
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಟರ್ಮಿನಲ್–1 ಮತ್ತು ಟರ್ಮಿನಲ್ –2ರಲ್ಲಿ ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಅನುಮತಿಸಲಾದ ಉಚಿತ ಅವಧಿಗಿಂತ ಹೆಚ್ಚಿನ ಸಮಯದವರೆಗೆ ನಿಲುಗಡೆ ಮಾಡುವ ವಾಹನಗಳಿಗೆ ಶುಲ್ಕ ವಿಧಿಸುವ ನಿರ್ಧಾರವನ್ನು ಮುಂದೂಡಲಾಗಿದೆ.
ಹೊಸ ನಿಯಮಗಳು ಸೋಮವಾರದಿಂದ ಜಾರಿಗೆ ಬರಬೇಕಿತ್ತು. ನಿಯಮದ ಪ್ರಕಾರ ಹೊಸ ಟರ್ಮಿನಲ್–1 ಮತ್ತು ಟರ್ಮಿನಲ್–2ರಲ್ಲಿ ನಿಗದಿಪಡಿಸಲಾದ ಪ್ರಯಾಣಿಕರ ಡ್ರಾಪ್ ಮತ್ತು ಪಿಕ್ಅಪ್ ವಲಯಕ್ಕೆ ಎಲ್ಲ ಖಾಸಗಿ ಕಾರುಗಳಿಗೆ (ವೈಟ್ ಬೋರ್ಡ್) ಉಚಿತ ಪ್ರವೇಶವಿದೆ. ಆದರೆ, ನಿಗದಿತ ಸಮಯದ ಮಿತಿ ಮೀರಿ ಹೆಚ್ಚಿನ ಅವಧಿಯಲ್ಲಿ ವಾಹನ ನಿಲ್ಲಿಸಿದರೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ. ವಾಹನಗಳಿಗೆ 8 ನಿಮಿಷ ಉಚಿತ ನಿಲುಗಡೆ ಅವಕಾಶ ಕಲ್ಪಿಸಲಾಗಿದೆ.
ಈ ಸಮಯದ ಮಿತಿ ಮೀರಿದ ಎಲ್ಲ ವಾಹನ ಬಳಕೆದಾರರಿಗೆ 8ರಿಂದ 13 ನಿಮಿಷಗಳ ನಿಲುಗಡೆಗೆ ₹150, 13ರಿಂದ 18 ನಿಮಿಷಗಳ ನಿಲುಗಡೆge ₹300 ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷಕ್ಕಿಂತ ಹೆಚ್ಚು ಸಮಯ ವಾಹನ ನಿಲ್ಲಿಸಿದರೆ ಹತ್ತಿರದ ಪೊಲೀಸ್ ಠಾಣೆಗೆ ಟೋಯಿಂಗ್ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು.
ಹಳದಿ ಫಲಕದ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು ಸೇರಿ ಎಲ್ಲ ವಾಣಿಜ್ಯ ವಾಹನಗಳು ನಿಗದಿತ ಪಾರ್ಕಿಂಗ್ ಸ್ಥಳದಲ್ಲೇ ಪ್ರಯಾಣಿಕರಿಗೆ ಕಾಯಬೇಕು. ಈ ಸ್ಥಳದಲ್ಲೂ ಮೊದಲ 10 ನಿಮಿಷದವರಗೆ ಮಾತ್ರ ಉಚಿತವಾಗಿ ವಾಹನ ನಿಲುಗಡೆ ಮಾಡಬಹುದು.
ಕೆಐಎಎಲ್ ವಕ್ತಾರರ ಪ್ರಕಾರ, ‘ಕೆಲ ದಿನಗಳಿಂದ ದೇಶದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೂ ಆದೇಶ ಮುಂದೂಡಲಾಗಿದೆ. ಪರಿಷ್ಕೃತ ಆದೇಶವನ್ನು ಒಂದೆರೆಡು ದಿನಗಳಲ್ಲಿ ಪ್ರಕಟಿಸಲಾಗುವುದು’ ಎಂದು ಹೇಳಿದರು.
ವಿಮಾನ ನಿಲ್ದಾಣಗಳ ಮೂಲಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ಎಂದಿನಂತೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಡಿಸೆಂಬರ್ 11 ಮತ್ತು 12ರಿಂದ ನಿಯಮ ಜಾರಿಗೆ ಬರಬಹುದು ಎನ್ನಲಾಗಿದೆ.
ಎರಡೂ ಟರ್ಮಿನಲ್‌ಗಳಲ್ಲಿ ಶುಲ್ಕದ ವಿವರಗಳನ್ನು ಒಳಗೊಂಡ ಫಲಕಗಳನ್ನು ಅಳವಡಿಸಿದ್ದರೂ ಬಹುತೇಕ ಕ್ಯಾಬ್ ಚಾಲಕರಿಗೆ ಸರಿಯಾದ ಮಾಹಿತಿ ಇಲ್ಲ.
‘ಉಚಿತ ಅವಧಿಗಿಂತ ಹೆಚ್ಚಿನ ಸಮಯದವರೆಗೆ ನಿಲುಗಡೆ ಮಾಡುವ ವಾಹನಗಳಿಗೆ ಶುಲ್ಕ ವಿಧಿಸುವ ನಿರ್ಧಾರ ಖಂಡಿಸಿ ಪ್ರತಿಭಟನೆ ಮಾಡಲಾಗುವುದು. ಚಾಲಕರಿಗೆ ಅನ್ಯಾಯವಾಗುವ ನಿಯಮ ಜಾರಿಗೆ ಬಿಡುವುದಿಲ್ಲ’ ಎಂದು ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ ಜಿ.ನಾರಾಯಣಸ್ವಾಮಿ ತಿಳಿಸಿದರು.
ಈ ಸಂಬಂಧ ಕೆಐಎಎಲ್‌ಗೆ ಪತ್ರ ಬರೆದಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಹೆಚ್ಚಿನ ಸಮಯದವರೆಗೆ ನಿಲುಗಡೆ ಮಾಡುವ ವಾಹನಗಳಿಗೆ ಶುಲ್ಕ ವಿಧಿಸುವ ನಿರ್ಧಾರವನ್ನು ಹಿಂಪಡೆಯಬೇಕು. ಇದು ಕ್ಯಾಬ್ ಚಾಲಕರಿಗೆ ತೀವ್ರ ಆರ್ಥಿಕ ಹೊರೆ ಉಂಟು ಮಾಡುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.