ಬಿಬಿಎಂಪಿ
ಬೆಂಗಳೂರು: ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿರುವ ಬಿ–ಖಾತಾ ನಿವೇಶನಗಳಿಗೆ ಎ–ಖಾತಾದ ಜೊತೆಗೆ ಸಕಲ ಸೌಲಭ್ಯಗಳೂ ದೊರೆಯಲಿದ್ದು, ಇದಕ್ಕಾಗಿ ಮಾರ್ಗಸೂಚಿ ದರದ ಶೇ 5ರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ–ಖಾತಾ ನೀಡುವ ಪ್ರಕ್ರಿಯೆಯನ್ನು ಪಾಲಿಕೆ ಸ್ಥಗಿತಗೊಳಿಸಲಿದ್ದು, ಈಗಿರುವ ಅಷ್ಟೂ ಬಿ–ಖಾತಾ ನಿವೇಶನ ಅಥವಾ ಕಟ್ಟಡಗಳಿಗೆ ಎ–ಖಾತಾ ಲಭ್ಯವಾಗಲಿದೆ. ಒಂದು ನಿವೇಶನ ಅಥವಾ ಒಂದು ಬಡಾವಣೆಯ ಜನ, ತಮ್ಮ ನಿವೇಶನಗಳಿಗೆ ಎ–ಖಾತಾ ನೀಡಬೇಕೆಂದು ಪಾಲಿಕೆಗೆ ಅರ್ಜಿ ಸಲ್ಲಿಸಿದರೆ, ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಎಲ್ಲ ನಿಯಮಗಳನ್ನು ಬಿಬಿಎಂಪಿ ನಗರ ಯೋಜನೆ ವಿಭಾಗದ ಅಧಿಕಾರಿಗಳು ರೂಪಿಸಿದ್ದು, ಅದರ ಪ್ರಸ್ತಾವವನ್ನು ಸರ್ಕಾರದ ಮುಂದಿರಿಸಿದ್ದಾರೆ.
ಬಿ–ಖಾತಾ ನಿವೇಶನ ಅಥವಾ ಕಟ್ಟಡದ ಮುಂದಿನ ಖಾಸಗಿ ರಸ್ತೆ ಕನಿಷ್ಠ 30 ಅಡಿ ಇರಬೇಕು. ಇಲ್ಲದಿದ್ದರೆ ಎರಡೂ ಬದಿಯ ನಿವೇಶನಗಳ ಮಾಲೀಕರು ಕೊರತೆ ಇರುವ ವಿಸ್ತೀರ್ಣವನ್ನು ಸಮನಾಗಿ ರಸ್ತೆಗೆ ಬಿಟ್ಟುಕೊಡಲು ಒಪ್ಪಿ, ನೋಂದಣಿ ಮಾಡಿಕೊಡಬೇಕು. ಅಂದರೆ, 25 ಅಡಿ ರಸ್ತೆಯಲ್ಲಿ ಬಿ–ಖಾತಾ ನಿವೇಶನಗಳಿದ್ದರೆ, ಕಡಿಮೆಯಿರುವ ಐದು ಅಡಿಯನ್ನು ಎರಡೂ ಬದಿಯ ನಿವೇಶನಗಳು ತಲಾ ಎರಡೂವರೆ ಅಡಿಯನ್ನು ರಸ್ತೆಗೆ ಬಿಡಬೇಕು. ಇದು ಮೊದಲ ಮಾನದಂಡವಾಗಲಿದೆ.
