ADVERTISEMENT

Bengaluru | ಎಲ್ಲರಿಗೂ ‘ಎ’ ಖಾತಾ ಗ್ಯಾರಂಟಿ

ಬೆಂಗಳೂರಿನಲ್ಲಿರುವ ‘ಬಿ’ ಖಾತಾ, ಖಾತಾ ಹೊಂದಿರದ ಆಸ್ತಿಗಳಿಗೆ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 0:30 IST
Last Updated 18 ಜುಲೈ 2025, 0:30 IST
   
2024ರ ಸೆ.30ರೊಳಗೆ ನೋಂದಣಿ: ‘ಬಿ’ ಖಾತಾದ ನಿವೇಶನಗಳಿಗೆ ಅನ್ವಯ | ಮಾರ್ಗಸೂಚಿ ದರದಂತೆ ಶೇ 5ರಷ್ಟು ಶುಲ್ಕ | ಪ್ರತಿ ಚದರ ಮೀಟರ್‌ಗೆ ₹250 ಅಭಿವೃದ್ಧಿ ಶುಲ್ಕ

ಬೆಂಗಳೂರು: ನಗರದಲ್ಲಿ ಮಾನ್ಯತೆ ಸಿಗದೆ, ಕಟ್ಟಡ ಕಟ್ಟಲು ನಕ್ಷೆ ಲಭಿಸದ ‘ಬಿ ಖಾತಾ’  ಹೊಂದಿರುವ ಹಾಗೂ ಖಾತಾ ಹೊಂದಿರದ ಆಸ್ತಿಗಳಿಗೆ ‘ಎ’ ಖಾತಾ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ನಿರ್ಣಯ ಕೈಗೊಳ್ಳಲಾಗಿದೆ. ‘ಬಿ’ ಖಾತಾ (ಯಾವುದೇ ಅನುಮೋದನೆ ಪಡೆಯದ ಬಡಾವಣೆಗಳಲ್ಲಿ ನಿರ್ಮಿಸಿದ ನಿವೇಶನ ಹಾಗೂ ಕಟ್ಟಡ) ಆಸ್ತಿ ಹೊಂದಿದವರು, ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದರು. ಅದಕ್ಕೆ, ಪರಿಹಾರ ರೂಪಿಸಲು ಸರ್ಕಾರ ನಿರ್ಧರಿಸಿದೆ.

