ADVERTISEMENT

ವಿದೇಶಿ ಪ್ರಜೆಗೆ ₹10 ಲಕ್ಷ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೊ ಚಾಲಕ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 9:06 IST
Last Updated 14 ಡಿಸೆಂಬರ್ 2019, 9:06 IST
ಆಟೊ ಚಾಲಕ ರಮೇಶ್‌ಬಾಬು ಅವರನ್ನು ಶೇಷಾದ್ರಿಪುರ ಪೊಲೀಸರು ಸನ್ಮಾನಿಸಿದರು
ಆಟೊ ಚಾಲಕ ರಮೇಶ್‌ಬಾಬು ಅವರನ್ನು ಶೇಷಾದ್ರಿಪುರ ಪೊಲೀಸರು ಸನ್ಮಾನಿಸಿದರು   

ಬೆಂಗಳೂರು: ವಿದೇಶಿ ಪ್ರಜೆಯೊಬ್ಬರು ಆಟೊದಲ್ಲಿ ಬಿಟ್ಟು ಹೋಗಿದ್ದ ₹10 ಲಕ್ಷ ಹಣವನ್ನು ಚಾಲಕ ರಮೇಶ್‌ಬಾಬು ನಾಯಕ್ ಎಂಬುವರು ಪೊಲೀಸರ ಮೂಲಕ ವಿದೇಶಿ ಪ್ರಜೆಗೆ ಮರಳಿಸಿದ್ದಾರೆ.

ಮಾಲ್ಡೀವ್ಸ್ ಪ್ರಜೆ ಎಂ.ಆರ್. ಭಾಸ್ಕರ್‌ ಎಂಬುವರುಹೃದಯ ಶಸ್ತ್ರಚಿಕಿತ್ಸೆಗೆಂದು ನಗರಕ್ಕೆ ಬಂದಿದ್ದರು. ಶೇಷಾದ್ರಿಪುರದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಚಿಕಿತ್ಸಾ ವೆಚ್ಚ ₹10 ಲಕ್ಷವನ್ನು ಜೊತೆಗೇ ತಂದಿದ್ದರು.

ನಾರಾಯಣ ಹೃದಯಾಲಯಕ್ಕೆ ಗುರುವಾರ ತಪಾಸಣೆಗೆ ಹೋಗಿದ್ದರು. ಅದನ್ನು ಮುಗಿಸಿಕೊಂಡು ರಮೇಶ್‌ಬಾಬು ಅವರ ಆಟೊದಲ್ಲಿ ವಾಪಸು ಲಾಡ್ಜ್‌ ಬಳಿ ಬಂದಿದ್ದರು.ಹಣವಿದ್ದ ಬ್ಯಾಗ್‌ ಆಟೊದಲ್ಲಿ ಬಿಟ್ಟು ಇಳಿದು ಹೋಗಿದ್ದರು.

ADVERTISEMENT

ಸ್ಥಳದಿಂದ ಹೊರಟು ಹೋಗಿದ್ದರಮೇಶ್‌ಬಾಬು ಅವರಿಗೆ ಕೆಲ ಗಂಟೆಗಳ ಬಳಿಕ ಆಟೊದಲ್ಲಿ ಹಣವಿದ್ದ ಬ್ಯಾಗ್ ಕಂಡಿತ್ತು. ಅದನ್ನು ತೆಗೆದುಕೊಂಡು ಶೇಷಾದ್ರಿಪುರ ಠಾಣೆಗೆ ಬಂದಿದ್ದರು. ಅದೇ ಸಂದರ್ಭದಲ್ಲೇಎಂ.ಆರ್. ಭಾಸ್ಕರ್‌ ಸಹ ಠಾಣೆಗೆ ದೂರು ನೀಡಲು ಬಂದಿದ್ದರು.

ಅವರಿಬ್ಬರನ್ನು ಕಂಡ ಪೊಲೀಸರು, ರಮೇಶ್‌ಬಾಬು ಅವರಿಂದ ಹಣ ಪಡೆದುಕೊಂಡು ಭಾಸ್ಕರ್ ಅವರಿಗೆ ಹಸ್ತಾಂತರಿಸಿದರು. ಹಣ ಮರಳಿಸಿ ಪ್ರಾಮಾಣಿಕತೆ ತೋರಿದ ರಮೇಶ್‌ಬಾಬು ಅವರನ್ನು ಸನ್ಮಾನಿಸಿದರು.

‘ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ಶಸ್ತ್ರಚಿಕಿತ್ಸೆ ಮಾಡಿಸಲು ಹಣ ಹೊಂದಿಸಿಕೊಂಡು ಬಂದಿದ್ದೆ. ಅದು ಕಳೆದಾಗ ಜೀವವೇ ಹೊಂದಂತಾಗಿತ್ತು. ಹಣ ವಾಪಸ್‌ ನೀಡಿದ್ದಕ್ಕೆ ರಮೇಶ್‌ಬಾಬು ಅವರಿಗೆ ಕೃತಜ್ಞತೆಗಳು’ ಎಂದು ಭಾಸ್ಕರ್ ಹೇಳಿದರು.

ಚಾಲಕನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸಹ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.