ADVERTISEMENT

ಮರೆಗುಳಿ ಆರೈಕೆಗೆ ‘ಡೆಮ್‌ ಕನೆಕ್ಟ್‌’

ಆರೈಕೆದಾರರು, ವೃತ್ತಿಪರರಿಂದ ಮಾನವ ಸರಪಳಿ ರಚಿಸಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 22:34 IST
Last Updated 21 ಸೆಪ್ಟೆಂಬರ್ 2020, 22:34 IST
ನಗರದ ಯುಬಿ ಸಿಟಿಯಲ್ಲಿ ಸೋಮವಾರ ಮಾನವ ಸರಪಳಿ ‘ಮರೆಗುಳಿ ಕಾಯಿಲೆ’ ಕುರಿತು ಜಾಗೃತಿ ಮೂಡಿಸಲಾಯಿತು
ನಗರದ ಯುಬಿ ಸಿಟಿಯಲ್ಲಿ ಸೋಮವಾರ ಮಾನವ ಸರಪಳಿ ‘ಮರೆಗುಳಿ ಕಾಯಿಲೆ’ ಕುರಿತು ಜಾಗೃತಿ ಮೂಡಿಸಲಾಯಿತು   

ಬೆಂಗಳೂರು:‘ಕೋವಿಡ್ ನಿರ್ಬಂಧಗಳು ಮರೆಗುಳಿತನವಿರುವ ವ್ಯಕ್ತಿಯ ಮತ್ತು ಅವರ ಆರೈಕೆದಾರರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಅವರನ್ನು ಹೆಚ್ಚು ದುರ್ಬಲಗೊಳಿಸುತ್ತಿದೆ. ಇದು ಕುಟುಂಬ ಆರೈಕೆದಾರರ ಒತ್ತಡವನ್ನು ಹೆಚ್ಚಿಸುತ್ತಿದೆ...’

ವಿಶ್ವ ಮರೆಗುಳಿಗಳ ದಿನದ ಅಂಗವಾಗಿನೈಟಿಂಗೇಲ್‌ ಮೆಡಿಕಲ್‌ ಟ್ರಸ್ಟ್‌ ಮತ್ತು ಎಆರ್‌ಡಿಎಸ್‌ಐ ಸಂಸ್ಥೆ ಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರೈಕೆದಾರರು ಈ ಆತಂಕ ವ್ಯಕ್ತಪಡಿಸಿದರು.

‘ಮಕ್ಕಳು ತಮ್ಮ ಪ್ರೀತಿಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯುವಾಗ, ಮರೆಗುಳಿತನದ ಲಕ್ಷಣಗಳನ್ನು ಅಂದರೆ ನೆನಪಿನ ನಷ್ಟ, ನಡವಳಿಕೆಯಲ್ಲಿ ಬದಲಾವಣೆಗಳು ಮುಂತಾದವುಗಳನ್ನು ಗಮನಿಸಿದ್ದಾರೆ. ಆದರೆ ತಜ್ಞರನ್ನು ನೇರವಾಗಿ ಭೇಟಿ ಮಾಡಲು ಮತ್ತು ಔಪಚಾರಿಕ ರೋಗನಿರ್ಣಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇಂಥ ಕಠಿಣ ಸಮಯದಲ್ಲಿ, ಕುಟುಂಬ ಸದಸ್ಯರಿಗೆ ಸಹಾಯ ಮಾಡಲು ಮತ್ತು ತಜ್ಞರ ಸಲಹೆ ನೀಡಲು ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಆ್ಯಪ್‌ ಬಿಡುಗಡೆ:ಮರೆಗುಳಿಗಳ ಆರೈಕೆಗಾಗಿ ಸೋಮವಾರ ‘ಡೆಮ್‌ ಕನೆಕ್ಟ್‌’ ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಲಾಯಿತು.ಲಕ್ಷ್ಮಿ ನಾರಾಯಣ ಗುಪ್ತ ಮತ್ತು ಕೆಲವು ಕುಟುಂಬ ಆರೈಕೆದಾರರು ಬಿಡುಗಡೆ ಮಾಡಿದರು.

ಮರೆಗುಳಿತನಕ್ಕೆ ಸಂಬಂಧಿಸಿದ ಆರೈಕೆ ಮತ್ತು ಬೆಂಬಲವನ್ನು ಈ ಆ್ಯಪ್‌ ಒದಗಿಸಲಿದೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಲಭ್ಯ ಇದ್ದು, ಸಂಪೂರ್ಣ ಉಚಿತವಾಗಿದೆ. ‌

ಬಳಕೆದಾರರು ತಮ್ಮ ಪ್ರೀತಿಪಾತ್ರರ ಅಥವಾ ತಮ್ಮ ಮೆದುಳಿನ ಸಾಮರ್ಥ್ಯವನ್ನು ಇದರಿಂದ ತಿಳಿದುಕೊಳ್ಳಬಹುದು. ಮರೆಗುಳಿತನದ ತಜ್ಞರೊಂದಿಗೆ ಚಾಟ್ ಅಥವಾ ವಿಡಿಯೊ ಕರೆ ಆಯ್ಕೆಗಳ ಮೂಲಕ ಯಾವುದೇ ಸಮಯದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಸಂಪರ್ಕಿಸಬಹುದು.

ರೋಗಿಯ ವರ್ತನೆಯ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗದಿರುವ ಸಮಯದಲ್ಲಿ ಕುಟುಂಬದ ಆರೈಕೆದಾರರು ತಜ್ಞರನ್ನು ಸಂಪರ್ಕಿಸಿ ಸಲಹೆ ಮತ್ತು ಬೆಂಬಲ ಪಡೆಯುವ ಆಯ್ಕೆ ಇದೆ.

ಮಾನವ ಸರಪಳಿ:ಈ ಕಾಯಿಲೆಯಿಂದ ಬಳಲುತ್ತಿರುವವರ ಕುಟುಂಬದ ಆರೈಕೆ ದಾರರು,ವೈದ್ಯಕೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಯುಬಿ ಸಿಟಿಯಲ್ಲಿ ಮಾನವ ಸರಪಳಿಯನ್ನು ರಚಿಸಿದರು.

ಭಾರತದಲ್ಲಿ 52 ಲಕ್ಷಕ್ಕೂ ಹೆಚ್ಚು ಮಂದಿಗೆ ಮರೆಗುಳಿತನ ಇದೆ ಎಂದು ಸಾಂಕೇತಿಕವಾಗಿ ತೋರಿಸಲು ಸುಮಾರು 50 ಜನ 52 ಮೀಟರ್ ಉದ್ದದ ಬ್ಯಾನರ್ ಅನ್ನು ಹಿಡಿದು ಮಾನವ ಸರಪಳಿಯನ್ನು ರೂಪಿಸಿ,ಮರೆಗುಳಿತನದ ಬಗ್ಗೆ ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.