ADVERTISEMENT

ಸ್ಕೂಟರ್‌ನಲ್ಲಿ ದೇಶ ಸುತ್ತುತ್ತಿರುವ ಮೈಸೂರಿನ ತಾಯಿ ಮಗನಿಗೆ ಮಹೀಂದ್ರ ಉಡುಗೊರೆ!

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 9:11 IST
Last Updated 23 ಅಕ್ಟೋಬರ್ 2019, 9:11 IST
   

ಬೆಂಗಳೂರು: ಬಜಾಜ್‌ ಚೇತಕ್‌ ಸ್ಕೂಟರ್‌ನಲ್ಲಿ ದೇಶದ ತೀರ್ಥಕ್ಷೇತ್ರಗಳ ಯಾತ್ರೆ ಕೈಗೊಂಡಿರುವ ಮೈಸೂರಿನ ತಾಯಿ ಮತ್ತು ಮಗನಿಗೆ ಖ್ಯಾತ ಆಟೊಮೊಬೈಲ್‌ ಉದ್ಯಮಿ ಆನಂದ್‌ ಮಹೀಂದ್ರ ಅವರು ಕಾರನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.

ಮೈಸೂರಿನ ಡಿ.ಕೃಷ್ಣಕುಮಾರ್‌ ಅವರು ತಮ್ಮ70 ವರ್ಷ ವಯಸ್ಸಿನ ತಾಯಿ ಚೂಡಾರತ್ನ ಅವರನ್ನು ತಮ್ಮ ತಂದೆ ಕೊಡಿಸಿದ ‘ಬಜಾಜ್‌ ಚೇತಕ್‌’ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ತೀರ್ಥಯಾತ್ರೆ ಕೈಗೊಂಡಿರುವ ಕುರಿತಾದ ವಿಡಿಯೊವೊಂದನ್ನುಮನೋಜ್‌ ಕುಮಾರ್‌ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೊ ಗಮನಿಸಿದಆನಂದ್‌ ಮಹೀಂದ್ರ ಅವರು ಬುಧವಾರ ಟ್ವೀಟ್‌ ಮಾಡಿ ಕಾರು ನೀಡುವ ಭರವಸೆ ನೀಡಿದ್ದಾರೆ.

‘ಇದೊಂದು ಅದ್ಭುತ ಕತೆ. ಅಮ್ಮನ ಪ್ರೀತಿಯ ಜೊತೆಗೆ ದೇಶದ ಮೇಲಿನ ಪ್ರೀತಿಯನ್ನೂ ಬೆಸೆದುಕೊಂಡಿರುವ ಕಥೆ.ಈ ವಿಡಿಯೊಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಮನೋಜ್‌. ಅಮ್ಮನನ್ನು ಪ್ರೀತಿಸುವ ಈ ಮಗನ ಸಂಪರ್ಕ ದೊರಕಿಸಿಕೊಡಿ.ಅವರಿಗೆ ಮಹೀಂದ್ರKUV 100 NXT ಕಾರು ಉಡುಗೊರೆ ಕೊಡಬೇಕೆಂದುಕೊಂಡಿದ್ದೇನೆ. ಅವರು ಕಾರಿನಲ್ಲೇ ತಾಯಿಯ ತೀರ್ಥಯಾತ್ರೆ ಮಾಡಿಸಬಹುದು ಎಂದು ಆನಂದ್‌ ಮಹೀದ್ರಟ್ವೀಟ್‌ ಮಾಡಿದ್ದಾರೆ.

ADVERTISEMENT

ಏನಿದು ತಾಯಿ ಮಗನ ಭಾರತ ಪರ್ಯಟನೆ ಕತೆ?

‘67 ವರ್ಷವಾಯಿತು... ಇಲ್ಲಿರುವ ಬೇಲೂರು ಹಳೇಬೀಡನ್ನೇ ನೋಡಲಾಗಲಿಲ್ಲವಲ್ಲ,’ ಎಂದು ಚೂಡಾರತ್ನಮ್ಮ ಅವರು ಹೇಳಿಕೊಂಡಿದ್ದರಿಂದ ಮರುಗಿದ ಕೃಷ್ಣ ಕುಮಾರ್‌, ಸ್ಕೂಟರ್‌ನಲ್ಲೇ ತಾಯಿಯೊಂದಿಗೆತೀರ್ಥ ಯಾತ್ರೆ ಕೈಗೊಂಡಿದ್ದಾರೆ.ಬೇಲೂರು ಹಳೇಬೀಡು ಮೂಲಕ ಆರಂಭವಾಗಿರುವ ಅವರ ತೀರ್ಥಯಾತ್ರೆ ಈಗ ನೇಪಾಳ, ಭೂತಾನ್‌ಗಳನ್ನು ಸುತ್ತಿದೆ.

2018ರ ಜನವರಿ 16ರ ರಂದು ಮೈಸೂರಿನಿಂದ ಯಾತ್ರೆ ಆರಂಭಿಸಿರುವ ಇವರು, ಇದುವರೆಗೆ ಸಾವಿರಾರು ಕಿಲೋಮೀಟರ್‌ ಯಾತ್ರೆಯನ್ನು ತಮ್ಮ ತಾಯಿಯೊಂದಿಗೆ ಸ್ಕೂಟರ್‌ನಲ್ಲಿ ಕ್ರಮಿಸಿದ್ದಾರೆ. ಈ ಸ್ಕೂಟರ್‌ ಕೃಷ್ಣ ಕುಮಾರ್‌ಗೆ ಅವರ ತಂದೆ ಕೊಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.