ADVERTISEMENT

ಬಿಡಿಎ ಅಧ್ಯಕ್ಷರ ಕ್ಷೇತ್ರಕ್ಕೆ ₹55.65 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 22:35 IST
Last Updated 12 ಡಿಸೆಂಬರ್ 2025, 22:35 IST
ಬಿಡಿಎ
ಬಿಡಿಎ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ₹55.65 ಕೋಟಿ ಅನುದಾನ ಹಂಚಿಕೆ ಮಾಡಿದೆ. ಈ ಕ್ಷೇತ್ರವನ್ನು ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎನ್.ಎ. ಹ್ಯಾರಿಸ್ ಪ್ರತಿನಿಧಿಸುತ್ತಿದ್ದಾರೆ.

ವಿಶೇಷವೆಂದರೆ, ಈ ಕಾಮಗಾರಿಗಳನ್ನು ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿರುವ ಬಡಾಣೆಗಳಲ್ಲಿ ಕೈಗೆತ್ತಿಕೊಳ್ಳಲು ಪ್ರಸ್ತಾಪಿಸಲಾಗಿದೆ.

ಸಾಮಾನ್ಯವಾಗಿ ಪ್ರಾಧಿಕಾರ ತನ್ನ ಸಂಪನ್ಮೂಲಗಳನ್ನು ಹೊಸ ಬಡಾವಣೆಗಳ ನಿರ್ಮಾಣ ಹಾಗೂ ಬಡಾವಣೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುತ್ತದೆ. ಆದರೆ, ಪ್ರಾಧಿಕಾರವು ನಗರದ ಹೃದಯಭಾಗದಲ್ಲಿರುವ ಕ್ಷೇತ್ರಕ್ಕೆ ಅನುದಾನ ಹಂಚಿಕೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ದೊಮ್ಮಲೂರು 1ನೇ ಹಂತದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ, ದೊಮ್ಮಲೂರು 2ನೇ ಹಂತದಲ್ಲಿ ಸರ್ಕಾರಿ ಕಾಲೇಜಿನಲ್ಲಿ ಕಟ್ಟಡ ನಿರ್ಮಾಣ, ಜೋಗುಪಾಳ್ಯದಲ್ಲಿ ಕ್ರೀಡಾಂಗಣ ಮತ್ತು ಆಸ್ಟಿನ್ ಟೌನ್‌ನ ಆಟದ ಮೈದಾನದಲ್ಲಿ ಫುಟ್‌ಬಾಲ್‌ ಕ್ರೀಡಾಂಗಣ ನಿರ್ಮಾಣ ಈ ಯೋಜನೆಗಳಲ್ಲಿ ಸೇರಿವೆ.

ಈ ನಾಲ್ಕು ಕಾಮಗಾರಿಗಳಿಗೆ ಪ್ರತಿಯೊಂದಕ್ಕೂ ಸುಮಾರು ₹11 ಕೋಟಿಯಿಂದ ₹20 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪಾಲಿಕೆ ಸಹ ಶಾಲಾ ಕಟ್ಟಡಗಳ ನವೀಕರಣ ಮತ್ತು ಆಟದ ಮೈದಾನಗಳ ನಿರ್ವಹಣೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡುತ್ತದೆ.

ಆಸ್ಟಿನ್ ಟೌನ್‌ನ ನಿವಾಸಿ, ವಕೀಲ ಕ್ಲಿಫ್ಟನ್ ಡಿ'ರೋಸಾರಿಯೋ ಮಾತನಾಡಿ, ‘ಬಿಡಿಎ ಅನುದಾನ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲ. ನಾವು ಅಭಿವೃದ್ಧಿಯ ವಿರೋಧಿಗಳಲ್ಲ, ಆದರೆ, ಫುಟ್‌ಬಾಲ್ ಮೈದಾನವನ್ನು ಕ್ರೀಡಾಂಗಣವನ್ನಾಗಿ ಪರಿವರ್ತಿಸುವುದಕ್ಕೆ ವಿರೋಧವಿದೆ. ಈ ಯೋಜನೆ ಕೈಬಿಟ್ಟು ಆಸ್ಟಿನ್ ಟೌನ್ ಮೈದಾನವನ್ನು ಹಾಗೆಯೇ ಉಳಿಸಬೇಕು. ಅಭಿವೃದ್ಧಿ ಎಂದರೆ 100 ವರ್ಷಗಳ ಇತಿಹಾಸವನ್ನು ಅಳಿಸುವುದಲ್ಲ. ಈಗಾಗಲೇ ಒಂದು ಕಿಲೋ ಮೀಟರ್‌ ದೂರದಲ್ಲಿ ಮತ್ತೊಂದು ಫುಟ್‌ಬಾಲ್ ಕ್ರೀಡಾಂಗಣವಿದೆ’ ಎಂದು ಹೇಳಿದರು.

ಬಿಡಿಎ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ, ಸರ್‌ ಎಂ.ವಿಶ್ವೇಶ್ವರಯ್ಯ ಬಡಾವಣೆ, ಅರ್ಕಾವತಿ ಬಡಾವಣೆ ಮತ್ತು ಇತರೆ ಬಡಾವಣೆಗಳಲ್ಲಿ ಮೂಲಸೌಕರ್ಯ ಕೊರತೆ ಬಗ್ಗೆ ನಾಗರಿಕರು ಹಲವು ಬಾರಿ ದೂರು ನೀಡಿದ್ದಾರೆ. ಅಲ್ಲದೇ ಪೆರಿಫೆರಲ್ ರಿಂಗ್ ರೋಡ್‌ (ಪಿಆರ್‌ಆರ್‌1) ಮತ್ತು ಶಿವರಾಮ ಕಾರಂತ ಬಡಾವಣೆ ಯೋಜನೆಗೆ ಭೂಮಿ ಬಿಟ್ಟುಕೊಟ್ಟಿರುವ ಸಂತ್ರಸ್ತರು ಪರಿಹಾರಕ್ಕೆ ಕಾಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.