ADVERTISEMENT

ಅಕ್ರಮ ಪೋಡಿ: ಸರ್ಕಾರದ 4 ಎಕರೆ ಜಮೀನು ಕಬಳಿಕೆ! ಕ್ರಿಮಿನಲ್ ಪ್ರಕರಣ

ಕೋಟ್ಯಂತರ ಮೌಲ್ಯದ ಆಸ್ತಿ * ಭೂ ದಾಖಲೆಗಳ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ

ಸಂತೋಷ ಜಿಗಳಿಕೊಪ್ಪ
Published 16 ಡಿಸೆಂಬರ್ 2023, 20:11 IST
Last Updated 16 ಡಿಸೆಂಬರ್ 2023, 20:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಅಂಜನಾಪುರ ಗ್ರಾಮದಲ್ಲಿರುವ ಸರ್ಕಾರಿ ಜಮೀನು ಕಬಳಿಸಲು ನೆರವು ನೀಡಿರುವ ಆರೋಪದಡಿ ಭೂ ದಾಖಲೆಗಳ ಇಲಾಖೆಯ ನಾಲ್ವರು ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

‘ಉತ್ತರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿರುವ ಅಂಜನಾಪುರದ ಸರ್ವೆ ನಂಬರ್ 49ರಲ್ಲಿರುವ 4 ಎಕರೆ ಜಮೀನು ಒತ್ತುವರಿ ಸಂಬಂಧ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಚಿನ್ ಅವರು ದೂರು ನೀಡಿದ್ದಾರೆ. ಆರೋಪಿಗಳು ಎನ್ನಲಾದ ಭೂ ದಾಖಲೆಗಳ ಕಚೇರಿಯ ಸೂಪರಿಂಟೆಂಡೆಂಟ್‌ ಸಿ.ಎಚ್. ಕೃಷ್ಣ, ತಪಾಸಣೆಗಾರರಾದ ಬಿ.ಜೆ. ರಾಜಗೋಪಾಲ್, ಕುಮಾರಸ್ವಾಮಿ ಹಾಗೂ ಭೂ ಮಾಪಕ ಉಮೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಹಲಸೂರು ಗೇಟ್ ಠಾಣೆಯ ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘2006ರಿಂದ 2009ರವರೆಗೆ ನಡೆದಿರುವ ಕೃತ್ಯದ ಸಂಬಂಧ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳಿಗೆ ನೋಟಿಸ್ ನೀಡಿ, ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಾಗುವುದು. ಅವರ ಹೇಳಿಕೆ ದಾಖಲಿಸಿಕೊಂಡ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಪೋಡಿ: ‘ಅಂಜನಾಪುರ ಗ್ರಾಮದಲ್ಲಿ ನೈಸ್ ರಸ್ತೆ ಹಾದು ಹೋಗಿದೆ. ಈ ರಸ್ತೆಯ ಪಕ್ಕದಲ್ಲಿಯೇ 4 ಎಕರೆ ಸರ್ಕಾರಿ ಜಮೀನು ಇದೆ. ಅಕ್ರಮವಾಗಿ ಪೋಡಿ ಮಾಡಿದ್ದ ಅಧಿಕಾರಿಗಳು, ಜಮೀನು ಕಬಳಿಸಲು ನೆರವು ನೀಡಿದ್ದರೆಂಬುದು ಇಲಾಖೆಯ ಆಂತರಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಕಚೇರಿಯಲ್ಲಿ ಈ ಹಿಂದೆ ಸೂಪರಿಂಟೆಂಡೆಂಟ್‌ ಆಗಿ ಸಿ.ಎಚ್. ಕೃಷ್ಣ (ಸದ್ಯ ಮಾಗಡಿ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ), ತಪಾಸಣೆಗಾರರಾಗಿ ಬಿ.ಜೆ. ರಾಜಗೋಪಾಲ್ (ಸದ್ಯ ಯಲಹಂಕ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ), ಕುಮಾರಸ್ವಾಮಿ (ಸದ್ಯ ದೊಡ್ಡಬಳ್ಳಾಪುರ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ) ಹಾಗೂ ಭೂ ಮಾಪಕರಾಗಿ ಉಮೇಶ್ (ಸದ್ಯ ಮಂಡ್ಯ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿ) ಕೆಲಸ ಮಾಡುತ್ತಿದ್ದರು.’