30 ಅಡಿ ರಸ್ತೆ ನಿಗದಿಯಾದ ಮೇಲೆ, ಬಿಬಿಎಂಪಿ ಕಾಯ್ದೆ ನಿಯಮ 225–226ರಂತೆ ಆ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸಲಾಗುತ್ತದೆ. ಬಿ–ಖಾತಾ ನಿವೇಶನದಾರರು, ನೋಂದಣಿ ಮತ್ತು ಮುದ್ರಾಂಕ ಕಾಯ್ದೆಯಂತೆ ನಿಗದಿಪಡಿಸಿರುವ ಮಾರ್ಗಸೂಚಿ ದರದ ಶೇ 5ರಷ್ಟು ಶುಲ್ಕವನ್ನು ಬಿಬಿಎಂಪಿಗೆ ಪಾವತಿಸಬೇಕು. ಸುಮಾರು ₹5 ಸಾವಿರ ಮಾರ್ಗಸೂಚಿ ದರವಿರುವ 30x 40 ಅಡಿ ನಿವೇಶನಕ್ಕೆ ಸುಮಾರು ₹3 ಲಕ್ಷ ಶುಲ್ಕವಾಗುತ್ತದೆ. ಇದರ ಜೊತೆ ಸುಮಾರು ₹25 ಸಾವಿರದಂತೆ ಇತರೆ ವೆಚ್ಚವಾಗುತ್ತದೆ. ಇದನ್ನು ಪಾವತಿಸಿದ ಮೇಲೆ, ಎ–ಖಾತಾ ಲಭ್ಯವಾಗುತ್ತದೆ. ಕಟ್ಟಡ ನಕ್ಷೆ ಸೇರಿದಂತೆ ಪಾಲಿಕೆಯ ಎಲ್ಲ ಸೌಲಭ್ಯ ಹಾಗೂ ಬೆಸ್ಕಾಂ, ಜಲಮಂಡಳಿಯ ಸೌಕರ್ಯಗಳನ್ನೂ ಪಡೆಯಬಹುದು.
ಸರ್ವೆ ಸಂಖ್ಯೆಯ ಭೂಮಿಯಲ್ಲಿ ಬಿ–ಖಾತಾ ಹೊಂದಿರುವ ಎಲ್ಲ ನಿವೇಶನದಾರರು ಒಟ್ಟಿಗೆ ಅಥವಾ ಪ್ರತ್ಯೇಕವಾಗಿಯೂ ಅರ್ಜಿ ಸಲ್ಲಿಸಬಹುದಾಗಿದೆ. ಯಾರು ಅರ್ಜಿ ಸಲ್ಲಿಸುತ್ತಾರೋ ಅವರಿಗೆ ಪ್ರಕ್ರಿಯೆ ಪೂರ್ಣಗೊಳಿಸಿ ಎ–ಖಾತಾ ಸೇರಿದಂತೆ ಎಲ್ಲ ದಾಖಲೆಗಳನ್ನೂ ಒದಗಿಸಲಾಗುತ್ತದೆ ಎಂದು ಬಿಬಿಎಂಪಿ ನಗರ ಯೋಜನೆಯ ಅಧಿಕಾರಿಗಳು ಮಾಹಿತಿ ನೀಡಿದರು.
30 ಅಡಿ ರಸ್ತೆ ಇದ್ದರೆ ಯಾವುದೇ ರೀತಿಯ ನೋಂದಣಿ ಅಗತ್ಯವಿಲ್ಲ. ಮಾರ್ಗಸೂಚಿ ದರದಂತೆ ಶೇ 5ರಷ್ಟು ಶುಲ್ಕ ಪಾವತಿಸಿದರೆ ಉಳಿದ ಪ್ರಕ್ರಿಯೆಗಳು ನಡೆಯುತ್ತವೆ. ಒಂದು ವೇಳೆ, ಬಿ–ಖಾತಾ ನಿವೇಶನವಿರುವ ರಸ್ತೆಯನ್ನು ಬಿಡಿಎ ಅಥವಾ ಬಿಬಿಎಂಪಿ ನಿರ್ವಹಣೆ ಮಾಡುತ್ತಿದ್ದರೆ, ಅರ್ಜಿ ಸಲ್ಲಿಸಿದ ಮೇಲೆ ಬಿಬಿಎಂಪಿ ಅಧಿಕಾರಿಗಳೇ ರಸ್ತೆಯನ್ನು ಸಾರ್ವಜನಿಕ ರಸ್ತೆಯನ್ನಾಗಿ ಘೋಷಿಸುತ್ತಾರೆ. ಇದರಿಂದ, ಪಹಣಿಯಲ್ಲಿ ಹಳೆಯ ಮಾಲೀಕರ ಹೆಸರಿರುವುದು ಬದಲಾಗುತ್ತದೆ. ಮುಂದೆ ಯಾರೂ ಅದನ್ನು ತಮ್ಮ ಆಸ್ತಿ ಎಂದು ಹಕ್ಕು ಸಾಧಿಸಲು ಸಾಧ್ಯವಾಗುವುದಿಲ್ಲ.
