ADVERTISEMENT

ಲಾಕ್‌ಡೌನ್‌ ನಡುವೆ ಅವಳಿ ಕೆರೆಗಳ 100 ಎಕರೆ ಹೂಳು ತೆರವು

ಬೆಳ್ಳಂದೂರು, ವರ್ತೂರು ಕೆರೆ ಅಭಿವೃದ್ಧಿ

ಪ್ರವೀಣ ಕುಮಾರ್ ಪಿ.ವಿ.
Published 2 ಜೂನ್ 2020, 21:36 IST
Last Updated 2 ಜೂನ್ 2020, 21:36 IST
ಬೆಳ್ಳಂದೂರು ಕೆರೆಯ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದೆ
ಬೆಳ್ಳಂದೂರು ಕೆರೆಯ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದೆ   

ಬೆಂಗಳೂರು: ಲಾಕ್‌ಡೌನ್‌ ನಡುವೆಯೂ ಬೆಳ್ಳಂದೂರು ಹಾಗೂ ವರ್ತೂರು ಕೆರೆಯಲ್ಲಿ ತಲಾ 50 ಎಕರೆಗಳಷ್ಟು ಜಾಗದ ಹೂಳನ್ನು ಮೇಲೆತ್ತಲಾಗಿದೆ. ಈ ಕೆರೆಗಳ ದಂಡೆಯಲ್ಲಿ ರಾಶಿ ಹಾಕಿರುವ ಹೂಳನ್ನು ವಿಲೇ ಮಾಡಲು ಗುರುತಿಸಿರುವ ಕ್ವಾರಿಗೆ ಸಾಗಿಸುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ (ಬಿಡಿಎ) ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಅವಳಿ ಕೆರೆಗಳ ಮಾಲಿನ್ಯದ ಬಗ್ಗೆ ಹಾಗೂ ಇವುಗಳ ಅಭಿವೃದ್ಧಿಯನ್ನು ಕಡೆಗಣಿಸಿದ ಬಗ್ಗೆ ಹಸಿರು ನ್ಯಾಯ ಮಂಡಳಿ ತರಾಟೆಗೆ ತೆಗೆದುಕೊಂಡ ಬಳಿಕ ಇವುಗಳ ಅಭಿವೃದ್ಧಿಗೆ ಬಿಡಿಎ ಯೋಜನೆ ರೂಪಿಸಿತ್ತು. 2020ರ ಫೆಬ್ರುವರಿಯಲ್ಲಿ ಟೆಂಡರ್‌ ಆಹ್ವಾನಿಸಿತ್ತು. ರಾಜಕಾಲುವೆಯ ನೀರು ಈ ಕೆರೆಗಳ ಒಡಲನ್ನು ಸೇರದಂತೆ ತಡೆಯಲು ಪ್ರತ್ಯೇಕ ಕಾಲುವೆ ನಿಮಿಸಿ, ಈ ಕೆರೆಗಳಲ್ಲಿದ್ದ ನೀರನ್ನು ಖಾಲಿ ಮಾಡಿಸಿತ್ತು. ಹೂಳೆತ್ತುವ ಕಾಮಗಾರಿ ಆರಂಭವಾಗುವಷ್ಟರಲ್ಲಿ ಕೋವಿಡ್‌ 19 ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿಯಾಗಿತ್ತು.

