ADVERTISEMENT

‘ಕೇಂದ್ರ’ದಲ್ಲಿ ರಿಜ್ವಾನ್‌ ಅರ್ಷದ್‌ಗೆ ಎರಡನೇ ಬಾರಿ ಕೈಕೊಟ್ಟ ಅದೃಷ್ಟ

ಹಿನ್ನಡೆ – ಮುನ್ನಡೆಯ ತೂಗುಯ್ಯಾಲೆ

​ಪ್ರಜಾವಾಣಿ ವಾರ್ತೆ
Published 23 ಮೇ 2019, 20:16 IST
Last Updated 23 ಮೇ 2019, 20:16 IST
ಪಿ.ಸಿ.ಮೋಹನ್‌ ಅವರು ಕಾರ್ಯಕರ್ತರೊಂದಿಗೆ ಸಂಭ್ರಮಿಸಿದರು
ಪಿ.ಸಿ.ಮೋಹನ್‌ ಅವರು ಕಾರ್ಯಕರ್ತರೊಂದಿಗೆ ಸಂಭ್ರಮಿಸಿದರು   

ಬೆಂಗಳೂರು: ಮೊದಲೆರಡು ಸುತ್ತುಗಳ ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌
ನಂತರ 11 ನೇ ಸುತ್ತಿನವರೆಗೂ ಹಿನ್ನಡೆ ಅನುಭವಿಸಿದರು. ಕೊನೆಯ 7 ಸುತ್ತುಗಳ ಎಣಿಕೆ ಅವರನ್ನು ಗೆಲುವಿನ ದಡ ಸೇರಿಸಿದ್ದಲ್ಲದೇ ಜಯದ ಅಂತರವನ್ನೂ ಹೆಚ್ಚು ಮಾಡಿತು.

ಮುನ್ನಡೆ– ಹಿನ್ನಡೆಗಳ ತೂಗುಯ್ಯಾಲೆಯಿಂದಾಗಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಆರಂಭದಿಂದ ಅಂತ್ಯದವರೆಗೂ ಕುತೂಹಲದ ಕಣಜವಾಗಿತ್ತು. ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ನಡೆದ ಎಣಿಕೆ
ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲಿಗರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು.

ಆರಂಭದ ಪ್ರತಿ ಸುತ್ತಿನಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗೆ ಹಿನ್ನಡೆ ಆಗುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರ ಮೊಗ
ಬಾಡುತ್ತಿತ್ತು. ರಿಜ್ವಾನ್‌ ಅರ್ಷದ್‌ ಮುನ್ನಡೆಯಿಂದ ಕಾಂಗ್ರೆಸ್‌ ಕಾರ್ಯಕರ್ತರ ಮೊಗದಲ್ಲಿ ಉತ್ಸಾಹ ತುಂಬಿ ತುಳುಕುತ್ತಿತ್ತು. ಈ ನಡುವೆಯೂ ಮೋಹನ್‌ ಅವರು ಸಮಚಿತ್ತದಿಂದಲೇ ಕಾರ್ಯಕರ್ತರನ್ನು
ಸಮಾಧಾನ ಪಡಿಸುತ್ತಾ, ಧೈರ್ಯ ತುಂಬುತ್ತಿದ್ದರು.

ADVERTISEMENT

10ನೇ ಸುತ್ತಿನ ಅಂತ್ಯದ ವೇಳೆ ರಿಜ್ವಾನ್‌ 25 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರು. ಆ ಬಳಿಕ ಎಣಿಕೆಯಾದ ಮಹದೇವಪುರ, ಸಿ.ವಿ.ರಾಮನ್‌ ನಗರ, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳ ಮತಗಳು ರಿಜ್ವಾನ್‌ ಅವರ ಗೆಲುವಿನ ಓಟಕ್ಕೆ ಅಡ್ಡಗಾಲಾದವು. ತದನಂತರ ಮೋಹನ್‌ ಅವರ ಮುನ್ನಡೆ ಹೆಚ್ಚುತ್ತಲೇ ಸಾಗಿತು.

ಪ್ರತಿ ಸುತ್ತಿನ ಎಣಿಕೆಯ ಬಳಿಕ ಬೆಂಬಲಿತ ಅಭ್ಯರ್ಥಿಗೆ ಮುನ್ನಡೆ ಬಂದಾಗ ಕಾರ್ಯಕರ್ತರು ಬಾವುಟ ಹಾರಿಸುತ್ತಾ ಜೈಕಾರ ಕೂಗುತ್ತಾ ಹರ್ಷ ವ್ಯಕ್ತಪಡಿಸುತ್ತಿದ್ದರು. ಪಕ್ಷಗಳ ಏಜೆಂಟರು ನಡುನಡುವೆ ಹೊರಬಂದು ಹಿನ್ನಡೆ–ಮುನ್ನಡೆಯ ಮಾಹಿತಿಯನ್ನು ತಿಳಿಸುತ್ತಿದ್ದರು.

ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ ರಾಜ್‌ ಅವರು ಪ್ರತಿ ಸುತ್ತಿನಲ್ಲೂ ಮೂರನೇ ಸ್ಥಾನ ಕಾಯ್ದುಕೊಂಡರು. ನಾಲ್ಕು ಸುತ್ತು
ಗಳ ಎಣಿಕೆ ಮುಗಿಯುತ್ತಿದ್ದಂತೆ ಕೇಂದ್ರದಿಂದ ಹೊರನಡೆದರು. ಹಿನ್ನಡೆ ಪ್ರಮಾಣ ಹೆಚ್ಚುತ್ತಿದ್ದಂತೆಯೇ ಕಂಡುಬರುವ ಸಮಯದಲ್ಲಿ ರಿಜ್ವಾನ್‌ ಅರ್ಷದ್‌ ಸಹ ಕೇಂದ್ರದಿಂದ ಹೊರನಡೆದರು.

‘ಅಕ್ರಮದಿಂದ ಅಂತರ ಕಡಿಮೆ’

ಬೆಂಗಳೂರು ಕೇಂದ್ರದ ಜಿದ್ದಾಜಿದ್ದಿನ ಕಣದಲ್ಲಿ ಅಂತಿಮವಾಗಿ ಗೆಲುವಿನ ದಡವನ್ನು ತಲುಪಿದ ಪಿ.ಸಿ.ಮೋಹನ್‌ ಅವರು ತಮ್ಮ ಗೆಲುವು ಹಾಗೂ ಮುಂದಿನ ಯೋಜನೆಗಳ ಕುರಿತ ಅನಿಸಿಕೆಗಳನ್ನು ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡರು.

* ನಿಮ್ಮ ಗೆಲುವಿನ ಅಂತರ ಕಡಿಮೆಯಾಗಲು ಕಾರಣ?

ಪಟ್ಟಿಯಿಂದ ಮತದಾರರ ಹೆಸರನ್ನು ತೆಗೆದು ಹಾಕಿರುವುದರಿಂದ ಗೆಲುವಿನ ಅಂತರ ಈ ಬಾರಿ ಕಡಿಮೆ ಆಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿದ್ದ ಪಟ್ಟಿಯಲ್ಲಿದ್ದ ಮತದಾರರ ಹೆಸರುಗಳು ಮತದಾನದ ದಿನ ಏಕಾಏಕಿ ಮಾಯವಾಗಿದ್ದವು. ಇದರಿಂದ ಸಾವಿರಾರು ಜನರು ಮತದಾನದಿಂದ ವಂಚಿತರಾದರು.

* ಯಾವ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತೀರಿ?

ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಉಪನಗರ ರೈಲು ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತೇನೆ. ನಗರಾಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಸಿಗಬೇಕಾದ ಎಲ್ಲ ಅನುದಾನಗಳನ್ನು ತರುತ್ತೇನೆ. ಮಾಲಿನ್ಯಕ್ಕೊಳಗಾಗುತ್ತಿರುವ ಕೆರೆಗಳನ್ನು ಉಳಿಸಿ, ಅಭಿವೃದ್ಧಿ ಪಡಿಸುತ್ತೇನೆ. ಕೊಳಚೆ ನೀರನ್ನು ಸಂಸ್ಕರಿಸಿ ಮರುಬಳಕೆಯ ಯೋಜನೆಗಳಿಗೆ ಆದ್ಯತೆ ನೀಡುತ್ತೇನೆ.

* ಕಾಂಗ್ರೆಸ್‌ ಮುಗ್ಗರಿಸಲು ಕಾರಣ?

ದೇಶಕ್ಕೆ ಸ್ಥಿರ ಸರ್ಕಾರ ಬೇಕು. ನರೇಂದ್ರ ಮೋದಿ ಅವರಂತಹ ನಾಯಕ ಬೇಕು ಎಂದು ದೇಶವಾಸಿಗಳು ಬಯಸಿದ್ದಾರೆ. ಕಾಂಗ್ರೆಸ್‌ ಹಿನ್ನಡೆಗೆ ಇದೇ ಕಾರಣ. ಐದು ವರ್ಷಗಳಲ್ಲಿ ನೀಡಿದ ಉತ್ತಮ ಯೋಜನೆಗಳ ಆಡಳಿತದಿಂದಾಗಿ ಜನ ನಮ್ಮ ಪಕ್ಷದ ಕೈಹಿಡಿದಿದ್ದಾರೆ.

ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್‌ ಸರ್ಕಾರ ಉಕ್ಕಿನ ಸೇತುವೆ ಯೋಜನೆಯನ್ನು ಪ್ರಕಟಿಸಿತು. ಲೋಕಸಭಾ ಚುನಾವಣೆಗಾಗಿ ಮೈತ್ರಿ ಸರ್ಕಾರ ಎಲಿವೇಟೆಡ್‌ ಕಾರಿಡಾರ್‌ ಪರಿಚಯಿಸಿತು. ಬೃಹತ್‌ ಗುತ್ತಿಗೆದಾರರ ಹಿತಕಾಯುವ ‘ಮೈತ್ರಿ’ ಪಕ್ಷಗಳಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.

ಸ್ವಿಗ್ಗಿ ಡೆಲಿವರಿ ಬಾಯ್‌ಗೆ 517 ಮತ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಆಹಾರ ಸರಬರಾಜು ಕಂಪನಿ ಸ್ವಿಗ್ಗಿಯ ಡೆಲಿವರಿ ಬಾಯ್‌ ಜೆನಿಫರ್‌ ರಸ್ಸೆಲ್‌ 517 ಮತಗಳನ್ನು ಗಳಿಸಿದ್ದಾರೆ. ‘ನನಗೆ ಇಷ್ಟು ಜನರಾದರೂ ಬೆಂಬಲಿಸಿ
ದ್ದಾರಲ್ಲಾ. ಅದೇ ತೃಪ್ತಿ’ ಎಂದು ಅವರು ಹೇಳಿದ್ದಾರೆ.

ಊಟಕ್ಕಾಗಿ ಸಿಬ್ಬಂದಿ ಪರದಾಟ

ಬೆಂಗಳೂರು ಕೇಂದ್ರ ಲೋಕಸಭಾದ ಎಣಿಕೆ ಕೇಂದ್ರದಲ್ಲಿ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಿರಲಿಲ್ಲ. ಇದರಿಂದ ನೂರಾರು ಸಿಬ್ಬಂದಿ ಊಟಕ್ಕಾಗಿ ಪರದಾಡಿದರು.

ಸಿಬ್ಬಂದಿ ಊಟಕ್ಕಾಗಿ ಸಾಲುಗಟ್ಟಿ ನಿಂತಿದ್ದರು. ಅವರೆಲ್ಲರಿಗೂ ಸಾಕಾಗುವಷ್ಟು ಆಹಾರ ಇರಲಿಲ್ಲ. ಇರುವ ಒಂದು ಕೌಂಟರ್‌ನಲ್ಲೇ ಊಟ ಬಡಿಸಿಕೊಳ್ಳಲು ನೂಕುನುಗ್ಗಲು ಉಂಟಾಯಿತು. ಹಲವರಿಗೆ ಊಟವೇ ಸಿಗಲಿಲ್ಲ.

‘ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಮನೆಯಿಂದ ಬಂದಿದ್ದೇವೆ. ಬೆಳಿಗ್ಗೆ ತಿಂಡಿಯೂ ಸರಿಯಾಗಿ ಮಾಡಿರಲಿಲ್ಲ. ಇಲ್ಲಿ ಊಟವೂ ಸಿಗಲಿಲ್ಲ. ಖಾಲಿ ಹೊಟ್ಟೆಯಲ್ಲಿ ಕೆಲಸ ಮಾಡಲು ಆಗುತ್ತದೆಯೇ’ ಎಂದು ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

***
ಜನರ ತೀರ್ಪನ್ನು ಗೌರವಿಸುತ್ತೇನೆ. ಗೆದ್ದಿರುವ ಪಿ.ಸಿ.ಮೋಹನ್‌ ಅವರಿಗೆ ಅಭಿನಂದನೆಗಳು. ಅವರಿಗೆ ನನ್ನ ಬೆಂಬಲ ಸದಾ ಇದ್ದೇ ಇರುತ್ತದೆ. ಬೆಂಗಳೂರಿನ ಒಳಿತಿಗಾಗಿ ಕೆಲಸಗಳನ್ನು ಮುಂದುವರಿಸುತ್ತೇನೆ. ನನ್ನ ಪ್ರಚಾರಕ್ಕಾಗಿ ಶ್ರಮಿಸಿದವರಿಗೆ ಹೃತ್ಪೂರ್ವಕ ಧನ್ಯವಾದ.

-ರಿಜ್ವಾನ್‌ ಅರ್ಷದ್‌, ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.