
ಬೆಂಗಳೂರು: ‘ಸಿಲಿಕಾನ್ ಸಿಟಿ’ಯ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹಸಿರು, ಕೆಂಪು ನಿಶಾನೆ ತೋರುವ ಸಮಯ ಎಷ್ಟು ಸೆಕೆಂಡ್‌ಗಳವರೆಗೆ ಇರಲಿದೆ ಎಂಬ ರಿಯಲ್ ಟೈಮ್ ಮಾಹಿತಿಯನ್ನು ಮ್ಯಾಪಲ್ಸ್ ಆ್ಯಪ್‌ನಲ್ಲಿ ಲೈವ್ ಆಗಿ ನೀಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಮೊದಲ ಬಾರಿಗೆ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಇದರಿಂದ ಯಾವ ರಸ್ತೆಯಲ್ಲಿ ಎಷ್ಟು ಸಮಯದವರೆಗೆ ಸಂಚಾರ ದಟ್ಟಣೆ ಇರಲಿದೆ ಎಂಬ ಮಾಹಿತಿಯನ್ನು ಪ್ರಯಾಣಿಕರು ಅಂಗೈಯಲ್ಲಿ ಪಡೆದುಕೊಳ್ಳಬಹುದು.
ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗ, ಅರ್ಕಾಡಿಸ್ ಇಂಡಿಯಾ ಮತ್ತು ಮ್ಯಾಪಲ್ಸ್ (ಮ್ಯಾಪ್ ಮೈ ಇಂಡಿಯಾ) ಜಂಟಿಯಾಗಿ ಈ ಉಪಕ್ರಮವನ್ನು ಜಾರಿಗೊಳಿಸಿವೆ. ಮ್ಯಾಪಲ್ಸ್ ಆ್ಯಪ್ ಬಳಕೆದಾರರು ಬೆಂಗಳೂರು ನಗರದ ಟ್ರಾಫಿಕ್ ಸಿಗ್ನಲ್‌ಗಳು ಸಮೀಪಿಸುತ್ತಿದ್ದಂತೆಯೇ ಟ್ರಾಫಿಕ್ ಸಿಗ್ನಲ್‌ಗಳು ಕೆಂಪು ಅಥವಾ ಹಸಿರು ನಿಶಾನೆಗೆ ಬದಲಾಗಲು ಎಷ್ಟು ಸೆಕೆಂಡುಗಳಿವೆ ಎಂಬ ನಿಖರ ಮಾಹಿತಿಯನ್ನು ಈಗ ಮೊಬೈಲ್‌ನಲ್ಲಿಯೇ ವೀಕ್ಷಿಸಬಹುದು.
ಪ್ರತಿ ಸಿಗ್ನಲ್‌ಗೂ ಕಾಲಮಿತಿ ಅಳವಡಿಸಿ ವಾಹನ ಸಂಚಾರ ನಿಯಂತ್ರಣ ಮಾಡುವ ಹಳೆಯ ವ್ಯವಸ್ಥೆಯ ಬದಲಿಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಆಯಾ ರಸ್ತೆಗಳಲ್ಲಿನ ವಾಹನ ದಟ್ಟಣೆಯನ್ನು ಗ್ರಹಿಸಿ ಹಸಿರು ನಿಶಾನೆ ನೀಡುವ ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ಎಟಿಸಿಎಸ್) ನಗರದ 169 ಜಂಕ್ಷನ್‌ಗಳಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಈ ಟ್ರಾಫಿಕ್ ಸಿಗ್ನಲ್‌ಗಳು ಎಷ್ಟು ಸೆಕೆಂಡುಗಳ ಕಾಲ ಹಸಿರು, ಕೆಂಪು ನಿಶಾನೆ ತೋರುತ್ತವೆ ಎಂಬುದನ್ನು ಮ್ಯಾಪಲ್ಸ್ ಆ್ಯಪ್‌ನಲ್ಲಿ ನೋಡಬಹುದು.
‘ಈ ಎಐ ಚಾಲಿತ ಸ್ಮಾರ್ಟ್ ಸಿಗ್ನಲ್‌ಗಳಲ್ಲಿ ವೆಹಿಕಲ್ ಆಕ್ಚುಯೇಟೆಡ್ ಕಂಟ್ರೋಲ್ಡ್ (ವಿಎಸಿ) ತಂತ್ರಜ್ಞಾನದ ಸಹಾಯದಿಂದ ಸಿಗ್ನಲ್‌ಗಳಲ್ಲಿ ಬಿತ್ತರಿಸುವ ನೈಜ ಸಮಯವನ್ನು ಮ್ಯಾಪಲ್ಸ್ ಆ್ಯಪ್‌ನಲ್ಲಿ ತೋರಿಸಲಾಗುತ್ತದೆ. ಇದನ್ನು ಸಂಚಾರ ವಿಭಾಗದ ಪೊಲೀಸರು ಮ್ಯಾನ್ಯುಯಲ್ ಆಗಿ ನಿರ್ವಹಣೆ ಮಾಡಿದರೆ, ಆ್ಯಪ್‌ನಲ್ಲಿ ಮಾಹಿತಿ ಸಿಗುವುದಿಲ್ಲ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಎಐ ಸಿಗ್ನಲ್‌ಗಳಲ್ಲಿ ಬರುವ ಕೌಂಟ್‌ಡೌನ್ ಅವಧಿಯನ್ನು ಮ್ಯಾಪಲ್ಸ್ ಆ್ಯಪ್‌ನಲ್ಲಿ ತೋರಿಸಲಾಗುತ್ತಿದೆ. ಇದರಿಂದ ವಾಹನ ಸವಾರರು ಟ್ರಾಫಿಕ್ ಸಿಗ್ನಲ್‌ನ 500 ಮೀಟರ್ ದೂರದಿಂದಲೇ ಹಸಿರು ಅಥವಾ ಕೆಂಪು ನಿಶಾನೆ ಬರಲು ಎಷ್ಟು ಸೆಕೆಂಡುಗಳಿವೆ ಎಂಬುದನ್ನು ತಿಳಿದುಕೊಂಡು, ಬೇರೆ ಮಾರ್ಗದ ಮೂಲಕ ತೆರಳಲು ಅವಕಾಶ ಕಲ್ಪಿಸುತ್ತದೆ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಇದು ಸಹಾಯಕವಾಗಲಿದೆ’ ಎಂದು ಅವರು ವಿವರಿಸಿದರು.
169 ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಎಐ ಟ್ರಾಫಿಕ್ ಸಿಗ್ನಲ್‌ಗಳಿಗೆ ಮಾತ್ರ ಅನ್ವಯ
ಈ ಟ್ರಾಫಿಕ್ ಸಿಗ್ನಲ್‌ಗಳ 500 ಮೀಟರ್ ದೂರದಿಂದಲೇ ಕೌಂಟ್‌ಡೌನ್ ಅವಧಿ ಬಿತ್ತರ
ಸಂಚಾರ ಪೊಲೀಸ್ ವಿಭಾಗ, ಮ್ಯಾಪಲ್ಸ್, ಅರ್ಕಾಡಿಸ್ ಇಂಡಿಯಾ ನಡುವೆ ಒಪ್ಪಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.