ADVERTISEMENT

ವಿಮಾನ ನಿಲ್ದಾಣ ಮೆಟ್ರೊಗೆ ಬೇಕು 3 ವರ್ಷ

ಎರಡು ಹಂತದ ಕಾಮಗಾರಿ l ಪಿಲ್ಲರ್‌ಗಳ ನಿರ್ಮಾಣ ಕಾಮಗಾರಿ ಚುರುಕು l 2025ರಲ್ಲಿ ಪೂರ್ಣ

ವಿಜಯಕುಮಾರ್ ಎಸ್.ಕೆ.
Published 30 ಡಿಸೆಂಬರ್ 2022, 23:45 IST
Last Updated 30 ಡಿಸೆಂಬರ್ 2022, 23:45 IST
   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಪ್ರಯಾಣದ(ನೀಲಿ ಮಾರ್ಗ) ಕನಸು ನನಸಾಗಲು ಇನ್ನೂ ಕನಿಷ್ಠ ಮೂರು ವರ್ಷ ಬೇಕಿದೆ. ಕಾಮಗಾರಿ ವೇಗವಾಗಿ ನಡೆಯುತ್ತಿದ್ದರೂ, ಒಂದೇ ವರ್ಷದಲ್ಲಿ ಪೂರ್ಣಗೊಳ್ಳುವ ಲಕ್ಷಣಗಳಿಲ್ಲ.

ಅತಿ ಹೆಚ್ಚು ಪ್ರಯಾಣಿಕರ ಒತ್ತಡ ಇರುವ ದೇಶದ ಮೂರನೇ ವಿಮಾನ ನಿಲ್ದಾಣ ಇದಾಗಿದೆ. 2021–22ರ ಅಂಕಿ–ಅಂಶಗಳ ಪ್ರಕಾರ, 1 ಕೋಟಿ 62 ಲಕ್ಷದ 87 ಸಾವಿರ ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸಿದ್ದಾರೆ. ಬೆಂಗಳೂರಿನ ಕೇಂದ್ರ ಭಾಗದಿಂದ 35 ಕಿಲೋ ಮೀಟರ್ ದೂರದಲ್ಲಿರುವ ಈ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುವುದೇ ಸವಾಲಿನ ಕೆಲಸ. ದಟ್ಟಣೆ ಸಮಸ್ಯೆಗೆ ಪರಿಹಾರ ದೊರಕಲು ಕನಿಷ್ಠ 2025ರ ತನಕ ಕಾಯಬೇಕಾಗುತ್ತದೆ.

ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್.ಪುರ, ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಮಾರ್ಗ ನಿರ್ಮಾಣವಾಗುತ್ತಿದೆ. ಎರಡು ಹಂತದಲ್ಲಿ ಕಾಮಗಾರಿ ನಡೆಯುತ್ತಿದ್ದು, ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್‌.ಪುರ ತನಕ(ಹಂತ –2ಎ) ಮತ್ತು ಕೆ.ಆರ್‌.ಪುರದಿಂದ ವಿಮಾನ ನಿಲ್ದಾಣದ ತನಕ(ಹಂತ–2ಬಿ) ಮತ್ತೊಂದು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹಂತ–2ಎ ಕಾಮಗಾರಿ 2021ರ ಆಗಸ್ಟ್‌ನಲ್ಲಿ ಆರಂಭವಾಗಿದ್ದು, ಹಂತ–2ಬಿ ಕಾಮಗಾರಿ ಅದಕ್ಕಿಂತ ಆರು ತಿಂಗಳು ವಿಳಂಬವಾಗಿ ಆರಂಭವಾಗಿದೆ. ಆದ್ದರಿಂದ ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರ ತನಕದ ಹೊರ ವರ್ತುಲ ರಸ್ತೆಯಲ್ಲಿ ಕಾಮಗಾರಿ ಹೆಚ್ಚು ಪ್ರಗತಿಯಾಗಿದೆ. ಕಾರ್ಯಾ ರಂಭವೂ ಆರು ತಿಂಗಳು ಬೇಗ ಆಗಲಿವೆ ಎಂಬುದು ಬಿಎಂಆರ್‌ಸಿಎಲ್ ಅಧಿಕಾರಿಗಳ ಲೆಕ್ಕಾಚಾರ.

