
ಬೆಂಗಳೂರು: ‘ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಜ.3ರಂದು ಮಧ್ಯಾಹ್ನ 1.10ಕ್ಕೆ ಬನಶಂಕರಿ ಅಮ್ಮನವರ ಬ್ರಹ್ಮರಥೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಬನಶಂಕರಿ ಅಮ್ಮನ ಜಾತ್ರೆ ಡಿ. 28ಕ್ಕೆ ವಿಧ್ಯುಕ್ತವಾಗಿ ಆರಂಭವಾಗಿದೆ. ಜ.7ರವರೆಗೆ ಇರಲಿದ್ದು, ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ಜ.3ರಂದು ನಡೆಯಲಿವೆ. ಅಂದು ಬೆಳಿಗ್ಗೆ 7ಕ್ಕೆ ಮೃತ್ಯುಂಜಯ ಪುರಸ್ಸರ ನವಗ್ರಹ ಶಾಂತಿ, ದೇವಿ ಮೂಲಮಂತ್ರ ಹೋಮ, ರಥಾಂಗಹೋಮ ಇರಲಿದೆ’ ಎಂದು ವಿವರಿಸಿದರು.
ಮಧ್ಯಾಹ್ನ 1.10ರಿಂದ ಸಂಜೆ 1.40ರವರೆಗೆ ಬನಶಂಕರಿ ಅಮ್ಮನವರ ಬ್ರಹ್ಮರಥೋತ್ಸವ ನಡೆಯಲಿದೆ. ಸಂಜೆ 4.30ಕ್ಕೆ ಶಾಕಾಂಬರೀ ದೇವಿಗೆ ಧೂಳೋತ್ಸವ, ಸಂಜೆ 6ಕ್ಕೆ ಬನಶಂಕರಿ ದೇವಿ, ಚೌಡೇಶ್ವರಿ ದೇವಿ, ಪುಟ್ಟೇನಹಳ್ಳಿ ಆಂಜನೇಯ ಸ್ವಾಮಿ, ಪಾರ್ವತಿ ಪರಮೇಶ್ವರ ದೇವರು, ಸೀತಾಲಕ್ಷ್ಮಣ ಹನುಮಂತ ಸಮೇತ ರಾಮಚಂದ್ರ ಸ್ವಾಮಿಗೆ, ಮಹಾಗಣಪತಿ, ವರಪ್ರಸಾದ್ ಆಂಜನೇಯ ಸ್ವಾಮಿ, ಸುಬ್ರಹ್ಮಣ್ಯೇಶ್ವರ ಸ್ವಾಮಿಗೆ ಮುತ್ತಿನ ಪಲಕ್ಕಿ ಉತ್ಸವ ನೇರವೆರಲಿದೆ ಎಂದು ಹೇಳಿದರು.
ಮುಜರಾಯಿ ಇಲಾಖೆಯ ಎಲ್ಲ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ಅದರಲ್ಲಿಯೂ ಬನಶಂಕರಿ ಅಮ್ಮನವರ ದೇವಸ್ಥಾನವು ಪ್ಲಾಸ್ಟಿಕ್‌ಮುಕ್ತ ಆಗುವಲ್ಲಿ ಯಶಸ್ವಿಯಾಗಿದೆ. ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಅಹಿತಕರ ಘಟನೆ, ವಾಹನದಟ್ಟಣೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ರಥೋತ್ಸವದಲ್ಲಿ ಕಳೆದ ವರ್ಷ 60 ಸಾವಿರ ಭಕ್ತರು ಪಾಲ್ಗೊಂಡಿದ್ದರು. ಈ ವರ್ಷ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಬಾರಿ ಬೆಳ್ಳಿ ತೇರಿನಲ್ಲಿ ರಥೋತ್ಸವ ಮಾಡಲು ತೀರ್ಮಾನಿಸಲಾಗಿದೆ ಎಂದರು.
ದೇವಸ್ಥಾನದ ಸಮೀಪದಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಜೊತೆಗೆ ಎರಡು ಮಹಡಿಯ ಹೆಚ್ಚುವರಿ ಅನ್ನದಾನ ಕೊಠಡಿ ನಿರ್ಮಿಸಲು ದಾನಿಗಳು ಮುಂದೆ ಬಂದಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.