ADVERTISEMENT

ತಳ ಮಟ್ಟದ ಆರೋಗ್ಯ ಸೌಕರ್ಯ ಸುಧಾರಣೆಗೆ ಸಾಲದು ₹10 ಕೋಟಿ

ಹೊಸ 57 ಪಿಎಚ್‌ಸಿ ನಿರ್ವಹಣೆಗೆ ವರ್ಷಕ್ಕೆ ಕನಿಷ್ಠ ₹ 23 ಕೋಟಿ ಬೇಕೆಂದು ಪ್ರಸ್ತಾವ ಸಲ್ಲಿಸಿದ್ದ ಬಿಬಿಎಂ‍ಪಿ

ಪ್ರವೀಣ ಕುಮಾರ್ ಪಿ.ವಿ.
Published 11 ಮಾರ್ಚ್ 2021, 21:43 IST
Last Updated 11 ಮಾರ್ಚ್ 2021, 21:43 IST
ಬಿಬಿಎಂ‍ಪಿ
ಬಿಬಿಎಂ‍ಪಿ   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು 2021–22ನ ಸಾಲಿನ ಬಜೆಟ್‌ನಲ್ಲಿ ಬಿಬಿಎಂಪಿಯ 57 ವಾರ್ಡ್‌ಗಳಲ್ಲಿ ಜನಾರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ₹ 10 ಕೋಟಿ ಅನುದಾನ ಪ್ರಕಟಿಸಿದ್ದಾರೆ. ಕೋವಿಡ್‌ ನಿಯಂತ್ರಣ ಸವಾಲಾಗಿ ಪರಿಣಮಿಸಿರುವ ನಗರದಲ್ಲಿ ತಳಮಟ್ಟದ ಆರೋಗ್ಯ ಮೂಲಸೌಕರ್ಯ ಸುಧಾರಣೆಗೆ ಈ ಮೊತ್ತ ಯಾವುದಕ್ಕೂ ಸಾಲದು ಎನ್ನುತ್ತವೆ ಬಿಬಿಎಂಪಿ ಮೂಲಗಳು.

ಕಳೆದ ವರ್ಷ ಕೋವಿಡ್‌ ಹರಡುವಿಕೆ ವ್ಯಾಪಕವಾಗಿದ್ದಾಗ ನಗರದ ಆರೋಗ್ಯ ಮೂಲಸೌಕರ್ಯಗಳ ಬಗ್ಗೆ ಬಿಬಿಎಂಪಿ ಪರಾಮರ್ಶೆ ನಡೆಸಿತ್ತು. ಒಟ್ಟು 198 ವಾರ್ಡ್‌ಗಳಲ್ಲಿ ಬಿಬಿಎಂಪಿ ಅಧೀನದಲ್ಲಿ 133 ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ) ಮಾತ್ರ ಕಾರ್ಯನಿರ್ವಹಿಸುತ್ತಿದ್ದುದು ಹಾಗೂ 65 ವಾರ್ಡ್‌ಗಳು ಪಿಎಚ್‌ಸಿಗಳೇ ಇಲ್ಲದಿದ್ದುದು ಗಮನಕ್ಕೆ ಬಂದಿತ್ತು. ಪಿಎಚ್‌ಸಿಗಳಿಲ್ಲದ ವಾರ್ಡ್‌ಗಳಲ್ಲಿ ಪಕ್ಕದ ವಾರ್ಡ್‌ಗಳ ಪಿಎಚ್‌ಸಿಗಳ ಸಿಬ್ಬಂದಿಯ ನೆರವಿನಿಂದ ಆರೋಗ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕಾಗಿತ್ತು. ಈ ಕೊರತೆಯಿಂದಾಗಿ, ಸರ್ಕಾರದ ಆರೋಗ್ಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ಸಮಸ್ಯೆ ಆಗುತ್ತಿರುವುದು ಬೆಳಕಿಗೆ ಬಂದಿತ್ತು.