‘ಕಾನೂನುಬಾಹಿರವಾಗಿ ಅನಿಯಂತ್ರಿತ ಕಟ್ಟಡ ನಿರ್ಮಾಣ ಮತ್ತು ಬಡಾವಣೆಗಳ ನಿರ್ಮಾಣದಲ್ಲಿ ಶಿಸ್ತು ತರಲು, ನಗರದ ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನಗಳಿಗೆ ಕಾನೂನು ಉದ್ದೇಶಕ್ಕೆ ಅಧಿಕೃತ ‘ಎ’ ಖಾತಾ ನೀಡಲು ಸಚಿವ ಸಂಪುಟ ನಿರ್ಧರಿಸಿದೆ’ ಎಂದು ಸಚಿವ ಎಚ್‌.ಕೆ. ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನಗಳು ‘ಎ’ ಖಾತಾದ ಸಕಲ ಸೌಲಭ್ಯಗಳನ್ನು ಪಡೆಯಲು ಅರ್ಹ ವಾಗಿದ್ದು, ಅದಕ್ಕೆ ಅಗತ್ಯವಾದ ಶುಲ್ಕ, ಅಭಿವೃದ್ಧಿ ಶುಲ್ಕವನ್ನು ಬಿಬಿಎಂಪಿಗೆ ಪಾವತಿಸಬೇಕು. ಶುಲ್ಕ ಪಾವತಿ ನಂತರ, ‘ಇ’ ಖಾತಾ ಸೇರಿದಂತೆ ಕಟ್ಟಡ ನಕ್ಷೆಯೂ ಲಭ್ಯವಾಗಲಿದೆ. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ–1961ರಲ್ಲಿ (ಕೆಟಿಸಿಪಿ) ‘ಬಿ’ ಖಾತಾ ಆಸ್ತಿಗಳು ಎಂಬ ಮಾನ್ಯತೆ ಇಲ್ಲ. ಇಂತಹ ಯೋಜಿತವಲ್ಲದ ಆಸ್ತಿಗಳಲ್ಲಿ ನಿರ್ಮಿಸಲಾಗಿರುವ ಅಕ್ರಮ ಕಟ್ಟಡಗಳು ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಕುಸಿದು, ಅಸುರಕ್ಷಿತ ತಾಣಗಳಾಗಿವೆ. ಆದ್ದರಿಂದ ‘ಬಿ’ ಖಾತಾ ಆಸ್ತಿಗಳನ್ನು ಕೆಟಿಸಿಪಿ ಕಾಯ್ದೆಯ ನಿಯಂತ್ರಣಕ್ಕೆ ತರುವುದು ಅವಶ್ಯ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024 (ಜಿಬಿಜಿಎ) ಕಲಂ 3ರ 147ರಲ್ಲಿ 2024ರ ಸೆಪ್ಟೆಂಬರ್‌ 30ರ ನಂತರದ ಅನಧಿಕೃತ ಆಸ್ತಿಗಳಿಗೆ ‘ಬಿ’ ಖಾತಾ ನೀಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ, ಅನಧಿಕೃತ ಕಟ್ಟಡಗಳು ಮತ್ತು ಬಡಾವಣೆಗಳ ಅಭಿವೃದ್ಧಿಯನ್ನು ನಿಯಂತ್ರಿಸಲು, ತಡೆ ಗಟ್ಟಲು ಕಾನೂನು ಮತ್ತು ನಿಯಂತ್ರಿತ ಚೌಕಟ್ಟನ್ನು ಖಾತರಿಪಡಿಸಲು ಜಿಬಿಜಿಎ ಅಡಿ ರಚಿಸಲಾಗುವ ಎಲ್ಲ ನಗರ ಪಾಲಿಕೆಗಳಿಗೂ ಅನ್ವಯವಾಗುವಂತೆ ಎಲ್ಲ ನಿವೇಶನಗಳಿಗೆ ‘ಎ’ ಖಾತಾ ನೀಡುವ ಪ್ರಸ್ತಾವವನ್ನು ಸಚಿವ ಸಂಪುಟ ಅನುಮೋದಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನಗಳು ‘ಎ’ ಖಾತಾವನ್ನು ಪಡೆಯಬಹುದು. ನಿವೇಶನಗಳ ಮುಂದಿರುವ ಖಾಸಗಿ ರಸ್ತೆಯನ್ನು ‘ಸಾರ್ವಜನಿಕ ರಸ್ತೆ’ ಎಂದು ಘೋಷಿಸಲಾಗುತ್ತದೆ. ಭೂ ಪರಿವರ್ತನೆಯಾಗಿರುವ ಅಥವಾ ಭೂ ಪರಿವರ್ತನೆಯಾಗದ ನಿವೇಶನಗಳಿಗೆ ಮಾರ್ಗಸೂಚಿ ದರದಂತೆ ಶೇ 5ರಷ್ಟು ದರವನ್ನು ಶುಲ್ಕವನ್ನಾಗಿ ಪಾವತಿಸಬೇಕು.

ಅಭಿವೃದ್ಧಿ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿದರೆ, ಬಿಬಿಎಂಪಿ ಎಲ್ಲ ನಿವೇಶವಗಳನ್ನೂ ಆನ್‌ಲೈನ್‌ ಮೂಲಕ ಕಂದಾಯ ಇಲಾಖೆಯ ದಾಖಲೆಗಳೊಂದಿಗೆ ಕಾನೂನಾತ್ಮಕಗೊಳಿಸುತ್ತದೆ. ‘ಇ’ ಖಾತಾವನ್ನು ನೀಡುತ್ತದೆ. ನಂತರ ಕಟ್ಟಡ ನಕ್ಷೆ ಸೇರಿದಂತೆ ಬಿಬಿಎಂಪಿ
ಯಿಂದ ಎಲ್ಲ ಸೌಲಭ್ಯವನ್ನೂ ಪಡೆಯಬಹುದಾಗಿದೆ. ‘ಬಿ’ ಖಾತಾ ಹೊಂದಿರುವ ಅಥವಾ ಹೊಂದಿರದ ನಿವೇಶನಗಳಲ್ಲಿ ಕಟ್ಟಡಗಳು ಬಿಬಿಎಂಪಿ ನಿಯಮದಂತೆಯೇ ನಿರ್ಮಾಣವಾಗಿದ್ದರೆ ಅವುಗಳಿಗೆ ಕಟ್ಟಡ ನಕ್ಷೆಯನ್ನೂ ಮಂಜೂರು ಮಾಡಿಕೊಡಲಾಗುತ್ತದೆ. ನಿಯ ಉಲ್ಲಂಘಿಸಿ ಕಟ್ಟಡಗಳನ್ನು ಕಟ್ಟಿದ್ದರೆ ‘ಅಕ್ರಮ ನಿರ್ಮಾಣ’ ಎಂದು ದಾಖಲಿಸಲಾಗುತ್ತದೆ.

