ADVERTISEMENT

ಜಾಲಹಳ್ಳಿ ಕ್ರಾಸ್‌: ನನೆಗುದಿಗೆ ಬಿದ್ದ ಅಂಡರ್‌ಪಾಸ್ ಕಾಮಗಾರಿ

ಆರು ವರ್ಷಗಳ ಹಿಂದೆ ಆರಂಭವಾದ ಯೋಜನೆ * ಭೂ ಸ್ವಾಧೀನ ಪ್ರಕ್ರಿಯೆಗೆ ತೊಡಕು

ಗಾಣಧಾಳು ಶ್ರೀಕಂಠ
Published 14 ಮಾರ್ಚ್ 2025, 22:31 IST
Last Updated 14 ಮಾರ್ಚ್ 2025, 22:31 IST
   

ಬೆಂಗಳೂರು: ಸಂಚಾರ ದಟ್ಟಣೆಯಿಂದಲೇ ‘ಕುಖ್ಯಾತಿ‘ ಪಡೆದಿರುವ ಜಾಲಹಳ್ಳಿ ಕ್ರಾಸ್‌ನಲ್ಲಿ ಜಾರಿಗೊಳ್ಳಬೇಕಿದ್ದ ‘ಗ್ರೇಡ್‌ ಸೆಪರೇಟರ್‌’ ಯೋಜನೆ ಏಳು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ನಿತ್ಯ ಸಾವಿರಾರು ವಾಹನ ಚಾಲಕರು, ವೃದ್ಧರು, ಮಕ್ಕಳು ಹಾಗೂ ಮಹಿಳೆಯರು ಕಾಮಗಾರಿ ವಿಳಂಬದಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಪಾದಚಾರಿಗಳು ಜೀವ ಭಯದಲ್ಲೇ ರಸ್ತೆ ದಾಟುತ್ತಿದ್ದಾರೆ.‌

ದೇವನಹಳ್ಳಿ, ಯಲಹಂಕ, ವಿದ್ಯಾರಣ್ಯಪುರ ಭಾಗದಿಂದ ಪೀಣ್ಯ ಕೈಗಾರಿಕಾ ಪ್ರದೇಶ, ಸುಂಕದ
ಕಟ್ಟೆಗೆ ಸಂಪರ್ಕ ಕಲ್ಪಿಸುವ ಜಾಲಹಳ್ಳಿ ಜಂಕ್ಷನ್‌ನಲ್ಲಿ ದಿನವಿಡೀ ದಟ್ಟಣೆ ಇರುತ್ತದೆ. 

ADVERTISEMENT

ರಾಜ್ಯದ 17ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿರುವ ಈ ವೃತ್ತದಲ್ಲಿ ಬಸ್‌, ಲಾರಿಗಳ ಸಂಚಾರ ನಿರಂತರವಾಗಿರುತ್ತವೆ. ತುಮಕೂರು, ಉತ್ತರ ಕರ್ನಾಟಕದ ಊರುಗಳಿಗೆ ತೆರಳುವವರು, ಕೆಲಸಕ್ಕೆ ಹೋಗುವ ಕಾರ್ಮಿಕರು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಿಗಾಗಿ ಇಲ್ಲೇ ಕಾಯುತ್ತಾರೆ. ಹೀಗಾಗಿ ಬೆಳಿಗ್ಗೆ ಮತ್ತು ಸಂಜೆ ವೃತ್ತ ದಟ್ಟಣೆಯಿಂದ ಕೂಡಿರುತ್ತದೆ.

ಸಂಚಾರ ದಟ್ಟಣೆ ನಿವಾರಿಸಿ, ಸಿಗ್ನಲ್ ಮುಕ್ತ ವೃತ್ತವಾಗಿಸಲು ಬಿಬಿಎಂಪಿ 2017–18ನೇ ಸಾಲಿನ ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆ ಅಡಿ, ಜಾಲಹಳ್ಳಿ ಜಂಕ್ಷನ್‌ನಲ್ಲಿ ಗ್ರೇಡ್‌ ಸಪರೇಟರ್‌ (ಅಂಡರ್‌ಪಾಸ್) ನಿರ್ಮಿಸಲು, ₹57 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಯಿತು.

