ADVERTISEMENT

ಬನಶಂಕರಿ 6ನೇ ಹಂತದ ಬಡಾವಣೆ ಭೂಸ್ವಾಧೀನ ರದ್ದು: ಸಮಸ್ಯೆ ಸುಳಿಯಲ್ಲಿ 350 ಕುಟುಂಬ

ಕೆ.ಎಸ್.ಸುನಿಲ್
Published 30 ಮೇ 2025, 23:30 IST
Last Updated 30 ಮೇ 2025, 23:30 IST
   

ಬೆಂಗಳೂರು: ಬನಶಂಕರಿ 6ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಆರಂಭಿಸಿದ್ದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್‌ ರದ್ದುಗೊಳಿಸಿದ ಪರಿಣಾಮ ಅಲ್ಲಿ ನಿವೇಶನ ಖರೀದಿಸಿರುವ 350 ಕುಟುಂಬಗಳು ಸಮಸ್ಯೆಗೆ ಸಿಲುಕಿವೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಹೆಮ್ಮಿಗೆಪುರ, ಗಾಣಕಲ್ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಲವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಕೆಲವರು ಹರಾಜಿನಲ್ಲಿ ನಿವೇಶನ ಖರೀದಿಸಿದ್ದಾರೆ. ಮತ್ತೆ ಕೆಲವರು ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಇದೀಗ ನ್ಯಾಯಾಲಯದ ಆದೇಶದಿಂದ ಆತಂಕಕ್ಕೆ ಒಳಗಾಗಿದ್ದಾರೆ. 

ಬನಶಂಕರಿ ಆರನೇ ಹಂತದ ಬಡಾವಣೆಯ 2, 3, 4 ಮತ್ತು 5ನೇ ಬ್ಲಾಕ್‌ಗಳಲ್ಲಿ 2002ರಿಂದ 2024ರ ಅವಧಿಯಲ್ಲಿ ಹಲವರಿಗೆ ನಿವೇಶನ ಹಂಚಿಕೆಯಾಗಿದೆ. ಅಂದಾಜು 300ಕ್ಕೂ ಹೆಚ್ಚು ನಿವೇಶನ ಹಂಚಿಕೆ ಮಾಡಲಾಗಿದೆ.

ADVERTISEMENT

‘ಬಿಡಿಎ ಎಂಬ ಕಾರಣಕ್ಕೆ ನಂಬಿಕೆಯಿಂದ ಇ ಹರಾಜಿನಲ್ಲಿ ಕೋಟ್ಯಂತರ ರೂಪಾಯಿಗೆ ಮೂಲೆ ನಿವೇಶನ ಖರೀದಿಸಿದ್ದೇನೆ. ನಿವೇಶನ ಖರೀದಿಗೂ ಮುನ್ನ ವಕೀಲರ ಮೂಲಕ ಪರಿಶೀಲಿಸಿದಾಗ ಭೂಸ್ವಾಧೀನಕ್ಕೆ ಸಂಬಂಧಿಸಿದ ವಿಷಯ ನ್ಯಾಯಾಲಯದಲ್ಲಿ ಇರುವುದು ಗೊತ್ತಾಗಲಿಲ್ಲ.  ಮೂಲ ಭೂ ಮಾಲೀಕರು ಪ್ರಭಾವಿಗಳಾಗಿದ್ದು, ನಿವೇಶನದಲ್ಲಿ ಮನೆ ನಿರ್ಮಿಸಲು ಬಿಡುತ್ತಿಲ್ಲ, ಬೆದರಿಕೆ ಹಾಕುತ್ತಿದ್ದಾರೆ ’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ನಿವೇಶನ ಮಾಲೀಕರೊಬ್ಬರು ಅಳಲು ತೋಡಿಕೊಂಡರು.

‘ಮೇಲ್ಮನವಿ ಸಲ್ಲಿಸಿರುವುದರಿಂದ ಬಿಡಿಎ ನಿವೇಶನ ಖರೀದಿಸಿದವರೇ ಮಾಲೀಕರು. ನ್ಯಾಯಾಲಯದಿಂದ ಅಂತಿಮ ಆದೇಶ ಬರುವವರೆಗೂ ಬದಲಿ ನಿವೇಶನ ನೀಡಲು ಸಾಧ್ಯವಿಲ್ಲ’ ಎಂದು ಬಿಡಿಎ ಆಯುಕ್ತರು ಹೇಳಿದ್ದಾರೆ. ನಮ್ಮ ನಿವೇಶನದಲ್ಲಿ ಮನೆ ನಿರ್ಮಿಸಲು ಅವಕಾಶ ಕೊಡಬೇಕು’ ಎಂದು ಅವರು ಮನವಿ ಮಾಡಿದರು.

