ADVERTISEMENT

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೋದರಿಯ ಪತಿ ಎಎಪಿಗೆ ಸೇರ್ಪಡೆ‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 3:58 IST
Last Updated 31 ಜನವರಿ 2023, 3:58 IST
ಸಿ.ಪಿ. ಶರತ್‌ ಚಂದ್ರ ಅವರಿಗೆ ಬಾವುಟ ನೀಡಿ ಆಮ್‌ ಆದ್ಮಿ ಪಾರ್ಟಿಗೆ ಮುಖ್ಯಮಂತ್ರಿ ಚಂದ್ರು ಸೋಮವಾರ ಬರಮಾಡಿಕೊಂಡರು. ರಾಜ್ಯ ಕಾರ್ಯಾಧ್ಯಕ್ಷರಾದ ಮೊಯಿದ್ದಿನ್‌ ಜಾಫರ್‌, ಬಿ.ಟಿ. ನಾಗಣ್ಣ, ರಾಜ್ಯ ಉಪಾಧ್ಯಕ್ಷ ಚನ್ನಪ್ಪ ಗೌಡ ನಲ್ಲೂರು ಇದ್ದರು
ಸಿ.ಪಿ. ಶರತ್‌ ಚಂದ್ರ ಅವರಿಗೆ ಬಾವುಟ ನೀಡಿ ಆಮ್‌ ಆದ್ಮಿ ಪಾರ್ಟಿಗೆ ಮುಖ್ಯಮಂತ್ರಿ ಚಂದ್ರು ಸೋಮವಾರ ಬರಮಾಡಿಕೊಂಡರು. ರಾಜ್ಯ ಕಾರ್ಯಾಧ್ಯಕ್ಷರಾದ ಮೊಯಿದ್ದಿನ್‌ ಜಾಫರ್‌, ಬಿ.ಟಿ. ನಾಗಣ್ಣ, ರಾಜ್ಯ ಉಪಾಧ್ಯಕ್ಷ ಚನ್ನಪ್ಪ ಗೌಡ ನಲ್ಲೂರು ಇದ್ದರು   

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಸೋದರಿಯ ಪತಿ ಹಾಗೂ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ಸಿ.ಪಿ. ಶರತ್‌ ಚಂದ್ರ ಆಮ್‌ ಆದ್ಮಿ ಪಾರ್ಟಿಗೆ ಸೋಮವಾರ ಸೇರ್ಪಡೆಯಾದರು.

ಪಕ್ಷದ ಪ್ರಚಾರ ಹಾಗೂ ಜನಸಂಪರ್ಕ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಾಗೂ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಭಾಸ್ಕರ್‌ ರಾವ್‌ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಮುಖ್ಯಮಂತ್ರಿ ಚಂದ್ರು ಮಾತನಾಡಿ, ‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ನಾಯಕ ಸಿ.ಪಿ.ಶರತ್‌ ಚಂದ್ರ ಆಪ್‌ಗೆ ಸೇರ್ಪಡೆಯಾಗಿರುವುದರಿಂದ ಪಕ್ಷ ಸಂಘಟನೆಗೆ ಆನೆಬಲ ಬರಲಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮುಂತಾದ ಸಾಂಪ್ರದಾಯಿಕ ಪಕ್ಷಗಳ ನಿಷ್ಕ್ರಿಯತೆ, ಭ್ರಷ್ಟಾಚಾರ ಹಾಗೂ ಜನವಿರೋಧಿ ನಿಲುವುಗಳಿಂದಾಗಿ ಆ ಪಕ್ಷಗಳ ಪ್ರಾಮಾಣಿಕ ನಾಯಕರು ಆಮ್‌ ಆದ್ಮಿ ಪಾರ್ಟಿ ಸೇರುತ್ತಿದ್ದಾರೆ’ ಎಂದರು.

ADVERTISEMENT

‌ಭಾಸ್ಕರ್‌ ರಾವ್ ಮಾತನಾಡಿ, ‘2013, 2014, 2019ರ ಚುನಾವಣೆಗಳಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಕಾರ್ಯನಿರ್ವಹಿಸಿದ ಅನುಭವ ಶರತ್‌ಚಂದ್ರ ಅವರಿಗಿದೆ’ ಎಂದರು.

ಸಿ.ಪಿ.ಶರತ್‌ ಚಂದ್ರ ಮಾತನಾಡಿ, ‘ಆಮ್‌ ಆದ್ಮಿ ಪಾರ್ಟಿಯು ದೆಹಲಿ ಹಾಗೂ ಪಂಜಾಬ್‌ನಲ್ಲಿ ನೀಡುತ್ತಿರುವ ಆಡಳಿತವು ಅತ್ಯಂತ ಜನಪರ ಹಾಗೂ ದಕ್ಷವಾಗಿದೆ. ದೆಹಲಿಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳಲ್ಲಿ ತಂದಿರುವ ಕ್ರಾಂತಿಕಾರಿ ಬದಲಾವಣೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಕರ್ನಾಟಕದಲ್ಲೂ ಪ್ರಾಮಾಣಿಕ, ದಕ್ಷ ಹಾಗೂ ಜನಪರ ಆಡಳಿತ ಬರಬೇಕೆಂಬ ಸದುದ್ದೇಶದಿಂದ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆಯಾಗುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.