2019ರಲ್ಲಿ ಕಾಮಗಾರಿ ಆರಂಭಕ್ಕೆ ಕಾರ್ಯಾದೇಶ ನೀಡಲಾಗಿದೆ. 2023, ಮೇ 31ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿ ನೀಡಲಾಗಿತ್ತು. 2023ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಮಗಾರಿಯ ಭಾಗವಾಗಿ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯ (ಎಸ್‌.ಎಂ. ರಸ್ತೆ) ಒಂದು ಬದಿಯಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಯಿತು. ಆದರೆ, ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಮಳಿಗೆ ಮಾಲೀಕರು ಹೆಚ್ಚಿನ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವಾಹನ ಸಂಚಾರದ ನಡುವೆ ರಸ್ತೆ ದಾಟುತ್ತಿರುವ ನಾಗರಿಕರು 
ಅಂಡರ್‌ಪಾಸ್‌ ನಿರ್ಮಾಣಕ್ಕಾಗಿ ಕಟ್ಟಡ ತೆರವುಗೊಳಿಸಲು ಗುರುತಿಸಿರುವುದು
ಎಸ್‌.ಎಂ. ರಸ್ತೆಯ ಒಂದು ಬದಿಯಲ್ಲಿ ಕಟ್ಟಡಗಳನ್ನು ತೆರವುಗೊಳಿಸಿರುವ ಸ್ಥಳ
ಪ್ರಜಾವಾಣಿ ಗ್ರಾಫಿಕ್ಸ್‌

‘ಸರಿಯಾದ ಪರಿಹಾರ ನೀಡಿ’

ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಕಟ್ಟಡಗಳ ತೆರವಿಗೆ ಅಳತೆ ಮಾಡಲಾಯಿತು. ನಂತರ ನಮ್ಮ ವಾಣಿಜ್ಯ ಮಳಿಗೆಗಳಿಗೆ ಸರಿಯಾದ ನಿಗದಿತ ಬೆಲೆ ನೀಡುತ್ತಿಲ್ಲ. ಫೋನ್ ಮೂಲಕ ಸಂಪರ್ಕಿಸಿದರು. ಆದರೆ ಯಾವುದೇ ನೋಟಿಸ್ ನೀಡಲಿಲ್ಲ ಕಾಮಗಾರಿ ಕೆಲಸವೂ ಹಾಗೆ ಉಳಿದಿದೆ. ನಮಗೆ ಈಗಿನ ಮಾರುಕಟ್ಟೆ ಬೆಲೆ ನೀಡಿ ಅಂಡರ್ ಪಾಸ್ ಮಾಡಲು ಯಾವುದೇ ಅಭ್ಯಂತರವಿಲ್ಲ. ಕುಮಾರ್ ವಾಣಿಜ್ಯ ಕಟ್ಟಡ ಮಳಿಗೆಗಳ ಮಾಲೀಕರು ‘ದಟ್ಟಣೆ ತಪ್ಪಿಸಿ’ ವಿಧಾನಸಭಾ ಚುನಾವಣೆಗೆ ಮುನ್ನ ರಸ್ತೆ ಪಕ್ಕದ ಕೆಲವು ಕಟ್ಟಡಗಳನ್ನು ತೆರವುಗೊಳಿಸಿದರು. ಕೆಲ ಕಟ್ಟಡಗಳ ಮಾಲೀಕರು ತೆರವಿಗೆ ಅವಕಾಶ ನೀಡಲಿಲ್ಲ. ಚುನಾವಣೆ ಮುಗಿದ ಮೇಲೆ ಮತ್ತೆ ಕೆಲಸ ಮಾಡಲಿಲ್ಲ. ಇತ್ತೀಚೆಗೆ ಒಂದೆರಡು ಕಟ್ಟಡ ತೆರವುಗೊಳಿಸಿದ್ದಾರೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಅಂಡರ್ ಪಾಸ್ ಬೇಗ ಮಾಡಿದರೆ ಕಿರಿಕಿರಿ ತಪ್ಪಬಹುದು. ವಿನಯ್( ಅನಿಲ್) ಮೆಡಿಕಲ್ ಸ್ಟೋರ್ ನೌಕರ ‘ದಟ್ಟಣೆಗೆ ಪರಿಹಾರ’ ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣದಲ್ಲಿ ಬಂದು ಇಳಿಯುವ ಪ್ರಯಾಣಿಕರು ಸಿಗ್ನಲ್‌ಗಳನ್ನೂ ಗಮನಿಸದೇ ಚಲಿಸುತ್ತಾರೆ. ಇದು ಸಮಸ್ಯೆಗೆ ಕಾರಣವಾಗುತ್ತಿದೆ. ಸುರಕ್ಷಿತವಾಗಿ ರಸ್ತೆ ದಾಟಿಸುವುದೇ ಸವಾಲಾಗಿದೆ. ಅಂಡರ್‌ಪಾಸ್ ನಿರ್ಮಾಣವಾದರೆ ಜನರು ಸುರಕ್ಷಿತವಾಗಿ ರಸ್ತೆ ದಾಟುತ್ತಾರೆ. ಟ್ರಾಫಿಕ್ ಸಮಸ್ಯೆಗೂ ಪರಿಹಾರ ಸಿಕ್ಕಂತಾಗುತ್ತದೆ. ಚಿದಾನಂದಮೂರ್ತಿ ಇನ್‌ಸ್ಪೆಕ್ಟರ್‌ ಪೀಣ್ಯ ಸಂಚಾರ ಪೊಲೀಸ್ ಠಾಣೆ

