾಗಿವೆ. ಏಳೆಂಟು ಮಕ್ಕಳನ್ನು ಒಟ್ಟಾಗಿ ಸೇರಿಸಿ ಕಲಿಸಲಾಗುತ್ತಿದೆ. ‘ಈ ಕಾರ್ಯಕ್ಕೆ ಗ್ರಾಮಗಳ ಮುಖಂಡರು, ಪೋಷಕರು ಸಹ ಬೆಂಬಲವಾಗಿ ನಿಂತಿರುವುದು ಒಳ್ಳೆಯ ಬೆಳವಣಿಗೆ’ ಎನ್ನುತ್ತಾರೆ ಶಿಕ್ಷಕರು.

ADVERTISEMENT

‘ಸ್ಮಾರ್ಟ್‌ ಮೊಬೈಲ್ ಫೋನ್‌ ಸೌಲಭ್ಯವಿಲ್ಲದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ವಾರಕ್ಕೆ ಒಂದು ಅಥವಾ ಎರಡು ದಿನ ತಾತ್ಕಾಲಿಕ ಸ್ಥಳಗಳಲ್ಲಿ ಶಾಲೆಗಳನ್ನು ಆರಂಭಿಸಲಾಗಿದೆ. ಆಯಾ ಶಾಲೆಯ ಸುತ್ತಮುತ್ತಲಿನ ಗ್ರಾಮಗಳಿಗೆ ಸರದಿ ಪ್ರಕಾರ ತೆರಳುವ ಶಿಕ್ಷಕರು ದೇವಸ್ಥಾನ ಸೇರಿದಂತೆ ಲಭ್ಯ ಸ್ಥಳಗಳಲ್ಲಿ ಶಾಲೆಗಳನ್ನು ನಡೆಸುತ್ತಾರೆ. ಶಿಕ್ಷಕರು ಹಾಗೂ ಮಕ್ಕಳ ನಡುವೆ ನೇರ ಸಂವಹನ ಇರುತ್ತದೆ. ಇದರಿಂದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹೆಚ್ಚು ಅನುಕೂಲವಾಗಿದೆ’ ಎಂದು ಬಿಇಒ ಎಂ.ಬಿ. ಮೊರಟಗಿ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ತರಗತಿಗಳಲ್ಲಿ ಪ್ರತಿ ವಿದ್ಯಾರ್ಥಿಯ ಕಲಿಕಾ ಮಟ್ಟ ಅರಿಯುವುದು ಕಷ್ಟವಿತ್ತು. ಈಗ ಪ್ರತಿ ಊರಿಗೆ ತೆರಳಿ, ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಕರು ಕಲಿಸುತ್ತಿದ್ದಾರೆ. ಇದರಿಂದ ಮಕ್ಕಳ ಕಲಿಕಾ ಮಟ್ಟ ಸುಧಾರಿಸಲು ಸಹಕಾರಿಯಾಗಿದೆ’ ಎಂದು ಶಿಕ್ಷಕರಾದ ಬಿ.ಬಿ. ನಂದಗಾಂವಿ ಹಾಗೂ ಎನ್.ಕೆ. ಅವಟಿ ಪ್ರತಿಕ್ರಿಯಿಸಿದರು.

‘ಹಾಲಳ್ಳಿ ಜಿಲ್ಲೆಯ ಕೊನೆಯ ಗ್ರಾಮವಾಗಿದೆ. ಅಲ್ಲಿನ ಮಕ್ಕಳಿಗೆ ಕಲಿಸುವುದಕ್ಕೂ ಕ್ರಮ ವಹಿಸಲಾಗಿದೆ. ತೋಟದ ವಸತಿಗಳಿಗೆ ತೆರಳಿ ಮಾರ್ಗದರ್ಶನ ನೀಡುತ್ತಿದ್ದೇವೆ. ಲಾಕ್‌ಡೌನ್ ಸಮಯದಲ್ಲೂ ಮಕ್ಕಳಿಗೆ ಮೊಬೈಲ್‌ ಫೋನ್‌ ಮೂಲಕ ತಿಳಿಸುತ್ತಿದ್ದೆವು. ಈ ಮೂಲಕ ಅವರ ಕಲಿಕೆಗೆ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ’ ಎಂದು ಗಣಿತ ಶಿಕ್ಷಕ ಪಿ.ಆರ್. ಇಂಗಳಗಾವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.