ADVERTISEMENT

ಬೆಂಗಳೂರು | ನಾಪತ್ತೆ ಪ್ರಕರಣ: ಆಧಾರ್ ಮಾಹಿತಿ ಒದಗಿಸಲು ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 15:44 IST
Last Updated 26 ಸೆಪ್ಟೆಂಬರ್ 2025, 15:44 IST
   

ಬೆಂಗಳೂರು: ‘ನನ್ನ ಮಗ ನಾಪತ್ತೆಯಾಗಿದ್ದು ಆತ ಆಧಾರ್‌ ಬಳಕೆ ಮಾಡಿದ್ದ ಸ್ಥಳದ ವಿವರಗಳನ್ನು ಒದಗಿಸಲು ನಿರ್ದೇಶಿಸಬೇಕು’ ಎಂಬ ತಂದೆಯೊಬ್ಬರ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಮಾಹಿತಿ ಒದಗಿಸುವಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ (ಯುಐಎಡಿಐ) ನಿರ್ದೇಶಿಸಿದೆ.

ಈ ಸಂಬಂಧ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ (ಧಾರವಾಡ) ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ತನಿಖೆಯ ವೇಳೆ ಪೊಲೀಸರಾಗಲಿ ಅಥವಾ ಇತರೆ ಯಾವುದೇ ಸಂಸ್ಥೆಯಾಗಲಿ ದೃಢೀಕರಣ ಸೇರಿದಂತೆ ಆಧಾರ್‌ ಅನ್ನು ಬಳಕೆ ಮಾಡಬೇಕಾಗಿ ಬಂದರೆ ಅಂತಹ ಸಂದರ್ಭಗಳಲ್ಲಿ ಆಧಾರ್‌ ಕಾಯ್ದೆ-2016ರ ಕಲಂ 33ರ ಅನ್ವಯ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಬೇಕು. ಹೈಕೋರ್ಟ್ ಯುಐಡಿಎಐಗೆ ಆಧಾರ್‌ ವಿವರಗಳನ್ನು ಬಳಸಿಕೊಳ್ಳಲು ಮತ್ತು ಅದನ್ನು ಕೊನೆಯದಾಗಿ ಯಾವ ಸ್ಥಳದಲ್ಲಿ ಬಳಕೆ ಮಾಡಲಾಗಿದೆ ಎಂಬ ವಿವರಗಳನ್ನು ಒದಗಿಸಲು ಸೂಕ್ತ ಆದೇಶಗಳನ್ನು ಹೊರಡಿಸಲು ಸಮಯ ಮತ್ತು ಅವಕಾಶ ನೀಡುವ ಮೂಲಕ ಆದೇಶಗಳನ್ನು ನೀಡಲಿದೆ’ ಎಂದು ನ್ಯಾಯಪೀಠ ತಿಳಿಸಿದೆ.

ADVERTISEMENT

‘ಆಧಾರ್ ಕಾಯ್ದೆಯ ಕಲಂ 29ರ ಅಡಿಯಲ್ಲಿ ಮಾಹಿತಿ ನೀಡಲು ನಿರ್ಬಂಧವಿದೆ. ಆದರೆ, ಆ ನಿರ್ಬಂಧ ಮೂಲ ಬಯೋಮೆಟ್ರಿಕ್ ಮಾಹಿತಿಗಷ್ಟೇ ಸೀಮಿತವಾಗಿದೆ. ಆದರೆ, ಯಾರಾದರೂ ನಿರ್ದಿಷ್ಟವಾಗಿ ಅರ್ಜಿ ಸಲ್ಲಿಸಿದಾಗ ಆಧಾರ್‌ ಸಂಖ್ಯೆ, ಬಯೋಮೆಟ್ರಿಕ್ ಮಾಹಿತಿ ಮತ್ತು ಡೆಮೋಗ್ರಾಫಿಕ್ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ತನಿಖೆಯ ಉದ್ದೇಶಕ್ಕೆ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಯುಐಡಿಎಐಗೆ ನ್ಯಾಯಾಲಯಗಳು ಸೂಕ್ತ ನಿರ್ದೇಶನ ನೀಡಬಹುದಾಗಿದೆ’ ಎಂದು ನ್ಯಾಯಪೀಠ ವಿವರಿಸಿದೆ.

‘ನನ್ನ ಮಗ 2019ರಿಂದ ಕಾಣೆಯಾಗಿದ್ದಾನೆ. ಈವರೆಗೂ ಪತ್ತೆಯಾಗಿಲ್ಲ. ಆದರೆ, 2023ರ ಜೂನ್ 20ರಂದು ಅತನ ಆಧಾರ್‌ ಬಳಕೆ ಧೃಢೀಕರಣವಾಗಿರುವ ಮಾಹಿತಿ ಇದೆ. ಹಾಗಾಗಿ, ಆ ವಿವರಗಳನ್ನು ಒದಗಿಸಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.