ADVERTISEMENT

ಸಂಪೂರ್ಣ ಎಲೆವೇಟೆಡ್‌(ಎತ್ತರಿಸಿದ) ಮಾರ್ಗ ಇದಾಗಿದ್ದು, ಸಿಲ್ಕ್‌ಬೋರ್ಡ್‌ನಿಂದ ಹೊರ ವರ್ತುಲ ರಸ್ತೆಯಲ್ಲೇ ರಸ್ತೆ ಮಧ್ಯದ ವಿಭಜಕದಲ್ಲಿ ಸಾಗಲಿದೆ. ಹೆಬ್ಬಾಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ನಿರ್ಮಾಣವಾಗುತ್ತಿದೆ. ಯಲಹಂಕ ವಾಯು ನೆಲೆ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ವಾಯು ಸೇನೆ ಅನುಮತಿ ನೀಡಿಲ್ಲ. ಆದ್ದರಿಂದ ಸ್ವಲ್ಪ ದೂರ ಮಾತ್ರ ಸುರಂಗ ಮಾರ್ಗದಲ್ಲಿ ಮೆಟ್ರೊ ರೈಲು ಮಾರ್ಗ ನಿರ್ಮಾಣವಾಗಲಿದೆ.

ಪಿಲ್ಲರ್‌ಗಳ ನಿರ್ಮಾಣ ಕಾಮಗಾರಿ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಪಿಲ್ಲರ್‌ಗಳ ಮೇಲೆ ಕೆಲವೆಡೆ ಕ್ಯಾಪ್‌ಗಳನ್ನು ಅಳವಡಿಸಲಾಗಿದ್ದು, ಕೆಲವೆಡೆ ಈ ಕಾಮಗಾರಿ ಪ್ರಗತಿಯಲ್ಲಿದೆ. ಇದಾದ ಬಳಿಕ ಸೆಗ್ಮೆಂಟ್‌ಗಳನ್ನು ಜೋಡಿಸಿ, ಅವುಗಳ ಮೇಲೆ ಹಳಿ ಜೋಡಣೆ, ಸಿಸ್ಟಮ್, ಸಿಗ್ನಲಿಂಗ್ ವ್ಯವಸ್ಥೆ ಆಗಬೇಕಿದೆ. ಪಿಲ್ಲರ್‌ಗಳ ಹಂತದಲ್ಲೇ ಕಾಮಗಾರಿ ಇರುವುದರಿಂದ ನಿಲ್ದಾಣಗಳ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಈ ನಡುವೆ 2023ರ ಕೊನೆಯ ವೇಳೆಗೆ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ ಎಂದು ವಿಧಾನ ಪರಿಷತ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರಷ್ಟೇ ಹೇಳಿದ್ದಾರೆ. ಸದ್ಯದ ಸ್ಥಿತಿ ಗಮನಿಸಿದರೆ 2023ರ ಕೊನೆಯ ವೇಳೆಗಲ್ಲ, 2024ರ ಕೊನೆಯ ವೇಳೆಗೂ ಕಾಮಗಾರಿ ಈ ಮಾರ್ಗ ಪ್ರಯಾಣಿಕರ ಸಂಚಾರಕ್ಕೆ ಲಭ್ಯವಾಗುವ ಲಕ್ಷಣಗಳಿಲ್ಲ.

ಸಿಲ್ಕ್‌ಬೋರ್ಡ್‌–ಕೆ.ಆರ್‌.ಪುರ ಮಾರ್ಗ 2024ರ ಕೊನೆಯಲ್ಲಿ ಪೂರ್ಣಗೊಳ್ಳಲಿದ್ದು, ಕೆ.ಆರ್.ಪುರ–ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿ 2025ರಲ್ಲಿ ಪೂರ್ಣಗೊಳ್ಳಲಿದೆ ಎಂಬುದು ಬಿಎಂಆರ್‌ಸಿಎಲ್ ಅಧಿಕಾರಿಗಳ ನಿರೀಕ್ಷೆ.

