ADVERTISEMENT

ಆಕಾಶವಾಣಿ: ಕವಿ–ಕಾವ್ಯ ಸರಣಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 20:12 IST
Last Updated 15 ಮಾರ್ಚ್ 2021, 20:12 IST

ಬೆಂಗಳೂರು: ಕನ್ನಡ ಕಾಯಕ ವರ್ಷದ ಅಂಗವಾಗಿ ಬೆಂಗಳೂರು ಆಕಾಶವಾಣಿ ಕೇಂದ್ರವು ‘ಕುಕಿಲ್ವ ಕೋಗಿಲೆಯೇ ಪಾಡುವ ತುಂಬಿಯೇ’ ಎಂಬ ಶೀರ್ಷಿಕೆಯಡಿ ಕನ್ನಡ ಕವಿ–ಕಾವ್ಯ ಪರಂಪರಾ ಸರಣಿ ಆರಂಭಿಸಲಿದೆ.

ಕನ್ನಡ ಕಾವ್ಯದ ವಿವಿಧ ಕಾಲ ಘಟ್ಟಗಳನ್ನು ನಾಡಿನ ಕೇಳುಗರಿಗೆ ಪರಿಚಯಿಸುವ ಈ ವಿಶೇಷ ಕಾರ್ಯಕ್ರಮ ಇದೇ 17ರಿಂದ ಜೂನ್ 9ರವರೆಗೆ ಪ್ರತಿ ಬುಧವಾರ ಬೆಳಿಗ್ಗೆ 9.05ಕ್ಕೆ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರಸಾರವಾಗಲಿದೆ ಎಂದು ಆಕಾಶವಾಣಿ ಬೆಂಗಳೂರು ಕೇಂದ್ರದ ನಿರ್ದೇಶಕಿ ನಿರ್ಮಲಾ ಸಿ.ಎಲಿಗಾರ ತಿಳಿಸಿದ್ದಾರೆ.

ಶ್ರೀವಿಜಯ, ಪಂಪ, ರನ್ನ, ಕುಮಾರವ್ಯಾಸ, ಕುವೆಂಪು, ಬೇಂದ್ರೆ ಜತೆಗೆ ಇತ್ತೀಚಿನವರಾದ ಎಂ. ರಾಘವೇಂದ್ರರಾವ್, ಆರ್. ಶಂಕರನಾರಾಯಣ ಅವರ ವರೆಗಿನ ಹಲವು ಆಯ್ದ ಕವಿಗಳು ಹಾಗೂ ಅವರ ಪ್ರಮುಖ ಕಾವ್ಯಗಳ ಪರಿಚಯ ಈ ಸರಣಿಯ ಉದ್ದೇಶ. ಹಿರಿಯ ವಿದ್ವಾಂಸರು, ವಿಮರ್ಶಕರು ಕವಿ-ಕಾವ್ಯಗಳ ವಿವರವನ್ನು ಸಂಕ್ಷಿಪ್ತವಾಗಿ ಕೇಳುಗರಿಗೆ ಕಟ್ಟಿ ಕೊಡಲಿದ್ದಾರೆ.

ADVERTISEMENT

ಒಟ್ಟಾರೆ 13 ಕಾರ್ಯಕ್ರಮಗಳ ಈ ಸರಣಿಯ ಪ್ರಾಯೋಜನೆಯನ್ನು ಬೆಂಗಳೂರಿನ ಗಮಕ-ಶಂಕರ ಸಂಸ್ಥೆ ಹೊತ್ತು ಕೊಂಡಿದೆ. ನಿಲಯದ ಕಾರ್ಯಕ್ರಮ ನಿರ್ವಾಹಕ ಶರಣಬಸವ ಚೋಳಿನಈ ಸರಣಿಯ ನಿರ್ಮಾಣ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.