ಬೆಂಗಳೂರು: ಮಾತನಾಡುವ ನೆಪದಲ್ಲಿ ಸ್ಥಳೀಯ ಸುದ್ದಿ ವಾಹಿನಿಯ ವರದಿಗಾರನನ್ನು ಕರೆಸಿಕೊಂಡಿದ್ದ ಕಿಡಿಗೇಡಿಯೊಬ್ಬ, ಬಳಿಕ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಂಬೇಡ್ಕರ್ ಬಡಾವಣೆ ಎಳ್ಳುಕುಂಟೆ 3ನೇ ಸೆಕ್ಟರ್ ನಿವಾಸಿ ರವಿ (34) ಹಲ್ಲೆಗೊಳಗಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರವಿ ನೀಡಿದ ದೂರಿನ ಮೇರೆಗೆ ಮಂಜುನಾಥ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.
‘ಶುಕ್ರವಾರ ಸಂಜೆ ಮಂಜುನಾಥ ಎಂಬಾತ ರವಿ ಮೊಬೈಲ್‌ಗೆ ಕರೆ ಮಾಡಿ, ಯಾವುದೋ ವಿಚಾರ ಕುರಿತು ನಿಮ್ಮೊಂದಿಗೆ ಮಾತನಾಡಬೇಕು ಎಂದು ಕರೆಯಿಸಿಕೊಂಡಿದ್ದಾನೆ. ರವಿ ಅಲ್ಲಿಗೆ ತೆರಳಿದಾಗ ‘ನಮ್ಮ ಬಾಸ್ ಮೋಹನ್ ಮತ್ತು ಅವರ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸುತ್ತೀಯಾ’ ಎಂದು ಮಂಜುನಾಥ ಪ್ರಶ್ನಿಸಿದ್ದಾನೆ. ಮಾತನಾಡುತ್ತಿದ್ದಂತೆ ಏಕಾಏಕಿ ಆರೋಪಿ ಮಂಜುನಾಥ್ ಮಾರಕಾಸ್ತ್ರಗಳಿಂದ ರವಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.