ಭೂಸ್ವಾಧೀನ ಬಹುತೇಕ ಪೂರ್ಣ

ಈ ಮಾರ್ಗದ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಕೂಡ ಬಹುತೇಕ ಪೂರ್ಣಗೊಂಡಿದೆ. ರಸ್ತೆ ವಿಭಜಕ ಮತ್ತು ರಸ್ತೆ ಬದಿಯಲ್ಲಿ ನಿರ್ಮಾಣವಾಗುತ್ತಿದ್ದು, ನಿಲ್ದಾಣಗಳ ಬಳಿ ಮಾತ್ರ ಖಾಸಗಿ ಭೂಮಿ ಸ್ವಾಧೀನ ಆಗಬೇಕಿತ್ತು. ಅದು ಬಹುತೇಕ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಶೆಟ್ಟಿಗೆರೆ ಡಿಪೊ ನಿರ್ಮಾಣಕ್ಕೆ ಅಗತ್ಯ ಇದ್ದ ಭೂಮಿಯಲ್ಲಿ 3 ಎಕರೆ ಇನ್ನೂ ಸ್ವಾಧೀನ ಅಂತಿಮವಾಗಬೇಕಿದೆ. ವ್ಯಾಜ್ಯ ಇದ್ದಿದ್ದರಿಂದ ವಿಳಂಬವಾಗಿದ್ದು, ಈಗ ಎರಡು ಎಕರೆಗೆ ಪರಿಹಾರ ವಿತರಣೆಯಾಗುತ್ತಿದೆ. ಬಾಕಿ 1 ಎಕರೆಗೆ ಪರಿಹಾರ ವಿತರಣೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಅಂಕಿ–ಅಂಶ

19.75 ಕಿ.ಮೀ.
2ಎ ಮಾರ್ಗದ ಉದ್ದ

38.44 ಕಿ.ಮೀ
2ಬಿ ಮಾರ್ಗದ ಉದ್ದ

30
ಒಟ್ಟು ನಿಲ್ದಾಣಗಳ ಸಂಖ್ಯೆ


₹14,788 ಕೋಟಿ
ಒಟ್ಟು ವೆಚ್ಚ

ಶೇ 21.50
ಕಾಮಗಾರಿ ಪೂರ್ಣಗೊಂಡಿರುವ ಪ್ರಮಾಣ

ನೀಲಿ ಮಾರ್ಗದ ನಿಲ್ದಾಣಗಳು

ಸಿಲ್ಕ್‌ ಬೋರ್ಡ್‌

ಎಚ್‌ಎಸ್‌ಆರ್ ಬಡಾವಣೆ (ವೆಂಕಟಾಪುರ)

ಅಗರ

ಇಬ್ಬಲೂರು

ಬೆಳ್ಳಂದೂರು

ಕಾಡುಬೀಸನಹಳ್ಳಿ

ಕೋಡುಬೀಸನಹಳ್ಳಿ (ದೇವರಬೀಸನಹಳ್ಳಿ)

ಮಾರತ್ತಹಳ್ಳಿ

ಇಸ್ರೊ

ದೊಡ್ಡನೆಕ್ಕುಂದಿ

ಡಿಆರ್‌ಡಿಒ ಸಂಕೀರ್ಣ

ಸೀತಾರಾಮ ಪಾಳ್ಯ (ಸರಸ್ವತಿ ನಗರ)

ಕೆ.ಆರ್. ಪುರ

ಕಸ್ತೂರಿ ನಗರ

ಹೊರಮಾವು

ಎಚ್‌ಆರ್‌ಬಿಆರ್ ಬಡಾವಣೆ

ಕಲ್ಯಾಣ ನಗರ

ಎಚ್‌ಬಿಆರ್ ಬಡಾವಣೆ

ನಾಗವಾರ

ವೀರಣ್ಣ ಪಾಳ್ಯ

ಕೆಂಪಾಪುರ

ಹೆಬ್ಬಾಳ

ಕೊಡಿಗೆಹಳ್ಳಿ

ಜಕ್ಕೂರು ಅಡ್ಡರಸ್ತೆ

ಯಲಹಂಕ

ಬಾಗಲೂರು ಅಡ್ಡರಸ್ತೆ

ಬೆಟ್ಟಹಲಸೂರು

ದೊಡ್ಡಜಾಲ

ವಿಮಾನ ನಿಲ್ದಾಣ ನಗರ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.