20 ಗುಂಟೆ ಅಥವಾ 20 ಸಾವಿರ ಚದರಡಿವರೆಗಿರುವ ಏಕ ನಿವೇಶನಕ್ಕೆ ಮಾತ್ರ ಈ ರೀತಿ ಸೌಲಭ್ಯವಿರುತ್ತದೆ. ಇದಕ್ಕೂ ಹೆಚ್ಚಿನ ವಿಸ್ತೀರ್ಣದಲ್ಲಿ ಏಕ ನಿವೇಶನವಿದ್ದರೆ, ಶೇ 15ರಷ್ಟು ಉದ್ಯಾನ ಹಾಗೂ ಕನಿಷ್ಠ 30 ಅಡಿ ರಸ್ತೆ ಇರುವುದು ಕಡ್ಡಾಯವಾಗಿರುತ್ತದೆ. ಕಂದಾಯ ಬಡಾವಣೆಗಳೂ (ರೆವೆನ್ಯೂ ಲೇಔಟ್) ಈ ವ್ಯವಸ್ಥೆಯಡಿ ತಮ್ಮೆಲ್ಲ ನಿವೇಶನಗಳನ್ನು ಸಕ್ರಮಗೊಳಿಸಿಕೊಳ್ಳಬಹುದು. ಭೂಪರಿವರ್ತನೆ ಪ್ರಕ್ರಿಯೆಯ ಅಗತ್ಯವೂ ಇರುವುದಿಲ್ಲ.
ಬಿ–ಖಾತಾ ನಿವೇಶನದಲ್ಲಿ ಕಟ್ಟಡ ನಿರ್ಮಿಸಿದ್ದರೆ ಅವರಿಗೂ ಎ–ಖಾತಾ, ನಕ್ಷೆ ಸಿಗಲಿದೆ. ಒಂದುವೇಳೆ 30 ಅಡಿ ರಸ್ತೆ ಬಿಡಲು ಸಾಧ್ಯವಾಗದ ಪರಿಸ್ಥಿತಿ ಇದ್ದರೆ, ನಿವೇಶನಕ್ಕೆ ಎ–ಖಾತಾ ಸಿಗಲಿದೆ. ಆದರೆ, ಕಟ್ಟಡ ಅನಧಿಕೃತ ಎಂದು ನಮೂದಾಗಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳಲ್ಲಿನ ಸೆಟ್‌ಬ್ಯಾಕ್ ಉಲ್ಲಂಘನೆಯನ್ನು ಶೇ 15ರವರೆಗೆ ಸಕ್ರಮಗೊಳಿಸುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದಿದೆ.
ವಸತಿ ಕಟ್ಟಡದ ಸೆಟ್‌ಬ್ಯಾಕ್ ನಿಯಮಗಳಿಗೆ ವಿನಾಯಿತಿ ನೀಡಲು ಬಿಬಿಎಂಪಿ ಪ್ರಸ್ತಾವ ಸಲ್ಲಿಸಿದೆ. ಪ್ರಸ್ತುತ ಸೆಟ್‌ಬ್ಯಾಕ್‌ನಲ್ಲಿ ಶೇ 5ರಷ್ಟು ಉಲ್ಲಂಘನೆಯನ್ನು ಸಕ್ರಮಗೊಳಿಸಲು ಸಾಧ್ಯವಿದೆ. ಇದನ್ನು ಶೇ 15ಕ್ಕೆ ಹೆಚ್ಚಿಸಲಾಗುತ್ತದೆ.
ಇದಲ್ಲದೆ, ಚಿಕ್ಕ ನಿವೇಶನಗಳಲ್ಲಿ ನಿರ್ಮಿಸುವ ವಸತಿ ಕಟ್ಟಡದ ಸೆಟ್‌ಬ್ಯಾಕ್ ನಿಯಮಗಳಿಗೂ ವಿನಾಯಿತಿ ನೀಡುವ ಪ್ರಸ್ತಾವವಿದೆ. ರಸ್ತೆ ಬದಿಗೆ 20 ಅಡಿ ಅಗಲ ಹೊಂದಿರುವ ನಿವೇಶನದಲ್ಲಿ ವಸತಿ ಕಟ್ಟಡ ನಿರ್ಮಿಸುವಾಗ ಮುಂಭಾಗದಲ್ಲಿ ಮಾತ್ರ ಮೂರು ಅಡಿ ಜಾಗ (ಸೆಟ್‌ಬ್ಯಾಕ್) ಬಿಡಬೇಕು. 30 ಅಡಿವರೆಗಿನ ನಿವೇಶನದಲ್ಲಿ ಕಟ್ಟಡದ ಹಿಂಬದಿಯಲ್ಲಿ ಜಾಗ ಬಿಡಬೇಕಾದ ಅಗತ್ಯವಿಲ್ಲ. 30 ಅಡಿಯಿಂದ 40 ಅಡಿವರೆಗಿನ ನಿವೇಶನದಲ್ಲಿ ಕಟ್ಟಡ ನಿರ್ಮಿಸುವಾಗ ಅದರ ಅಳತೆಗೆ ಅನುಗುಣವಾಗಿ ಸುತ್ತಲೂ ಜಾಗ ಬಿಡಬೇಕಾಗುತ್ತದೆ. ಈ ಕುರಿತಂತೆ ವಲಯ ನಿಯಮ ಗಳಿಗೆ ತಿದ್ದುಪಡಿ ತರಬೇಕು ಎಂದು ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವ ಸಲ್ಲಿಸಿದೆ.
