ADVERTISEMENT

ಎಟಿಎಂ ಯಂತ್ರ ಕತ್ತರಿಸಿ ₹ 23.55 ಲಕ್ಷ ದೋಚಿದ ಕಳ್ಳರು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 21:42 IST
Last Updated 31 ಡಿಸೆಂಬರ್ 2019, 21:42 IST
   

ಬೆಂಗಳೂರು: ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿರುವ ಕೆನರಾ ಬ್ಯಾಂಕ್‌ನ ಎಟಿಎಂ ಘಟಕವೊಂದಕ್ಕೆ ಕನ್ನ ಹಾಕಿರುವ ದುಷ್ಕರ್ಮಿಗಳು, ₹ 23.55 ಲಕ್ಷ ಕದ್ದೊಯ್ದಿದ್ದಾರೆ.

ಈ ಸಂಬಂಧ ಎಫ್‌ಎಸ್‌ಎಸ್ ಕಂಪನಿ ಪ್ರತಿನಿಧಿ ಕೆ. ವೇಣು ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ನಾಗನಾಥಪುರ ಹೊಸ ರಸ್ತೆಯಲ್ಲಿರುವ ಎಟಿಎಂ ಘಟಕದ ಭದ್ರತೆ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಎಫ್‌ಎಸ್‌ಎಸ್‌ ಕಂಪನಿಗೆ ವಹಿಸಲಾಗಿದೆ. ಇದೇ ಘಟಕಕ್ಕೆ ಡಿ. 28ರ ತಡರಾತ್ರಿ ನುಗ್ಗಿದ್ದ ದುಷ್ಕರ್ಮಿಗಳು ಗ್ಯಾಸ್‌ ಕಟರ್‌ನಿಂದ ಯಂತ್ರ ಕತ್ತರಿಸಿ, ಯಂತ್ರದಲ್ಲಿದ್ದ ಹಣವನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಡಿ. 30ರಂದು ಬೆಳಿಗ್ಗೆ ಎಫ್‌ಎಸ್‌ಎಸ್ ಕಂಪನಿ ಸಿಬ್ಬಂದಿ ಘಟಕಕ್ಕೆ ಬಂದಿದ್ದರು. ಘಟಕದ ಶಟರ್ ಅರ್ಧಕ್ಕೆ ಮುಚ್ಚಿತ್ತು. ಅನುಮಾನಗೊಂಡ ಸಿಬ್ಬಂದಿ ಶಟರ್ ತೆರೆದು ನೋಡಿದಾಗ ವಿಷಯ ಗೊತ್ತಾಗಿದೆ. ನಂತರ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.

ಭದ್ರತಾ ವೈಫಲ್ಯ: ‘ಎಟಿಎಂ ಘಟಕದಲ್ಲಿ ಯಾವುದೇ ಭದ್ರತೆ ಇರಲಿಲ್ಲ. ಸಿಸಿಟಿವಿ ಕ್ಯಾಮೆರಾ ಹಾಗೂ ಸೈರನ್‌ ಕೂಡ ಕೆಲಸ ಮಾಡುತ್ತಿರಲಿಲ್ಲ. ಈ ನಿರ್ಲಕ್ಷ್ಯವೇ ಕಳ್ಳರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಬಗ್ಗೆ ಗೂತ್ತಿರುವವರೇ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಕಂಪನಿ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.