ಹೊರ ವಲಯದ ವಾರ್ಡ್‌ಗಳಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ (ಎನ್‌ಯುಎಚ್‌ಎಂ) ಅಡಿಯ 35 ಪಿಎಚ್‌ಸಿಗಳು, ಎನ್‌ಯುಎಚ್‌ಎಂ ವ್ಯಾಪ್ತಿಗೆ ಬಾರದ 14 ಪಿಎಚ್‌ಸಿಗಳು ಹಾಗೂ ಎರಡು ಸಮುದಾಯ ಆರೋಗ್ಯ ಕೇಂದ್ರಗಳು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದವು. ಅವುಗಳ ಸಿಬ್ಬಂದಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದರು. ಈ ಆರೋಗ್ಯ ಕೇಂದ್ರಗಳನ್ನು ಹಾಗೂ ಅವುಗಳ ಸಿಬ್ಬಂದಿಯನ್ನೂ ಬಿಬಿಎಂಪಿ ತೆಕ್ಕೆಗೆ ಸೇರಿಸಿಕೊಳ್ಳಲಾಗಿದೆ. ಹಾಗಾಗಿ ಪ್ರಸ್ತುತ ನಗರದಲ್ಲಿ 141 ಪಿಎಚ್‌ಸಿಗಳು ಬಿಬಿಎಂಪಿ ಅಧೀನದಲ್ಲಿವೆ. 57 ವಾರ್ಡ್‌ಗಳಲ್ಲಿ ಈಗಲೂ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ.

ADVERTISEMENT

ಈ ಕೊರತೆ ನೀಗಿಸಲು ಈ 57 ವಾರ್ಡ್‌ಗಳಿಗೂ ಪಿಎಚ್‌ಸಿಗಳನ್ನು ಮಂಜೂರು ಮಾಡಬೇಕು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು 2020ರ ಜು.29ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಉಲ್ಲೇಖಿಸಿರುವಂತೆ ಪ್ರತಿ ಪಿಎಚ್‌ಸಿಯ ಸಿಬ್ಬಂದಿಯ ವೇತನ, ಕಟ್ಟಡದ ಬಾಡಿಗೆ, ಪೀಠೋಪಕರಣ, ಕಚೇರಿ ವೆಚ್ಚ, ಔಷಧಿ ಮತ್ತು ರಿ–ಏಜೆಂಟ್‌ಗಳಿಗಾಗಿ ವರ್ಷಕ್ಕೆ ತಲಾ ₹ 40.25 ಲಕ್ಷ ಬೇಕಾಗುತ್ತದೆ. 57 ಪಿಎಚ್‌ಸಿಗಳ ನಿರ್ವಹಣೆಗೆ ವರ್ಷಕ್ಕೆ ₹ 22.94 ಕೋಟಿ ಬೇಕಾಗುತ್ತದೆ ಎಂದು ಪ್ರಸ್ತಾವನೆ ಸಲ್ಲಿಸಿದ್ದರು.

‘ಪಿಎಚ್‌ಸಿಗಳಿಲ್ಲದ 57 ವಾರ್ಡ್‌ಗಳಲ್ಲಿ ಜನಾರೋಗ್ಯ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಬಜೆಟ್‌ನಲ್ಲಿ ₹ 10 ಕೋಟಿ ಕಾಯ್ದಿರಿಸಿದೆ. ನಗರದ ಮೂಲಸೌಕರ್ಯ ಕೊರತೆ ನೀಗಿಸಲು ಇದು ನೆರವಾಗಲಿದೆ. 57 ವಾರ್ಡ್‌ಗಳಲ್ಲಿ ಸದ್ಯಕ್ಕೆ ಬಾಡಿಗೆ ಕಟ್ಟಡಗಳಲ್ಲಿ ಜನಾರೋಗ್ಯ ಕೇಂದ್ರಗಳನ್ನು ಆರಂಭಿಸಬೇಕಾಗುತ್ತದೆ. ಈ ಬಗ್ಗೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಿ ಸರ್ಕಾರದಿಂದ ಮಂಜೂರಾತಿ ಪಡೆಯುತ್ತೇವೆ’ ಎಂದು ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಬಿಎಂಪಿಯಲ್ಲಿ ನಗರ ಆರೋಗ್ಯ ಅಭಿಯಾನದ ಉಸ್ತುವಾರಿ ಡಾ.ಸುರೇಶ್‌, ‘ಜನಾರೋಗ್ಯ ಕೇಂದ್ರಗಳಲ್ಲಿ ಪಿಎಚ್‌ಸಿಗಳಷ್ಟು ಸೌಕರ್ಯ ಹೊಂದಿರುವುದಿಲ್ಲ. ಇವುಗಳಲ್ಲಿ ಒಬ್ಬರು ವೈದ್ಯಾಧಿಕಾರಿ, ಒಬ್ಬರು ಸ್ಟಾಫ್‌ ನರ್ಸ್‌ ಹಾಗೂ ಒಬ್ಬರು ಡಿ ಗುಂಪಿನ ಸಿಬ್ಬಂದಿ ಮಾತ್ರ ಇರುತ್ತಾರೆ. ಇವು ಹೊರರೋಗಿಗಳ ಘಟಕವಿರುತ್ತದೆ. ಬೆಳಿಗ್ಗೆ 9ರಿಂದ ಸಂಜೆ 3 ಗಂಟೆಯವರೆಗೆ ಇವು ಕಾರ್ಯ ನಿರ್ವಹಿಸಲಿವೆ’ ಎಂದರು.