ಯಾರ‍್ಯಾರಿಗೆಲ್ಲ ಅನುಕೂಲ?

*ಬಿಬಿಎಂಪಿಯಿಂದ ‘ಬಿ’ ಖಾತಾ ಪಡೆದಿರುವ ನಿವೇಶನದಾರರು

*ಅನಧಿಕೃತ ನಿವೇಶನ/ ಬಡಾವಣೆಯಲ್ಲಿ ‘ಬಿ’ ಖಾತಾ ಹೊಂದಿದ್ದ ಅಥವಾ ಹೊಂದಿರದ ಕಟ್ಟಡಗಳು

*ಏಕ ನಿವೇಶನದಲ್ಲಿ ಬಿಬಿಎಂಪಿ ಖಾತಾ ಹೊಂದದೆ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌

*ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಯಾಗಿ, ಕೆಟಿಸಿಪಿ ಕಾಯ್ದೆಯಂತೆ ಅನುಮೋದನೆ ಪಡೆಯದ ಖಾಲಿ ನಿವೇಶನ

*ಭೂ ಪರಿವರ್ತನೆಯಾಗಿ, ನೋಂದಣಿ ಪತ್ರದ ಮೂಲಕ ವಿಭಾಗಗೊಂಡಿರುವ ಖಾಲಿ ನಿವೇಶನಗಳು

*ಭೂ ಪರಿವರ್ತನೆಯಾಗದೆ ವಿಭಾಗವಾಗದ ಸರ್ವೆ ಸಂಖ್ಯೆ/ ಹಿಸ್ಸಾ ಸಂಖ್ಯೆ ಖಾಲಿ ನಿವೇಶನ

*ಭೂ  ಪರಿವರ್ತನೆಯಾಗದೆ ಸರ್ವೆ ಸಂಖ್ಯೆ/ ಹಿಸ್ಸಾ ಸಂಖ್ಯೆಯಲ್ಲಿ ಅನಧಿಕೃತ ವಾಗಿ ಭಾಗವಾಗಿ 2024ರ ಸೆಪ್ಟೆಂಬರ್ 30ರೊಳಗೆ ನೋಂದಣಿ ಪತ್ರದ ಮೂಲಕ ದಾಖಲೆ ಹೊಂದಿರುವ ನಿವೇಶನ

5 ನಗರ ಪಾಲಿಕೆಗಳಿಗೆ ಒಪ್ಪಿಗೆ

ಗ್ರೇಟರ್‌ ಬೆಂಗಳೂರು ಪ್ರದೇಶದಲ್ಲಿ ಐದು ಪಾಲಿಕೆಗಳನ್ನು ರಚಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮೇ 15ರಿಂದ ಜಾರಿಗೆ ಬಂದಿರುವ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ –2024ಯಂತೆ ನಗರ ಪಾಲಿಕೆಗಳನ್ನು ರಚಿಸಲು ಸಚಿವ ಸಂಪುಟದ ಉಪ ಸಮಿತಿ ವರದಿ ನೀಡಿತ್ತು. ಅದನ್ನು ಆಧರಿಸಿ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶೀಘ್ರವೇ ಅಧಿಸೂಚನೆ ಹೊರಬೀಳಲಿದೆ.

30 ಅಡಿx40 ಅಡಿ ನಿವೇಶನಕ್ಕೆ ₹2.07 ಲಕ್ಷ

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವೇಶನವಿರುವ ಪ್ರದೇಶದಲ್ಲಿ ಮಾರ್ಗಸೂಚಿ ದರ ಪ್ರತಿ ಚದರಡಿಗೆ ₹3,000 ಇದ್ದರೆ, ₹1.80 ಲಕ್ಷ ಶುಲ್ಕ ಪಾವತಿಸಬೇಕಾಗುತ್ತದೆ. ಇದರ ಜೊತೆಗೆ, ಪ್ರತಿ ಚದರ ಮೀಟರ್‌ಗೆ ₹250ರಂತೆ ₹27,870 ಅಭಿವೃದ್ಧಿ ಶುಲ್ಕವಿರುತ್ತದೆ. 