‘ಏ.24ರಂದೇ ನಾವು ಹೂಳೆತ್ತುವ ಕಾಮಗಾರಿ ಆರಂಭಿಸಿದ್ದೆವು. ಇದುವರೆಗೆ ಒಟ್ಟು 100 ಎಕರೆಗಳಷ್ಟು ಜಾಗದಲ್ಲಿ ಹೂಳೆತ್ತಲಾಗಿದೆ. 1.5 ಮೀ. (5 ಅಡಿ) ಆಳಕ್ಕೆ ಹೂಳನ್ನು ತೆರವುಗೊಳಿಸುತ್ತಿದ್ದೇವೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಎರಡೂ ಕೆರೆಗಳಲ್ಲಿ ತಲಾ 8 ಹಿಟಾಚಿ ಯಂತ್ರಗಳು ಹೂಳನ್ನು ತೆರವು ಕಾರ್ಯದಲ್ಲಿ ತೊಡಗಿವೆ. ಹೂಳನ್ನು ಕೆರೆಗಳ ಸಮೀಪದಲ್ಲೇ ರಾಶಿ ಹಾಕಲಾಗಿದೆ. ಹೂಳನ್ನು ವಿಲೇ ಮಾಡಲು ಮೈಲಸಂದ್ರ ಹಾಗೂ ವಿಟ್ಟಸಂದ್ರದಲ್ಲಿ ಒಟ್ಟು 17 ಎಕರೆ ವ್ಯಾಪ್ತಿಯ ಕಲ್ಲು ಕ್ವಾರಿಯ ಜಾಗವನ್ನು ಜಿಲ್ಲಾಡಳಿತ ಬಿಡಿಎಗೆ ಹಸ್ತಾಂತರಿಸಿದೆ. ಈ ಪ್ರದೇಶ ಕೆರೆಗಳಿಂದ 25 ಕಿ.ಮೀ ದೂರದಲ್ಲಿದೆ.

‘ಹೂಳನ್ನು ಕ್ವಾರಿಯ ಜಾಗಕ್ಕೆ ಸಾಗಿಸುವುದು ಸವಾಲಿನ ಕೆಲಸ. ಬೆಳಗಿನ ಹೊತ್ತು ರಸ್ತೆಯಲ್ಲಿ ಹೂಳನ್ನು ಸಾಗಿಸಿದರೆ ಸಾರ್ವಜನಿಕರಿಗೆ ಅನನುಕೂಲವಾಗಲಿದೆ. ಹಾಗಾಗಿ ರಾತ್ರಿ ವೇಳೆ ಮಾತ್ರ ಹೂಳನ್ನು ಸಾಗಿಸಬೇಕಿದೆ’ ಎಂದು ಬಿಡಿಎ ಅಧಿಕಾರಿ ಹೇಳಿದರು.

‘ಹೂಳನ್ನು ಸಾಗಿಸುವ ಕಾರ್ಯ ಆರಂಭಿಸಿಲ್ಲ. ಹಸಿ ಹೂಳು ತೂಕ ಹೆಚ್ಚು. ಒಣಗಿದ ಬಳಿಕ ಅದರ ಸಾಗಾಟಕ್ಕೆ ಕಡಿಮೆ ವೆಚ್ಚ ಸಾಕು. ಹೂಳನ್ನು ತೂಕ ಮಾಡಿ ನಂತರ ಸಾಗಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ತೂಕ ಮಾಡುವ ಯಂತ್ರವನ್ನು ಕೆರೆಯ ಬಳಿ ಅಳವಡಿಸಿದ ನಂತರ ಹೂಳನ್ನು ಕ್ವಾರಿಗೆ ಸಾಗಿಸುವ ಕಾರ್ಯ ಆರಂಭಿಸಲಿದ್ದೇವೆ’ ಎಂದರು.

‘ಜೋರು ಮಳೆ ಬಂದಾಗ ಹೂಳು ಮತ್ತೆ ಕೆರೆಯ ಒಡಲು ಸೇರುವ ಅಪಾಯವಿದೆ. ಹೂಳನ್ನು ತುರ್ತಾಗಿ ಇಲ್ಲಿಂದ ಸಾಗಿಸಬೇಕು. ಇಲ್ಲದಿದ್ದರೆ ಹೂಳೆತ್ತುವ ಕಾರ್ಯ ಹೊಳೆ ನೀರಿನಲ್ಲಿ ಹುಣಸೆಹಣ್ಣು ತೊಳೆದಂತೆ ಆದೀತು’ ಎಂದು ಎಚ್ಚರಿಸುತ್ತಾರೆ ಸ್ಥಳೀಯರು.

