
ಬೆಂಗಳೂರು: ನಗರದಲ್ಲಿರುವ ಆಟೊ ಚಾಲಕರ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯದ ಬಜೆಟ್ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬಿ.ಪ್ಯಾಕ್ ಹಾಗೂ ಸಿಜಿಐ ಸಹಯೋಗದಲ್ಲಿ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಆಟೊ ಚಾಲನಾ ಹಾಗೂ ಕೌಶಲ ಉಚಿತ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಉಚಿತ ಚಾಲನಾ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಸರ್ಕಾರದಿಂದಲೂ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.
ಬೆಂಗಳೂರಿನಲ್ಲಿ ಯಾವುದೇ ಜಾಗಕ್ಕೆ ತೆರಳಬೇಕಿದ್ದರೂ ಆಟೊ ಅನಿವಾರ್ಯವಾಗಿದ್ದು, ನಾಗರಿಕರ ಬೆನ್ನೆಲುಬಾಗಿ ನಿಂತಿದೆ. ಹೀಗಾಗಿ ಆಟೊ ಚಾಲಕರ ಸಮುದಾಯಕ್ಕೆ ಇನ್ನಷ್ಟು ಯೋಜನೆ ಹಾಗೂ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಿ, ರಾಜ್ಯ ಬಜೆಟ್ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿಜಿಐ ಪ್ರತಿನಿಧಿ ಸುಧಾಕರ್ ಪೈ, ಶ್ರೀನಿವಾಸ ರಾಘವನ್, ಬಿ.ಪ್ಯಾಕ್ ಕಾರ್ಯಕ್ರಮ ಮುಖ್ಯಸ್ಥ ರಾಘವೇಂದ್ರ ಪೂಜಾರಿ ಎಚ್.ಎಸ್., ನಮ್ಮ ಸಾರಥಿ ಅಧ್ಯಕ್ಷ ಸಂಪತ್ ಮತ್ತು ದೇವಿಕಾ, ಪೀಸ್ ಆಟೊದ ಅಧ್ಯಕ್ಷ ರಘು ನಾರಾಯಣ ಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.