ಉದ್ಯಾನಕ್ಕೆ ಜಾಗವಿಲ್ಲದಿದ್ದರೆ ಶುಲ್ಕ

ಉದ್ಯಾನಕ್ಕೆ ಜಾಗ ಬಿಡಲು ಅವಕಾಶವಿಲ್ಲದ 55 ಚದರ ಮೀಟರ್‌ನಿಂದ ಎರಡು ಸಾವಿರ ಚದರ ಮೀಟರ್‌ವರೆಗಿನ ನಿವೇಶನಗಳಲ್ಲಿರುವ ಕಟ್ಟಡಗಳು ಮಾರ್ಗಸೂಚಿ ದರದ ಶೇ 5ರಷ್ಟು ಶುಲ್ಕವನ್ನು ‘ಪಾರ್ಕ್‌ ಫೀ’ ಎಂದು ಪಾವತಿಸುವುದು ಕಡ್ಡಾಯವಾಗಿದೆ. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ಸೆಕ್ಷನ್‌ 13–ಇಗೆ ತಿದ್ದುಪಡಿ ತಂದು, ಪರಿಷ್ಕೃತ ಮಾಸ್ಟರ್‌ ಪ್ಲಾನ್‌–2015ರ ವಲಯ ನಿಯಮಗಳನ್ನು ಬದಲಾಯಿಸಿ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದೆ.

ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ಎರಡು ಸಾವಿರ ಚದರ ಮೀಟರ್‌ನಿಂದ 10 ಸಾವಿರ ಚದರ ಮೀಟರ್‌ವರೆಗಿನ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಅಪಾರ್ಟ್‌ಮೆಂಟ್‌ಗಳು ಶೇ 15ರಷ್ಟು ಭೂಮಿಯನ್ನು ಉದ್ಯಾನವನ್ನಾಗಿ ಅಭಿವೃದ್ಧಿಪಡಿಸುವುದು ಕಡ್ಡಾಯವಾಗಿದೆ.

ಶೇ 15ರಷ್ಟು ಭೂಮಿಯಲ್ಲಿ ಉದ್ಯಾನದ ಜೊತೆಗೆ, ಸೆಟ್‌ಬ್ಯಾಕ್‌ ಅನ್ನು 6 ಮೀಟರ್‌ಗೆ ಹೆಚ್ಚಿಸಲಾಗಿದೆ. ಇದರಿಂದ ಅಪಾರ್ಟ್‌ಮೆಂಟ್‌ಗಳ ಸುತ್ತಲೂ ಸ್ಥಳೀಯ ಜಾತಿಯ ಗಿಡ–ಮರಗಳನ್ನು ಬೆಳೆಸಲು ಸ್ಥಳ ಮೀಸಲಿರಲಿದೆ. ನಗರದಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಹಾಗೂ ರಾಜಕಾಲುವೆಗಳಲ್ಲಿ ಪ್ರವಾಹದ ಸಂದರ್ಭವನ್ನು ನಿಯಂತ್ರಿಸುವ ಸಲುವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ವಸತಿಯೇತರ, ಮಿಶ್ರ ಬಳಕೆ ಅಪಾರ್ಟ್‌ಮೆಂಟ್‌ಗಳಾದರೆ ಅಲ್ಲಿ ಉದ್ಯಾನದ ಪ್ರದೇಶವನ್ನು ಶೇ 10 ಹಾಗೂ ವಾಹನ ನಿಲುಗಡೆಯನ್ನು ಪ್ರದೇಶವನ್ನು ಶೇ 5 ಎಂದು ನಿಗದಿಪಡಿಸಲಾಗಿದೆ. ಎಲ್ಲ ರೀತಿಯ ಶುಲ್ಕವನ್ನು ಸ್ವೀಕರಿಸಲು ಪ್ರತ್ಯೇಕ ಎಸ್ಕ್ರೊ ಖಾತೆಯನ್ನು ಯೋಜನಾ ಪ್ರಾಧಿಕಾರ ನಿರ್ವಹಿಸಬೇಕು ಎಂದು ಅಧಿಸೂಚಿಸಲಾಗಿದೆ.

ನಾಲಾ ಅಥವಾ ರಾಜಕಾಲುವೆಗಳ ಬಫರ್‌ ಝೋನ್‌ನಲ್ಲಿ ರಸ್ತೆ ನಿರ್ಮಿಸಲು ಅನುವಾಗುವಂತೆಯೂ ಅಧಿಸೂಚನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.