’ಫುಟ್‌ಪಾತ್‌ಗಳೂ ಅಭಿವೃದ್ಧಿಯಾಗಿಲ್ಲ’

ಅಯ್ಯಪ್ಪಸ್ವಾಮಿ ದೇಗುಲದಿಂದ – ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ತೆರಳುವ ರಸ್ತೆಯ ಒಂದು ಬದಿ (ಎಡಭಾಗ) ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದರೆ ಬಲಬದಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಈ ಗಡಿ ಸಮಸ್ಯೆಯಿಂದಾಗಿ ಇಲ್ಲಿ ಅಂಡರ್‌ಪಾಸ್ ಕಾಮಗಾರಿ ಮಾತ್ರವಲ್ಲದೇ ರಸ್ತೆ ಫುಟ್‌ಪಾತ್‌ ಅಭಿವೃದ್ಧಿಯೂ ನಡೆಯುತ್ತಿಲ್ಲ. ಈ ರಸ್ತೆಯ ಒಂದು ಬದಿಯಲ್ಲಿ ಕಳೆದ ವರ್ಷ ಚರಂಡಿ ತುಂಬಿಕೊಂಡು ಸಮಸ್ಯೆ ಉಂಟಾಗಿತ್ತು. ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯಲಾಗದೇ ಕೊಳಚೆ ನೀರು ರಸ್ತೆಗೆ ಹರಿದು ಸಮಸ್ಯೆಯಾಗಿತ್ತು ಎಂದು ಅಕ್ಕಪಕ್ಕದ ಅಂಡಿಗಳವರು ದೂರುತ್ತಾರೆ.

ಅಂಡರ್‌ಪಾಸ್‌ ಕಾಮಗಾರಿಗೆ ಕಾರ್ಯಾದೇಶವಾಗಿದೆ. ಭೂಸ್ವಾಧೀನಕ್ಕೆ ₹15 ಕೋಟಿ ಹಣ ಬೇಕಿದೆ. ಕಟ್ಟಡ ಮಾಲೀಕರ ಬಳಿ ಮಾತಾಡಿ ಮನವೊಲಿಸಿದ್ದೇನೆ. ಪರಿಹಾರ ಕೊಟ್ಟರೆ ತಕ್ಷಣ ಕೆಲಸ ಶುರುವಾಗುತ್ತದೆ. ಸರ್ಕಾರಕ್ಕೂ ಈ ಬಗ್ಗೆ ತಿಳಿಸಿದ್ದೇನೆ. ಅವಕಾಶ ಸಿಕ್ಕರೆ ಈ ಅಧಿವೇಶನದಲ್ಲೂ ಮಾತನಾಡುತ್ತೇನೆ. ಅಂಡರ್‌ಪಾಸ್ ನಿರ್ಮಾಣವಾದರೆ ಸಂಚಾರ ದಟ್ಟಣೆಯ ನರಕದಿಂದ ಜನರನ್ನು ಪಾರು ಮಾಡಿದಂತಾಗುತ್ತದೆ
–ಎಸ್.ಮುನಿರಾಜು ಶಾಸಕ ದಾಸರಹಳ್ಳಿ ಕ್ಷೇತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.