
ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಅಪಾರ್ಟ್‌ಮೆಂಟ್ ಆವರಣ ಹಾಗೂ ಫ್ಲ್ಯಾಟ್‌ಗಳಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೇ ಮುಚ್ಚಿಟ್ಟಿದ್ದ ಪ್ರಾವಿಡೆಂಟ್ ಸನ್ ವರ್ತ್ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಹಾಗೂ ಅಪಾರ್ಟ್‌ಮೆಂಟ್‌ಗೆ ಸೆಕ್ಯೂರಿಟಿ ಕಲ್ಪಿಸಿರುವ ‘ಟೈಕೊ ಸೆಕ್ಯೂರಿಟಿಯ ಏಜೆನ್ಸಿ’ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಸುಲಿಗೆ, ದರೋಡೆ, ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಹೊರ ರಾಜ್ಯದವರಿಗೆ ಸೆಕ್ಯೂರಿಟಿ ಏಜೆನ್ಸಿ ಹಾಗೂ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ನೆರವು ನೀಡುತ್ತಿರುವುದು ತನಿಖೆಯಿಂದ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) 211, 238, 239, 3(5), 3(6) ಹಾಗೂ ಎನ್‌ಡಿಪಿಎಸ್ ಕಾಯ್ದೆ ಸೆಕ್ಷನ್ 25ರ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಬಿಹಾರ, ಛತ್ತೀಸಗಢ, ಒಡಿಶಾ, ಅಸ್ಸಾಂ ಸೇರಿದಂತೆ ಹೊರ ರಾಜ್ಯಗಳಿಂದ ಕೆಲಸ ಅರಸಿ ನಗರಕ್ಕೆ ಬಂದಿರುವ ನೂರಾರು ಮಂದಿ ಈ ಅಪಾರ್ಟ್‌ಮೆಂಟ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅವರಲ್ಲಿ ಕೆಲವರು ಅಕ್ರಮ ಚಟುವಟಿಕೆಯಲ್ಲಿ ಭಾಗಿ ಆಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಅಪರಾಧ ಕೃತ್ಯದಲ್ಲಿ ಭಾಗಿ ಆದವರಿಗೆ ಕಾನೂನು ಬಾಹಿರವಾಗಿ ದಂಡ ವಿಧಿಸುವಂತಹ ಬೈಲಾ ರಚಿಸಿಕೊಂಡು ಕೃತ್ಯದಲ್ಲಿ ಭಾಗಿಯಾದವರನ್ನು ಕಾನೂನು ಬಾಹಿರವಾಗಿ ವಿಚಾರಣೆ ನಡೆಸಲಾಗುತ್ತಿತ್ತು. ಅಲ್ಲದೇ ದಂಡವನ್ನು ಸಂಗ್ರಹಿಸಿ ಆರೋಪಿಗಳನ್ನು ಬಿಡುತ್ತಿದ್ದರು. ಇದರಿಂದ ನೊಂದವರಿಗೆ ನ್ಯಾಯ ಕಲ್ಪಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಪೊಲೀಸರು ಹೇಳಿದರು.
ನಗರದಲ್ಲಿ ಇತ್ತೀಚೆಗೆ ಹೊರ ರಾಜ್ಯದವರಿಂದ ಅತಿ ಹೆಚ್ಚು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ನಕಲಿ ದಾಖಲೆ ನೀಡಿ ಡೆಲಿವರಿ ಬಾಯ್‌ಗಳಾಗಿ ಕೆಲಸಕ್ಕೆ ಸೇರಿಕೊಂಡು ಗ್ರಾಹಕರಿಗೆ ತಲುಪಿಸಬೇಕಾದ ಬೆಲೆಬಾಳುವ ಮೊಬೈಲ್, ಲ್ಯಾಪ್‌ಟಾಪ್ ಸಮೇತ ಪರಾರಿ ಆಗುತ್ತಿದ್ದಾರೆ. ಲೈಂಗಿಕ ದೌರ್ಜನಗಳಂತಹ ಪ್ರಕರಣಗಳಲ್ಲಿ ಹೊರ ರಾಜ್ಯದವರು ಭಾಗಿ ಆಗುತ್ತಿರುವುದು ತನಿಖೆಯಿಂದ ಪತ್ತೆಯಾಗಿದೆ. ಈ ರೀತಿ ಬೈಲಾ ಮಾಡಿಕೊಂಡು ಅಪರಾಧ ಚಟುವಟಿಕೆ ಮುಚ್ಚಿಟ್ಟವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.