ADVERTISEMENT

ಅಧಿಕಾರಿಗಳ ಸಹಕಾರದಿಂದ ಆಯೋಜನೆ: ಬಿಜೆಪಿಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 13:29 IST
Last Updated 16 ಜನವರಿ 2021, 13:29 IST
ಬೆಳಗಾವಿ ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಬಾವುಟಗಳು ಹಾಗೂ ನಾಯಕರ ಕಟೌಟ್‌ಗಳು ರಾರಾಜಿಸುತ್ತಿವೆಪ್ರಜಾವಾಣಿ ಚಿತ್ರ
ಬೆಳಗಾವಿ ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಬಾವುಟಗಳು ಹಾಗೂ ನಾಯಕರ ಕಟೌಟ್‌ಗಳು ರಾರಾಜಿಸುತ್ತಿವೆಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಕೋವಿಡ್ ಲಸಿಕೆ ಬಂದಿದೆ. ಹೀಗಾಗಿ, ದೇಶದ ಜನರಿಗೆ ಭರವಸೆಯ ಸಂದೇಶ ಕೊಡಬೇಕು ಎಂಬ ಉದ್ದೇಶದಿಂದ ಇಲ್ಲಿ ಪಕ್ಷದಿಂದ ಸಮಾವೇಶ ನಡೆಸುತ್ತಿದ್ದೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದು, ಅಧಿಕಾರಿ ವರ್ಗದ ಸಹಕಾರ ಪಡೆದು ಆಯೋಜನೆ ಮಾಡಿದ್ದೇವೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ತಿಳಿಸಿದರು.

‘ಕೋವಿಡ್ ಪರಿಸ್ಥಿತಿಯಲ್ಲಿ ಇಂತಹ ಸಮಾವೇಶದ ಅಗತ್ಯವೇನಿತ್ತು?’ ಎಂಬ ಪ್ರತಿಪಕ್ಷಗಳ ಟೀಕೆಗೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಅವರಿಗೆ ತಾವು ಜನಸೇವಕ ಎನ್ನುವ ಭಾವನೆ ಜಾಗೃತಗೊಳಿಸಲು ಮತ್ತು ಅಭಿನಂದಿಸಲು ಸಮಾವೇಶ ಆಯೋಜಿಸಿದ್ದೇವೆ. ಮುಂಬರುವ ತಾ.ಪಂ. ಹಾಗೂ ಜಿಲ್ಲಾ ಪಂಚಾಯ್ತಿ ಮೊದಲಾದ ಚುನಾವಣೆಗಳಿಗೂ ಸಿದ್ಧತೆಯ ಉದ್ದೇಶ ಇದರಲ್ಲಿದೆ’ ಎಂದು ಹೇಳಿದರು.

‘ಸಮಾವೇಶಕ್ಕಾಗಿ ನಗರವು ಮಧುವಣಗಿತ್ತಿಯಂತೆ ಸಜ್ಜುಗೊಂಡಿದೆ. ಆಯೋಜನೆ ಕಾರ್ಯ ಉತ್ತಮವಾಗಿ ನಡೆದಿದೆ. ಇದಕ್ಕಾಗಿ ಜಿಲ್ಲೆಯ ಪಕ್ಷದ ಮೂರೂ ಸಂಘಟನಾತ್ಮಕ ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಅಭಿನಂದಿಸುತ್ತೇನೆ’ ಎಂದು ತಿಳಿಸಿದರು.

ADVERTISEMENT

ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಸಮಾವೇಶದಲ್ಲಿ ಒಂದೂವರೆ ಲಕ್ಷ ಜನ ಭಾಗವಹಿಸಲಿದ್ದಾರೆ. 7ರಿಂದ 8ಸಾವಿರ ವಾಹನ ವ್ಯವಸ್ಥೆಯಾಗಿದೆ. ಐದು ಸಾವಿರಕ್ಕೂ ಹೆಚ್ಚಿನ ಗ್ರಾಮ ಪಂಚಾಯಿತಿ ಸದಸ್ಯರು ಪಾಲ್ಗೊಳ್ಳಲಿದ್ದು, ಅವರನ್ನು ಅಭಿನಂದಿಸಲಾಗುವುದು. ಕೋವಿಡ್ ನಿಯಮಾವಳಿ ಪ್ರಕಾರವೇ ನಡೆಯಲಿದೆ’ ಎಂದು ಹೇಳಿದರು.

‘ಸಮಾವೇಶದ ಆಯೋಜನೆಗೆ ಜಿಲ್ಲಾಡಳಿತದಿಂದ ಅನುಮತಿ ಪಡೆಯಲಾಗಿದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದರು.

‘ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಹೀಗಾಗಿ, ಇಲ್ಲಿ ದೊಡ್ಡ ಪ್ರಮಾಣದಲ್ಲಿ ಸಮಾರೋಪ ಆಯೋಜಿಸಲಾಗಿದೆ’ ಎಂದರು.

ಸಚಿವ ಉಮೇಶ ಕತ್ತಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ ಬೆನಕೆ, ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ದೇಶಪಾಂಡೆ, ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ನೇರ್ಲಿ, ವಕ್ತಾರಹನುಮಂತ ಕೊಂಗಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.