ನಗರದಲ್ಲಿ ಕಟ್ಟಡದ ನೆಲ ಅಂತಸ್ತನ್ನು ವಾಹನ ನಿಲುಗಡೆಗೆ (ಪಾರ್ಕಿಂಗ್) ಮೀಸಲಿಡುವುದನ್ನು ಕಡ್ಡಾಯ ಗೊಳಿಸಲಾಗುತ್ತದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನೆಲ ಅಂತಸ್ತು ಹಾಗೂ 3 ಅಂತಸ್ತಿನ (ಜಿ+3) ಕಟ್ಟಡಕ್ಕೆ ಅನುಮತಿ ನೀಡಲಾಗುತ್ತಿದೆ. ಇನ್ನು ಮುಂದೆ, ನೆಲ ಅಂತಸ್ತು ವಾಹನ ನಿಲುಗಡೆಗೆ ಸೀಮಿತವಾಗಿರಬೇಕು. ಬೇರೆ ರೀತಿಯಲ್ಲಿ ಬಳಕೆ ಮಾಡಿದರೆ, ಬೆಸ್ಕಾಂ, ಜಲಮಂಡಳಿ ಸಂಪರ್ಕ ವನ್ನು ಕಡಿತಗೊಳಿಸಲು ಬಿಬಿಎಂಪಿ ನಿಯಮ ರೂಪಿಸಿದೆ.
ನೆಲ ಅಂತಸ್ತನ್ನು ಪಾರ್ಕಿಂಗ್‌ಗೆ ಮೀಸಲಿಟ್ಟ ಕಟ್ಟಡಕ್ಕೆ ನಾಲ್ಕನೇ ಅಂತಸ್ತನ್ನು (ಜಿ+4) ಅದೇ ಸೆಟ್‌ಬ್ಯಾಕ್
ನಲ್ಲಿ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. 21 ಮೀಟರ್ ಎತ್ತರದವರೆಗಿನ ಕಟ್ಟಡಕ್ಕೆ ಈ ಸೌಲಭ್ಯ ಲಭ್ಯವಾಗಲಿದೆ. ಈಗಾಗಲೇ, ಜಿ+3 ಕಟ್ಟಡ ನಿರ್ಮಿಸಿರುವವರು, ನೆಲ ಅಂತಸ್ತನ್ನು ಸಂಪೂರ್ಣವಾಗಿ ಪಾರ್ಕಿಂಗ್‌ಗೆ ಮೀಸಲಿಟ್ಟರೆ, ಅವರಿಗೂ ಇನ್ನೊಂದು ಅಂತಸ್ತು ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ಕಡಿಮೆ ಮಾಡಲು ಇಂತಹ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ನಗರ ಯೋಜನೆ ಅಧಿಕಾರಿಗಳು ತಿಳಿಸಿದರು.
ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಾನ ಕಡ್ಡಾಯ
ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ಎರಡು ಸಾವಿರ ಚದರ ಮೀಟರ್‌ನಿಂದ 10 ಸಾವಿರ ಚದರ ಮೀಟರ್
ವರೆಗಿನ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಅಪಾರ್ಟ್‌ಮೆಂಟ್‌ಗಳು ಶೇ 15ರಷ್ಟು ಭೂಮಿಯನ್ನು ಉದ್ಯಾನವನ್ನಾಗಿ ಅಭಿವೃದ್ಧಿಪಡಿಸುವುದು ಕಡ್ಡಾಯವಾಗಲಿದೆ.