‘1 ಕೋಟಿ ಘನ ಮೀ. ಹೂಳು’
’ಈ ಎರಡೂ ಕೆರೆಗಳಲ್ಲಿ ಹೆಚ್ಚೂ ಕಡಿಮೆ 1 ಕೋಟಿ ಘನ ಮೀಟರ್‌ಗಳನ್ನು ಹೂಳನ್ನು ತೆರವುಗೊಳಿಸಬೇಕಿದೆ. ಒಂದು ಘನ ಅಡಿ ಹೂಳನ್ನು ಕೆರೆಯಿಂದ ಮೇಲಕ್ಕೆತ್ತಿ ಕ್ವಾರಿಗೆ ತಲುಪಿಸಲು ₹255 ವೆಚ್ಚವಾಗುತ್ತದೆ. ಕೆರೆ ಅಭಿವೃದ್ಧಿಗಿಂತಲೂ ಹೂಳು ತೆರವಿಗೆ ಹೆಚ್ಚು ಖರ್ಚಾಗುತ್ತದೆ’ ಎಂದು ಬಿಡಿಎ ಅಧಿಕಾರಿ ಮಾಹಿತಿ ನೀಡಿದರು.

ಎರಡೂ ಕೆರೆಗಳ ಹೂಳನ್ನು ಕೃಷಿಗೆ ಬಳಸಿಕೊಳ್ಳುವುದಾದರೆ ಉಚಿತವಾಗಿ ನೀಡುತ್ತೇವೆ ಎಂದು ಬಿಡಿಎ 2020ರ ಜನವರಿಯಲ್ಲಿ ಪ್ರಕಟಣೆ ನೀಡಿತ್ತು. ರಾಸಾಯನಿಕ ಕಶ್ಮಲ ಸೇರಿರುವುದರಿಂದ ಈ ಕೆರೆಗಳ ಹೂಳು ಕೂಡ ಮಲಿನವಾಗಿರಬಹುದು ಎಂಬ ಕಾರಣಕ್ಕೆ ಯಾವುದೇ ರೈತರು ಈ ಇದನ್ನು ಒಯ್ಯಲು ಮುಂದೆ ಬಂದಿರಲಿಲ್ಲ.

ಅಂಕಿ ಅಂಶ

916 ಎಕರೆ: ಬೆಳ್ಳಂದೂರು ಕೆರೆಯ ವಿಸ್ತೀರ್ಣ

₹ 245.89 ಕೋಟಿ: ಬೆಳ್ಳಂದೂರು ಕೆರೆ ಅಭಿವೃದ್ಧಿ ಕಾಮಗಾರಿಯ ಅಂದಾಜು ವೆಚ್ಚ

61 ಲಕ್ಷ ಕ್ಯೂಬಿಕ್‌ ಮೀ: ಬೆಳ್ಳಂದೂರು ಕೆರೆಯಲ್ಲಿರುವ ಹೂಳು

439 ಎಕರೆ: ವರ್ತೂರು ಕೆರೆಯ ವಿಸ್ತೀರ್ಣ

₹ 116.95 ಕೋಟಿ: ವರ್ತೂರು ಕೆರೆ ಅಭಿವೃದ್ಧಿ ಕಾಮಗಾರಿಯ ಅಂದಾಜು ವೆಚ್ಚ

39 ಲಕ್ಷ ಕ್ಯೂಬಿಕ್‌ ಮೀ.: ವರ್ತೂರು ಕೆರೆಯಲ್ಲಿರುವ ಹೂಳು

18 ತಿಂಗಳು: ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಿರುವ ಅವಧಿ (ಮಳೆಗಾಲ ಹೊರತುಪಡಿಸಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.