ADVERTISEMENT

ಕೆ.ಆರ್.ಪುರ: ಏಷ್ಯಾದಲ್ಲಿಯೇ ಅತಿ ಎತ್ತರದ ಏಕಶಿಲಾ ಹನುಮ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 15:44 IST
Last Updated 15 ಜನವರಿ 2025, 15:44 IST
ಕಾಚರಕನಹಳ್ಳಿನ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪನೆಗೊಂಡಿರುವ ‘ಶ್ರೀರಾಮಲಕ್ಷ್ಮಣರ ಸಮೇತ ಬೃಹದ್ರೂಪಿ ಹನುಮ’ ಏಕಶಿಲಾ ಮೂರ್ತಿ
ಕಾಚರಕನಹಳ್ಳಿನ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪನೆಗೊಂಡಿರುವ ‘ಶ್ರೀರಾಮಲಕ್ಷ್ಮಣರ ಸಮೇತ ಬೃಹದ್ರೂಪಿ ಹನುಮ’ ಏಕಶಿಲಾ ಮೂರ್ತಿ   

ಕೆ.ಆರ್.ಪುರ: ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ ಮೂರ್ತಿ ಎಂಬ ಹೆಗ್ಗಳಿಕೆ ಹೊಂದಿರುವ, 72 ಅಡಿ ಎತ್ತರದ ‘ಶ್ರೀರಾಮಲಕ್ಷ್ಮಣರ ಸಮೇತ ಬೃಹದ್ರೂಪಿ ಹನುಮ’ ಏಕಶಿಲಾ ಮೂರ್ತಿಯನ್ನು ಕಾಚರಕನಹಳ್ಳಿನ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಬುಧವಾರ ಪ್ರತಿಷ್ಠಾಪನೆ ಮಾಡಲಾಯಿತು.

ಮೂರ್ತಿಯು 480 ಟನ್ ತೂಕ ಹೊಂದಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳ ಮೂಲಕ  ಪ್ರತಿಷ್ಠಾಪನೆಗೊಂಡಿದೆ. ಎಲ್ಲ ರೀತಿಯ ಸ್ಥಾಪನಾ ಕಾರ್ಯಗಳು ಪೂರ್ಣಗೊಳ್ಳಲು ಇನ್ನೂ ಎರಡು ತಿಂಗಳು ಬೇಕಾಗುತ್ತದೆ ಎಂದು ಶ್ರೀರಾಮ ಚೈತನ್ಯ ವರ್ಧಿನಿ ಸಭಾ ಟ್ರಸ್ಟ್ ಮತ್ತು ಬೃಹದ್ರೂಪಿ ಹನುಮಾನ್ ಚಾರಿಟಬಲ್ ಟ್ರಸ್ಟ್ ತಿಳಿಸಿದೆ.

‘ಹೊಸಕೋಟೆ ಸಮೀಪದ ಪ್ರದೇಶದಿಂದ ಸಾವಿರ ಟನ್ ತೂಕದ ಬಂಡೆಯನ್ನು ತರಲು ಮೂವತ್ತು ದಿನ ಬೇಕಾಯಿತು. ಖ್ಯಾತ ಶಿಲ್ಪಿಗಳು ಮೂರು ವರ್ಷ ಕೆತ್ತನೆ ಕಾರ್ಯ ನಡೆಸಿದ್ದಾರೆ. ಏಕಶಿಲಾ ಮೂರ್ತಿಯಾಗಿರುವುದರಿಂದ ತಂತ್ರಜ್ಞಾನ ಹಾಗೂ ಯಂತ್ರಗಳ ಸಹಾಯದಿಂದ ಸ್ಥಾಪನಾ ಕಾರ್ಯ ಮುಗಿಯಬೇಕಿದೆ. ಅದು ಪೂರ್ಣಗೊಂಡ ಮೇಲೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಟ್ರಸ್ಟ್ ಅಧ್ಯಕ್ಷ ಎಂ.ಎನ್.ರೆಡ್ಡಿ ಹೇಳಿದರು.

ADVERTISEMENT

ವಿಶ್ವಕ್ಷೇನ ಗಣಪತಿ ಪೂಜೆ, ಪುಣ್ಯಾಹ, ಸ್ವಸ್ತಿವಾಚನ, ನವಗ್ರಹ ಪೂಜೆ, ರಾಮತಾರಕ ಹೋಮ, ಮಹಾಲಕ್ಷ್ಮಿ ಶ್ರೀಸೂಕ್ತ ಹೋಮ, ಮಹಾಪೂರ್ಣಾಹುತಿ, ಸರ್ವತೋಭದ್ರ ಮಂಡಲ ಆರಾಧನೆ, ಪವಮಾನ ಹೋಮದ ನಂತರ ಪ್ರತಿಷ್ಠಾಪನೆಗೆ ಚಾಲನೆ ನೀಡಲಾಯಿತು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನಿಧ್ಯದಲ್ಲಿ ಪ್ರತಿಷ್ಠಾಪ‍ನೆ ನಡೆಯಿತು.

ಸಚಿವರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಸಂಸದ ಪಿ.ಸಿ.ಮೋಹನ್, ಶಾಸಕರಾದ ಬೈರತಿ ಬಸವರಾಜ, ಧೀರಜ್ ಮುನಿರಾಜು, ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ನಗರ ಘಟಕದ ಜೆಡಿಎಸ್ ಅಧ್ಯಕ್ಷ ರಮೇಶ್ ಗೌಡ, ಸಪ್ತಗಿರಿಗೌಡ, ಬಿಬಿಎಂಪಿ ಮಾಜಿ ಸದಸ್ಯ ಪದ್ಮನಾಭರೆಡ್ಡಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.