ADVERTISEMENT

ಬೆಳಗಾವಿ | ಭಾವೈಕ್ಯದ ಪ್ರತೀಕ ಯಕ್ಕುಂಡಿ ಉರುಸ್‌

ರವಿ ಎಂ.ಹುಲಕುಂದ
Published 23 ಜೂನ್ 2022, 19:30 IST
Last Updated 23 ಜೂನ್ 2022, 19:30 IST
ಬೈಲಹೊಂಗಲ ಸಮೀಪದ ಯಕ್ಕುಂಡಿ ಗ್ರಾಮದಲ್ಲಿರುವ ಪೀರ ದಿಲಾವರಗೋರಿ ಶಾಹವಲಿ ದರ್ಗಾ
ಬೈಲಹೊಂಗಲ ಸಮೀಪದ ಯಕ್ಕುಂಡಿ ಗ್ರಾಮದಲ್ಲಿರುವ ಪೀರ ದಿಲಾವರಗೋರಿ ಶಾಹವಲಿ ದರ್ಗಾ   

ಬೈಲಹೊಂಗಲ: ಸಮೀಪದ ಹೊಸ ಯಕ್ಕುಂಡಿಯಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಇಲ್ಲಿನ ಪೀರ ದಿಲಾವರ ಗೋರಿ ಶಾಹವಲಿ ಸಂದಲ್ ಮತ್ತು ಉರುಸ್‌ ಅಂಗವಾಗಿ ಸುತ್ತಲಿನ ಹತ್ತೂರಿನ ಜನ ಸಂತಸದಲ್ಲಿದ್ದಾರೆ.

ಹೊಸ ಯಕ್ಕುಂಡಿ, ಧೂಪದಾಳ, ಕಾರ್ಲಕಟ್ಟಿ ಹಾಗೂ ಕಾರ್ಲಕಟ್ಟಿ ತಾಂಡಾ ಒಂದಕ್ಕೊಂದು ಹೊಂದಿಕೊಂಡಿವೆ. ಇವುಗಳಲ್ಲದೇ ಸುತ್ತ ಮುತ್ತಲಿನ ಗ್ರಾಮದ ಜನರೂ ಉರುಸ್‌ನಲ್ಲಿ ಭಾಗಿಯಾಗುವುದು ವಾಡಿಕೆ. ಪ್ರತಿಬಾರಿಯಂತೆ ಈ ಬಾರಿಯೂ ಉರುಸ್‌ನ ಪ್ರಮುಖ ಆಕರ್ಷಣೆಯಾದ ಸಂದಲ್‌ ಮೆರವಣಿಗೆಗೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.

ಬುಧವಾರ ರಾತ್ರಿ ಧೂಪದಾಳ ಗ್ರಾಮದ ಹಿರಿಯ ಮೋಹನರಾವ ದೇಸಾಯಿ ಅವರ ಮನೆಯಿಂದ ಸಕಲ ವಾದ್ಯಮೇಳದೊಂದಿಗೆ ಗಂಧದ ಭವ್ಯ ಮೆರವಣಿಗೆ ನಡೆಯಿತು. ಕುಮಾರೇಶ್ವರ ವಿರಕ್ತಮಠದ ಪಂಚಾಕ್ಷರ ಸ್ವಾಮೀಜಿ, ಮುಸ್ಲಿಂ ಧರ್ಮಗುರು ಮುರಷಿದಪೀರಾ ಪೀರಜಾದೆ ನೇತೃತ್ವದಲ್ಲಿ ಗುರು– ಹಿರಿಯರ ಸಮ್ಮುಖದಲ್ಲಿ ವಲಿಗಳಿಗೆ ಗಂಧ ಏರಿಸಲಾಯಿತು. ಈ ಮೂಲಕ ದರ್ಗಾದ ಉರುಸ್‌ಗೆ ಚಾಲನೆ ನೀಡಲಾಯಿತು.

ADVERTISEMENT

ಇತಿಹಾಸ: ಮಲಪ್ರಭಾ ನದಿ ದಡದಲ್ಲಿರುವ ಯಕ್ಕುಂಡಿ ಗ್ರಾಮ ತನ್ನದೇ ಆದ ಐತಿಹಾಸಿಕ, ಧಾರ್ಮಿಕ, ಪರಂಪರೆಗೆ ಹೆಸರಾಗಿದೆ. ಇತಿಹಾಸದ ಪುಟಗಳಲ್ಲಿ ‘ಯಜ್ಞಕುಂಡ’ ಎಂದೇ ಪ್ರಸಿದ್ಧಿ ಪಡೆದ ಈ ಊರಿಗೆ ಬಂದ ಪೀರ ದಿಲಾವರಗೋರಿ ಶಾಹವಲಿ ಬಾಬಾ ಅವರು, ಅಲ್ಲಾಹುವಿನ ಸಂದೇಶ ಸಾರುತ್ತ ಬಂದು ನೆಲೆಸಿದ್ದು ಇತಿಹಾಸ. ಯಕ್ಕುಂಡಿ– ಧೂಪದಾಳ ನಡುವೆ ಚಿಕ್ಕ ಗುಡಿಸಲು ಹಾಕಿಕೊಂಡು ವಾಸವಾಗಿದ್ದರು.

ಅಲ್ಲಯೇ ಕಾಲವಾದ ನಂತರ ಗ್ರಾಮಸ್ಥರು ಅವರ ದರ್ಗಾ ನಿರ್ಮಿಸಿದ್ದಾರೆ. ಹೀಗಾಗಿ, ಯಾವುದೇ ಧರ್ಮ, ಜಾತಿಯ ಕಟ್ಟುಪಾಡು ಇಲ್ಲದೇ ಎಲ್ಲರೂ ಈ ಸಂತರಿಗೆ ಭಕ್ತರಾದರು.

ಹಿರಿಯರಾದ ಶಂಕರಗೌಡ ಪಾಟೀಲ, ಬಸವರಾಜ ಹೊಂಗಲ, ವಿನೋದರಾವ ದೇಸಾಯಿ, ಅಬ್ದುಲ್ ಖಾದರ ಜೈಲಾನಿ ಬಾರಿಗಿಡದ, ಮೋಹನ ಮೇಟಿ, ನಾಗಪ್ಪ ಹಿಟ್ಟಣಗಿ, ಬಂದೆನಮಾಜ ಮುಲ್ಲಾ, ಮಕ್ತುಮಸಾ ಬಡೇಖಾನ್‌, ಇಸ್ಮಾಯಿಲ್ ಮುಜಾವರ, ಅಕ್ಬರಸಾಬ್‌ ಬಾರಿಗಿಡದ, ಚನ್ನಪ್ಪ ಹೊಂಗಲ, ಗಂಗಪ್ಪ ಪೂಜೇರ, ಮುಕ್ತಾರ ಮುಲ್ಲಾ ಅವರು ಈ ಬಾರಿ ಉರುಸ್‌ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.