ಪ್ರತಿ ಜನಾರೋಗ್ಯ ಕೇಂದ್ರಕ್ಕೆ ಒಬ್ಬ ವೈದ್ಯಾಧಿಕಾರಿ, ಒಬ್ಬ ಸ್ಟಾಫ್ ನರ್ಸ್‌, ಒಬ್ಬ ಡಿ ಗುಂಪಿನ ಸಿಬ್ಬಂದಿಯನ್ನು ಮಾತ್ರ ನೇಮಿಸಿದರೂಈ ಕಟ್ಟಡಗಳ ಬಾಡಿಗೆ, ಪೀಠೋಪಕರಣ ವೆಚ್ಚ, ಕಚೇರಿ ವೆಚ್ಚ, ಔಷಧ ವೆಚ್ಚ ಸೇರಿ 57 ಜನಾರೋಗ್ಯ ಕೇಂದ್ರಗಳ ವಾರ್ಷಿಕ ನಿರ್ವಹಣೆಗೆ ₹ 15 ಕೋಟಿಗಳಷ್ಟು ಅನುದಾನ ಬೇಕಾಗುತ್ತದೆ. ಆರೋಗ್ಯ ಸಹಾಯಕಿಯರನ್ನು ನೇಮಿಸದಿದ್ದರೆ ಈ ಕೇಂದ್ರಗಳು ಸರ್ಕಾರದ ಆರೋಗ್ಯ ಕಾರ್ಯಕ್ರಮಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯವಾಗುವುದಿಲ್ಲ.

‘ಪೂರ್ಣ ಪ್ರಮಾಣದ ಪಿಎಚ್‌ಸಿ ಆರಂಭಿಸಲಿ’
ಸರ್ಕಾರ ಜನಾರೋಗ್ಯ ಕೇಂದ್ರ ಸ್ಥಾಪಿಸುವ ಬದಲು ಪೂರ್ಣ ಪ್ರಮಾಣದ ಪಿಎಚ್‌ಸಿಗಳನ್ನು ಸ್ಥಾಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

‘ನಗರದಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದ್ದಾಗ ಅದರ ನಿಯಂತ್ರಣ ನಿಜಕ್ಕೂ ಕಠಿಣವಾಗಿತ್ತು. ಬೆಂಗಳೂರಿನಂತಹ ನಗರದಲ್ಲೇ ಸರ್ಕಾರದ ಕನಿಷ್ಠ ಆರೋಗ್ಯ ಕಾರ್ಯಕ್ರಮಗಳನ್ನೂ ಜನರಿಗೆ ತಲುಪಿಸುವ ವ್ಯವಸ್ಥೆ ಇಲ್ಲದಿರುವುದು ನಿಜಕ್ಕೂ ಶೋಚನೀಯ. ಜನಾರೋಗ್ಯ ಕೇಂದ್ರ ಸ್ಥಾಪಿಸುವ ಬದಲು, ಸರ್ಕಾರ ಇನ್ನೊಂದಿಷ್ಟು ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸುವ ಮೂಲಕ ಪೂರ್ಣ ಪ್ರಮಾಣದ ಪಿಎಚ್‌ಸಿಗಳನ್ನು ಆರಂಭಿಸುವ ಮನಸ್ಸು ಮಾಡಬೇಕು. ಕೋವಿಡ್‌ ತಂದೊಡ್ಡಿರುವ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಾದರೂ ಸರ್ಕಾರ ತಳ ಹಂತದ ಆರೋಗ್ಯ ಸೇವೆ ತಲುಪಿಸುವ ವ್ಯವಸ್ಥೆಯ ಮಹತ್ವವನ್ನು ಅರಿತುಕೊಳ್ಳಬೇಕು’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.