ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಬ್ಲೂಟೂತ್ ಬಳಸಿ 6ನೇ ರ‍್ಯಾಂಕ್

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 2:44 IST
Last Updated 14 ಅಕ್ಟೋಬರ್ 2022, 2:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಅಕ್ರಮ ಪ್ರಕರಣದಲ್ಲಿ ನಗರದ ಎಚ್‌ಎಎಲ್‌ ಸಂಚಾರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಲಕ್ಕಪ್ಪ ಸೇರಿ ಮೂವರನ್ನು ಸಿಐಡಿ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ.

‘ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಲಕ್ಕಪ್ಪ, ಒಎಂಆರ್ ಪ್ರತಿಯಲ್ಲಿ ಉತ್ತರ ಗುರುತಿಸಲು ಅಕ್ರಮವಾಗಿ ಬ್ಲೂಟೂತ್ ಉಪಕರಣ ಬಳಸಿದ್ದ. ಪತ್ರಿಕೆ–1ರಲ್ಲಿ (ಪ್ರಬಂಧ, ಭಾಷಾಂತರ, ಸಾರಾಂಶ ಬರಹ) 21.5 ಅಂಕ ಹಾಗೂ ಪತ್ರಿಕೆ–
2ರಲ್ಲಿ (ಸಾಮಾನ್ಯ ಅಧ್ಯಯನ) 135 ಅಂಕ ಪಡೆದಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ. ‘200 ಅಂಕಗಳ ಪೈಕಿ ಒಟ್ಟು 156.5 ಅಂಕ ಪಡೆದಿದ್ದ ಲಕ್ಕಪ್ಪ, ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ 6ನೇ ರ‍್ಯಾಂಕ್ ‍ಪಡೆದಿದ್ದ’ ಎಂದು ತಿಳಿಸಿವೆ.

57 ಹಾಗೂ 63ನೇ ರ‍್ಯಾಂಕ್: ‘ಸಿಂದಗಿಯ ಶ್ರೀಶೈಲ ಬಿರಾದಾರ ಹಾಗೂ ಧಾರವಾಡದ ಶ್ರೀಮಂತ್ ಸಾತಪುರೆ ಅವರನ್ನೂ ವಶಕ್ಕೆ ಪಡೆಯಲಾಗಿದೆ. ಇವರಿಬ್ಬರೂ ಬ್ಲೂಟೂತ್ ಉಪಕರಣ ಬಳಸಿ ಪರೀಕ್ಷೆ ಬರೆದು ಅಕ್ರಮ ಎಸಗಿದ್ದರು’ ಎಂದು ಸಿಐಡಿ ಮೂಲಗಳು ಹೇಳಿವೆ.

ADVERTISEMENT

‘ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಶ್ರೀಶೈಲ ಬಿರಾದಾರ್ 57ನೇ ರ‍್ಯಾಂಕ್ (ಪತ್ರಿಕೆ–1ರಲ್ಲಿ 35.5 ಅಂಕ ಹಾಗೂ ಪತ್ರಿಕೆ–2ರಲ್ಲಿ 108.75 ಅಂಕ) ಹಾಗೂ ಶ್ರೀಮಂತ್ ಸಾತಪುರೆ 63ನೇ ರ‍್ಯಾಂಕ್ (ಪತ್ರಿಕೆ 1ರಲ್ಲಿ 16.5 ಅಂಕ ಹಾಗೂ ಪತ್ರಿಕೆ 2ರಲ್ಲಿ 127.5 ಅಂಕ) ಪಡೆದಿದ್ದ’ ಎಂದು ತಿಳಿಸಿವೆ. ‘ಅಕ್ರಮದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ ಸಹಾಯದಿಂದ ಮೂವರು ಅಭ್ಯರ್ಥಿಗಳು ಬ್ಲೂಟೂತ್ ಮೂಲಕ ಪರೀಕ್ಷೆ ಬರೆದಿದ್ದರು. ಇದಕ್ಕಾಗಿ ರುದ್ರಗೌಡನಿಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.