ADVERTISEMENT

ಎಐ ಆಧಾರಿತ ಕೃತಕ ಬುದ್ಧಿಮತ್ತೆ ಘಟಕ ಸ್ಥಾಪನೆ: ಸಂಜೀವ್ ಕುಮಾರ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 23:35 IST
Last Updated 16 ಡಿಸೆಂಬರ್ 2025, 23:35 IST
ಕ್ವೆಸ್ಟ್ ಅಲೆಯನ್ಸ್ ಆಯೋಜಿಸಿದ್ದ ಕ್ವೆಸ್ಟ್ 2 ಲರ್ನ್ ಶೃಂಗಸಭೆಯ ಸಂವಾದದಲ್ಲಿ ಮನೋಜ್‌ ಕೊಠಾರಿ, ಡಿ ಮಾಧವಿ ಲತಾ, ಸಂಜಯ್‌ಕುಮಾರ್ ಸಿಂಗ್‌, ಕಬೇರಿ ಮುದುಲಿ ಭಾಗಿಯಾಗಿದ್ದರು
ಕ್ವೆಸ್ಟ್ ಅಲೆಯನ್ಸ್ ಆಯೋಜಿಸಿದ್ದ ಕ್ವೆಸ್ಟ್ 2 ಲರ್ನ್ ಶೃಂಗಸಭೆಯ ಸಂವಾದದಲ್ಲಿ ಮನೋಜ್‌ ಕೊಠಾರಿ, ಡಿ ಮಾಧವಿ ಲತಾ, ಸಂಜಯ್‌ಕುಮಾರ್ ಸಿಂಗ್‌, ಕಬೇರಿ ಮುದುಲಿ ಭಾಗಿಯಾಗಿದ್ದರು   

ಬೆಂಗಳೂರು: ‘ಕರ್ನಾಟಕದಲ್ಲಿ ಕೃತಕ ಬುದ್ಧಿಮತ್ತೆ ಆಧರಿತ ಚಟುವಟಿಕೆಗಳನ್ನು ಕೆಳ ಹಂತದವರೆಗೂ ವಿಸ್ತರಿಸಲು ತಂತ್ರಗಾರಿಕೆ ಹಾಗೂ ಎಐ ಘಟಕವನ್ನು ನಾಲ್ಕು ತಿಂಗಳಲ್ಲಿ ಸ್ಥಾಪಿಸಲಾಗುವುದು’ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ (ಕೆಡೆಮ್‌) ಸಿಇಒ ಸಂಜೀವ್ ಕುಮಾರ್ ಗುಪ್ತಾ ತಿಳಿಸಿದರು.

ಕ್ವೆಸ್ಟ್ ಅಲೆಯನ್ಸ್ ಆಯೋಜಿಸಿದ್ದ ಕ್ವೆಸ್ಟ್–2 ಲರ್ನ್ ಶೃಂಗಸಭೆ 2025ರಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಕಾರ್ಯತಂತ್ರ ಮತ್ತು ಬುದ್ಧಿಮತ್ತೆ ಘಟಕಗಳನ್ನು ಆರಂಭಿಸಿ ವಿಶ್ವವಿದ್ಯಾಲಯ, ಕಾಲೇಜು, ತರಬೇತಿ ಸಂಸ್ಥೆ ಮತ್ತು ಸರ್ಕಾರಿ ಡೇಟಾಬೇಸ್‌ಗಳಿಂದ ಸಂಯೋಜಿಸಲಾಗುತ್ತದೆ. ಹೊಸ ಅವಕಾಶಗಳು, ವಿವಿಧ ವಲಯಗಳ ನಡುವಿನ ಅಂತರ ತಗ್ಗಿಸಲಿವೆ. ಪ್ರಾದೇಶಿಕ ಕಾರ್ಯಪಡೆಯ ಅಗತ್ಯಗಳನ್ನು ಘಟಕ ಪೂರೈಸಲಿದೆ’ ಎಂದು ಹೇಳಿದರು.

‘ಆರು ಪ್ರಾದೇಶಿಕ ಕ್ಲಸ್ಟರ್‌ಗಳನ್ನು ಬಲಪಡಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆ, ಇನ್ಕ್ಯುಬೇಟರ್‌, ವೇಗವರ್ಧಕಗಳು ಮತ್ತು ವಿದ್ಯಾರ್ಥಿ ಸಮುದಾಯಗಳನ್ನು ಒಳಗೊಂಡ ಬಹು-ಪಾಲುದಾರರ ಕಾರ್ಯಾಗಾರಗಳ ನಂತರ ಪ್ರತಿ ಕ್ಲಸ್ಟರ್ 2031–32ರ ವೇಳೆಗೆ ಗುರಿ ಸಾಧಿಸಲಿವೆ’ ಎಂದು ತಿಳಿಸಿದರು.

ADVERTISEMENT

‘ಇದರೊಟ್ಟಿಗೆ ಪ್ರತೀ ಜಿಲ್ಲೆಯಲ್ಲಿ ಜಿಲ್ಲಾ ಕೌಶಲ ಗುಂಪು ಸ್ಥಾಪಿಸಲಾಗುತ್ತದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಈ ಗುಂಪಿನಲ್ಲಿ ಕೈಗಾರಿಕೆ, ಶೈಕ್ಷಣಿಕ ಕ್ಷೇತ್ರದವರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಇರಲಿದ್ದಾರೆ. ಈ ಗುಂಪುಗಳು ಸ್ಥಳೀಯ ಆರ್ಥಿಕತೆಗೆ ಏನು ಬೇಕು ಎಂಬುದರ ಆಧಾರದ ಮೇಲೆ ಜಿಲ್ಲಾ ಮಟ್ಟದಲ್ಲಿ ನಿರ್ದಿಷ್ಟ ಕೌಶಲ ಅಭಿವೃದ್ಧಿ ಯೋಜನೆ ವಿನ್ಯಾಸಗೊಳಿಸಲಿವೆ’ ಎಂದು ಹೇಳಿದರು.

ಆಂಧ್ರಪ್ರದೇಶದ ಸಮಗ್ರ ಶಿಕ್ಷಾ ವಿಭಾಗದ ಅಧ್ಯಾಪಕಿ ಡಿ ಮಾಧವಿ ಲತಾ, ಒಡಿಶಾ ಸರ್ಕಾರದ ಪಂಚಸಖಾ ಸಿಖ್ಯ ಸೇತು ಸಂಘಟನ್‌ನ ವಿಶೇಷ ಕರ್ತವ್ಯಾಧಿಕಾರಿ ಕಬೇರಿ ಮುದುಲಿ, ಟುರಿಯನ್ ಲ್ಯಾಬ್ಸ್‌ನ ಸಿಇಒ ಮನೋಜ್ ಕೊಠಾರಿ ಉಪಸ್ಥಿತರಿದ್ದರು.

ಶಿಕ್ಷಣ ತಜ್ಞರು, ನೀತಿ ನಿರೂಪಕರು, ತಂತ್ರಜ್ಞರು, ಕಲಾವಿದರು, ಸಂಶೋಧಕರು ಸೇರಿದಂತೆ 300 ಜನ ಕ್ವೆಸ್ಟ್ ಅಲೆಯನ್ಸ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.