ಬಡಾವಣೆಯ ಕೆಲವೆಡೆ ರಸ್ತೆಗಳ ಡಾಂಬರೀಕರಣವಾಗಿದ್ದು, ವಿದ್ಯುತ್, ಕಾವೇರಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಬೀದಿ ದೀಪ, ಕಸ ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಸಹ ರಚಿಸಿಕೊಂಡಿದ್ದಾರೆ.

‘ನಾನು ಜೀವನದಲ್ಲಿ ದುಡಿದ ಹಣವನ್ನು ಉಳಿಸಿ, 2010ರಲ್ಲಿ 60X40 ಅಡಿ ಅಳತೆಯ ನಿವೇಶನ ಖರೀದಿಸಿದೆ. ಬಿಡಿಎ ನಕ್ಷೆ ಅನುಮೋದನೆಯೊಂದಿಗೆ ಮನೆ ನಿರ್ಮಿಸಿದ್ದೇನೆ. ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದ್ದರೆ, ಮನೆ ನಿರ್ಮಿಸುವುದನ್ನು ಏಕೆ ತಡೆಯಲಿಲ್ಲ? ಬಿಡಿಎ ಮೇಲೆ ನಂಬಿಕೆಯೇ ಇಲ್ಲದಂತಾಗಿದೆ. ನಮ್ಮ ಬ್ಲಾಕ್‌ನಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ನಿವೇಶನ ಹಂಚಿಕೆಯಾಗಿದೆ. ಏನು ಮಾಡಬೇಕು ತಿಳಿಯುತ್ತಿಲ್ಲ’ ಎಂದು ಹಿರಿಯ ನಾಗರಿಕರೊಬ್ಬರು ಆತಂಕ ವ್ಯಕ್ತಪಡಿಸಿದರು.  

‘ರಸ್ತೆ, ನೀರಿನ ಸಂಪರ್ಕ ಸೇರಿದಂತೆ ಬಡಾವಣೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಈ ತನಕ ಎಷ್ಟು ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ ಎಂಬ ಮಾಹಿತಿಯನ್ನೂ ನೀಡಿಲ್ಲ. ಹಾಗಾಗಿ ಬಿಡಿಎ ವಿರುದ್ಧ ಆದೇಶ ಬಂದಿದೆ’ ಎಂದು ನಿವೇಶನಗಳ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರಾಧಿಕಾರವು ನಿವೇಶನ ಮಾಲೀಕರ ಪರ ನಿಲ್ಲಬೇಕು. ದಶಕದ ಹಿಂದೆ ನಿರ್ಮಿಸಿದ ಮನೆಯಲ್ಲಿ ನನ್ನ ನಿವೃತ್ತಿ ಜೀವನ ಕಳೆಯಲು ನಿರ್ಧರಿಸಿದ್ದೆ. ಆದರೆ, ಕೋರ್ಟ್‌ ಆದೇಶದಿಂದ ಪ್ರಾಧಿಕಾರದ ಮೇಲೆ ನಂಬಿಕೆ ಹೋಗಿದೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ’ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿದೆ.
ಎನ್.ಜಯರಾಮ್‌ ಬಿಡಿಎ ಆಯುಕ್ತ  
24 ವರ್ಷದ ಹಿಂದೆ ಅಧಿಸೂಚನೆ
ಬನಶಂಕರಿ 6ನೇ ಹಂತದ ಬಡಾವಣೆ ಅಭಿವೃದ್ಧಿಗಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ 24 ವರ್ಷ ಕಳೆದರೂ ಜಮೀನು ಸ್ವಾಧೀನಪಡಿಸಿಕೊಂಡಿಲ್ಲ. ಬಹುತೇಕ ಜಮೀನುಗಳನ್ನು ಸ್ವಾಧೀನದಿಂದ ಕೈಬಿಟ್ಟು ಹಲವು ಜಮೀನುಗಳಿಗೆ ಸಂಬಂಧಿಸಿದಂತೆ ಮಾತ್ರವೇ ಪ್ರಕ್ರಿಯೆ ಮುಂದುವರಿಸಿರುವುದು ಕಾನೂನುಬಾಹಿರ ಮತ್ತು ತಾರತಮ್ಯದ ಕ್ರಮವಾಗಿದೆ. ಹಾಗಾಗಿ ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಕೋರಿ ಎಚ್‌. ನಾಗರಾಜಯ್ಯ ಹಾಗೂ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್‌. ಇಂದಿರೇಶ್‌ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ‌ ಬಡಾವಣೆ ಅಭಿವೃದ್ಧಿ ಯೋಜನೆಯನ್ನು ಬಹುತೇಕ ಅನುಷ್ಠಾನಗೊಳಿಸಿರುವ ಕಾರಣ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಬೇಕೆಂಬ ಬಿಡಿಎ ಮನವಿಯನ್ನು ಕೋರ್ಟ್‌ ತಿರಸ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.