ಈ ಸಂಬಂಧ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ಸೆಕ್ಷನ್ 13–ಇಗೆ ತಿದ್ದುಪಡಿ ತಂದು, ಪರಿಷ್ಕೃತ ಮಾಸ್ಟರ್ ಪ್ಲಾನ್–2015ರ ವಲಯ ನಿಯಮಗಳನ್ನು ಬದಲಾಯಿಸಿ ನಗರಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ.
ಹತ್ತಾರು ನಿವೇಶನಗಳ ಬಡಾವಣೆಗಳಲ್ಲಿ ಉದ್ಯಾನವನ್ನು ಕಡ್ಡಾಯಗೊಳಿಸಲಾಗಿದ್ದು, ಅದರಂತೆಯೇ ನೂರಾರು ಮನೆಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ಗಳಲ್ಲೂ ಉದ್ಯಾನ ಹಾಗೂ ಮಳೆ ನೀರು ಇಂಗುವ ವ್ಯವಸ್ಥೆ ಕಡ್ಡಾಯಗೊಳಿಸಲು ಇಂತಹ ಬದಲಾವಣೆ ತರಲಾಗಿದೆ ಎಂದು ನಗರ ಯೋಜನೆ ಅಧಿಕಾರಿಗಳು ತಿಳಿಸಿದರು.
ಶೇ 15ರಷ್ಟು ಭೂಮಿಯಲ್ಲಿ ಉದ್ಯಾನದ ಜೊತೆಗೆ, ಸೆಟ್‌ಬ್ಯಾಕ್ ಅನ್ನು 6 ಮೀಟರ್‌ಗೆ ಹೆಚ್ಚಿಸಲಾಗಿದೆ. ಇದರಿಂದ ಅಪಾರ್ಟ್‌ಮೆಂಟ್‌ಗಳ ಸುತ್ತಲೂ ಗಿಡ–ಮರಗಳನ್ನು ಬೆಳೆಸಲು ಸ್ಥಳ ಮೀಸಲಿರಲಿದೆ. ನಗರದಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಹಾಗೂ ರಾಜಕಾಲುವೆಗಳಲ್ಲಿ ಪ್ರವಾಹದ ಸಂದರ್ಭವನ್ನು ನಿಯಂತ್ರಿಸುವ ಸಲುವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ವಸತಿಯೇತರ, ಮಿಶ್ರಬಳಕೆ ಅಪಾರ್ಟ್‌ಮೆಂಟ್‌ಗಳಾದರೆ ಅಲ್ಲಿ ಉದ್ಯಾನದ ಪ್ರದೇಶವನ್ನು ಶೇ 10 ಹಾಗೂ ವಾಹನ ನಿಲುಗಡೆಯನ್ನು ಪ್ರದೇಶವನ್ನು ಶೇ 5ಕ್ಕೆ ನಿಗದಿಪಡಿಸಲಾಗಿದೆ.
55 ಚದರ ಮೀಟರ್‌ನಿಂದ ಎರಡು ಸಾವಿರ ಚದರ ಮೀಟರ್‌ವರೆಗಿನ ಕಟ್ಟಡಗಳು ಉದ್ಯಾನಕ್ಕೆ ಭೂಮಿ ಮೀಸಲಿಡುವ ಬದಲು ಅವರಿಗೆ ಉದ್ಯಾನ ನಿರ್ಮಾಣದ ಶುಲ್ಕವನ್ನು ವಿಧಿಸಲಾಗುತ್ತದೆ. ಮಾರ್ಗಸೂಚಿ ದರದ ಶೇ 5ರಷ್ಟು ಹಣವನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಈ ಶುಲ್ಕವನ್ನು ಸ್ವೀಕರಿಸಲು ಪ್ರತ್ಯೇಕ ಎಸ್ಕ್ರೊ ಖಾತೆಯನ್ನು ಯೋಜನಾ ಪ್ರಾಧಿಕಾರ ನಿರ್ವಹಿಸಬೇಕು ಎಂದು ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 30 ದಿನಗಳ ಅವಕಾಶವಿದೆ.
* ಶೇ 5ರಷ್ಟು ಮಾರ್ಗಸೂಚಿ ದರದಂತೆ ಶುಲ್ಕ
* ಕನಿಷ್ಠ 30 ಅಡಿ ರಸ್ತೆ ಕಡ್ಡಾಯ
* ಬಿಬಿಎಂಪಿ ವ್ಯಾಪ್ತಿಯಲ್ಲಿ 3.5 ಲಕ್ಷ ಬಿ–ಖಾತಾ ಇವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.