ADVERTISEMENT

ನಾಪತ್ತೆಯಾಗಿದ್ದ ಬೆಂಗಳೂರಿನ 800 ರೌಡಿಗಳ ಪೈಕಿ 770 ಮಂದಿ ಪತ್ತೆ!

​ಪ್ರಜಾವಾಣಿ ವಾರ್ತೆ
Published 4 ಮೇ 2025, 21:14 IST
Last Updated 4 ಮೇ 2025, 21:14 IST
<div class="paragraphs"><p>ಬಂಧನ </p></div>

ಬಂಧನ

   

ಬೆಂಗಳೂರು: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿದ್ದ 800 ರೌಡಿ ಶೀಟರ್‌ಗಳ ಪೈಕಿ 770 ಮಂದಿಯನ್ನು ಪತ್ತೆ ಮಾಡಲಾಗಿದೆ.

ನಗರದಲ್ಲಿ ಪ್ರಸ್ತುತ 6 ಸಾವಿರ ಸಕ್ರಿಯ ರೌಡಿಗಳಿದ್ದು, ಈ ಪೈಕಿ 800 ಮಂದಿಯನ್ನು ಪೊಲೀಸರು ಕಣ್ಗಾವಲಿನಿಂದ ಹೊರಗಿರುವವರ (ನಾಪತ್ತೆ) ಪಟ್ಟಿಗೆ ಸೇರಿಸಿದ್ದರು. ಇವರು ಕಳ್ಳತನ ಅಥವಾ ದರೋಡೆಯಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿದ್ದಾರೆ. 

ADVERTISEMENT

ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಮಾತನಾಡಿ, ‘ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ತಡೆಯುವ ಉದ್ದೇಶದಿಂದ ರೌಡಿಗಳ ಮೇಲೆ ನಿಗಾ ಇಡಲಾಗುತ್ತದೆ. ಠಾಣೆಯಲ್ಲಿ ರೌಡಿ ಪಟ್ಟಿ ತೆರೆಯಲು ಇದು ಒಂದು ಪ್ರಮುಖ ಕಾರಣ. ಆದರೆ, ಯಾವುದೇ ರೌಡಿಯನ್ನು ನಾಪತ್ತೆ ಪಟ್ಟಿಗೆ ಸೇರಿಸಲು ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರೌಡಿ ಶೀಟರ್‌ಗಳ ಬಗ್ಗೆ ಮಾಹಿತಿ ಇರಬೇಕು. ಕೆಲವೊಮ್ಮೆ ಗಂಭೀರ ಅಪರಾಧ ಪ್ರಕರಣಗಳು ಸಂಭವಿಸಿದಾಗ, ಆರೋಪಿಗಳ ಪತ್ತೆಗೆ ರೌಡಿ ಶೀಟರ್‌ಗಳನ್ನು ಸಂಪರ್ಕಿಸಲಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿ ತಿಳಿಸಿದರು.

ದಯಾನಂದ ಅವರು 2023ರಲ್ಲಿ ಆರ್.ಆರ್. ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ವೇಳೆ ನಾಲ್ಕು ರೌಡಿಗಳನ್ನು ನಾಪತ್ತೆ ಪಟ್ಟಿಗೆ ಸೇರಿಸಿರುವ ವಿಚಾರ ಗೊತ್ತಾಯಿತು. ಬಳಿಕ ಇತರೆ ಪೊಲೀಸ್ ಠಾಣೆಗಳಿಂದ ಮಾಹಿತಿ ಸಂಗ್ರಹಿಸಿದಾಗ, ಬಹುತೇಕ ಠಾಣೆಗಳಲ್ಲಿ ಇದೇ ರೀತಿ ಅನುಸರಿಸುತ್ತಿರುವುದು ಗೊತ್ತಾಯಿತು.

ರೌಡಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ, 240 ರೌಡಿಗಳಿಗೆ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿರುವುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.