‘2006ರಿಂದ 2009ರವರೆಗೆ ಜಮೀನನ್ನು ಅಕ್ರಮವಾಗಿ ಪೋಡಿ ಮಾಡಿದ್ದರು. ಮುನಿಯಪ್ಪ, ಮುನಿಸ್ವಾಮಿ, ಕೃಷ್ಣಪ್ಪ, ಅನಂತಯ್ಯ, ಮೊಹಮ್ಮದ್ ಹುಸೇನ್, ವಜ್ರಮುನಿ ಉರುಫ್ ಬಾಬು, ಶಾಂತಕುಮಾರಿ, ಲಕ್ಷ್ಮಣ ಬಾಬು, ನಾರಾಯಣ ರೆಡ್ಡಿ, ವಿ. ಚಂದ್ರಶೇಖರ್ ಹೆಸರಿಗೆ ಜಮೀನು ಅಕ್ರಮವಾಗಿ ಪೋಡಿ ಆಗಿತ್ತು’ ಎಂದು ಮೂಲಗಳು ತಿಳಿಸಿವೆ.

ಒತ್ತುವರಿ ತೆರವು: ‘ದಾಖಲೆಗಳ ಪರಿಶೀಲನೆ ವೇಳೆ ಅಕ್ರಮ ಪೋಡಿ ಪತ್ತೆ ಮಾಡಿದ್ದ ಸರ್ಕಾರ, ಮರು ಪೋಡಿಗೆ ಆದೇಶ ಹೊರಡಿಸಿತ್ತು. ಅಧಿಕಾರಿಗಳು ಅಕ್ರಮ ಪೋಡಿ ಮಾಡಿದ್ದು ಪತ್ತೆಯಾಗಿತ್ತು. ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು, ಒತ್ತುವರಿ ತೆರವು ಮಾಡಿ ಜಮೀನನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡಿದ್ದರು.’

‘ಜಮೀನು ಕಬಳಿಸಲು ನೆರವು ನೀಡಿದ್ದವರು ಯಾರು? ಎಂಬುದನ್ನು ಪತ್ತೆ ಮಾಡಲು ವಿಚಾರಣೆ ನಡೆಸಿದ್ದರು. ಕೃಷ್ಣ, ರಾಜಗೋಪಾಲ್, ಕುಮಾರಸ್ವಾಮಿ ಹಾಗೂ ಉಮೇಶ್ ಅವರು ಕರ್ತವ್ಯಲೋಪ ಎಸಗಿದ್ದು ಗೊತ್ತಾಗಿತ್ತು. ನಾಲ್ವರನ್ನೂ ಸೇವೆಯಿಂದ ಅಮಾನತು ಮಾಡಲಾಗಿತ್ತು. ಇದೀಗ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಒತ್ತುವರಿ ತೆರವು’

‘ದಾಖಲೆಗಳ ಪರಿಶೀಲನೆ ವೇಳೆ ಅಕ್ರಮ ಪೋಡಿ ಪತ್ತೆ ಮಾಡಿದ್ದ ಸರ್ಕಾರ, ಮರು ಪೋಡಿಗೆ ಆದೇಶ ಹೊರಡಿಸಿತ್ತು. ಅಧಿಕಾರಿಗಳು ಅಕ್ರಮ ಪೋಡಿ ಮಾಡಿದ್ದು ಪತ್ತೆಯಾಗಿತ್ತು. ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು, ಒತ್ತುವರಿ ತೆರವು ಮಾಡಿ ಜಮೀನನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡಿದ್ದರು’ ಎಂದು ಮೂಲಗಳು ಹೇಳಿವೆ

‘ಜಮೀನು ಕಬಳಿಸಲು ನೆರವು ನೀಡಿದ್ದವರು ಯಾರು? ಎಂಬುದನ್ನು ಪತ್ತೆ ಮಾಡಲು ವಿಚಾರಣೆ ನಡೆಸಿದ್ದರು. ಕೃಷ್ಣ, ರಾಜಗೋಪಾಲ್, ಕುಮಾರಸ್ವಾಮಿ ಹಾಗೂ ಉಮೇಶ್ ಅವರು ಕರ್ತವ್ಯಲೋಪ ಎಸಗಿದ್ದು ಗೊತ್ತಾಗಿತ್ತು. ನಾಲ್ವರನ್ನೂ ಸೇವೆಯಿಂದ ಅಮಾನತು ಮಾಡಲಾಗಿತ್ತು. ಇದೀಗ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹಿರಿಯ ಅಧಿಕಾರಿಗಳ ವಿಚಾರಣೆ: ಮಾಹಿತಿ

‘ಪ್ರಕರಣ ಸಂಬಂಧ ಆರೋಪಿಗಳ ವಿಚಾರಣೆ ನಡೆಸಲಾಗುವುದು. ಅವರ ಹೇಳಿಕೆಯಲ್ಲಿ ಹಿರಿಯ ಅಧಿಕಾರಿಗಳ ಬಗ್ಗೆ ಮಾಹಿತಿ ಇದ್ದರೆ, ಅವರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.