ADVERTISEMENT

ಬೆಂಗಳೂರು: ಫೆ.13–14ಕ್ಕೆ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟ

ತಿಂಗಳಿಗೆ ₹ 15 ಸಾವಿರ ಪ್ರೋತ್ಸಾಹಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 14:38 IST
Last Updated 10 ಫೆಬ್ರುವರಿ 2024, 14:38 IST
<div class="paragraphs"><p>ಆಶಾ ಕಾರ್ಯಕರ್ತೆಯರು</p></div>

ಆಶಾ ಕಾರ್ಯಕರ್ತೆಯರು

   

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಿಂಗಳಿಗೆ ₹ 15 ಸಾವಿರ ಪ್ರೋತ್ಸಾಹಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿರುವ ಆಶಾ ಕಾರ್ಯಕರ್ತೆಯರು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಇದೇ 13 ಮತ್ತು 14ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ‘ವಿಧಾನಸೌಧ ಚಲೋ’ ಅಹೋರಾತ್ರಿ ಹೋರಾಟ ಹಮ್ಮಿಕೊಂಡಿದ್ದಾರೆ.  

‘ಪ್ರೋತ್ಸಾಹಧನಕ್ಕೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಆಗುತ್ತಿರುವ ವಂಚನೆ ತಡೆಯಲು ಆರ್.ಸಿ.ಎಚ್. ಪೋರ್ಟಲ್ ಅನ್ನು ವೇತನ ಪಾವತಿ ಪ್ರಕ್ರಿಯೆಯಿಂದ ಬೇರ್ಪಡಿಸಬೇಕು. ಮೊಬೈಲ್ ಬಳಕೆ ಬಾರದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮೊಬೈಲ್ ಬಳಸಿ ದತ್ತಾಂಶ ಸಂಗ್ರಹಿಸುವವರಿಗೆ ಪ್ರೋತ್ಸಾಹಧನ ಒದಗಿಸಬೇಕು. ಆರ್.ಸಿ.ಎಚ್. ಪೋರ್ಟಲ್‌ನಲ್ಲಿನ ವಿವಿಧ ಸಮಸ್ಯೆಗಳಿಂದಾಗಿ ಹಲವು ವರ್ಷಗಳಿಂದ ಬಾಕಿಯಿರುವ ಪ್ರೋತ್ಸಾಹಧನವನ್ನು ನೀಡಲು ಕೂಡಲೇ ಕ್ರಮಕೈಗೊಳ್ಳಬೇಕು‌’ ಎಂದು ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಒತ್ತಾಯಿಸಿದ್ದಾರೆ.

ADVERTISEMENT

‘2019–21ರವರೆಗಿನ ಕೋವಿಡ್ ವಿಶೇಷ ಪ್ರೋತ್ಸಾಹಧನವನ್ನು ಪಾವತಿಸಬೇಕು. ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಪಿಎಫ್, ಇಎಸ್‌ಐ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು. 60 ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ₹ 3 ಲಕ್ಷ ಒದಗಿಸಬೇಕು. ತೀವ್ರ ಅನಾರೋಗ್ಯಕ್ಕೆ ಒಳಗಾದ ಆಶಾ ಕಾರ್ಯಕರ್ತೆಯರಿಗೆ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳು ನಿಶ್ಚಿತ ಗೌರವಧನ ನೀಡಬೇಕು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಆರೋಗ್ಯ ವಿಮಾ ಯೋಜನೆಯಡಿ ₹ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.