ADVERTISEMENT

ವಿಮಾನ ನಿಲ್ದಾಣ ಮತ್ತಷ್ಟು ಸ್ಮಾರ್ಟ್‌: ದಾಖಲಾತಿ ಪರಿಶೀಲನೆಗೆ ಡಿಜಿಟಲ್‌ ವ್ಯವಸ್ಥೆ

ಬಿಐಎಎಲ್‌ನಲ್ಲಿ ಪುಟ್ಟ ಪುಟ್ಟ ಯಂತ್ರಗಳ ಓಡಾಟ, ದಾಖಲಾತಿ ಪರಿಶೀಲನೆಗೆ ಡಿಜಿಟಲ್‌ ವ್ಯವಸ್ಥೆ

ಅದಿತ್ಯ ಕೆ.ಎ.
Published 12 ಸೆಪ್ಟೆಂಬರ್ 2022, 19:31 IST
Last Updated 12 ಸೆಪ್ಟೆಂಬರ್ 2022, 19:31 IST
ಪ್ರಯಾಣಿಕರೊಬ್ಬರು ತಮ್ಮ ಮುಖಚಹರೆ ಗುರುತಿಸುವಿಕೆಗೆ ಒಳಗಾದ ಕ್ಷಣ
ಪ್ರಯಾಣಿಕರೊಬ್ಬರು ತಮ್ಮ ಮುಖಚಹರೆ ಗುರುತಿಸುವಿಕೆಗೆ ಒಳಗಾದ ಕ್ಷಣ   

ಬೆಂಗಳೂರು: ಅತ್ಯಂತ ವೇಗವಾಗಿ ಬೆಂಗಳೂರು ನಗರ ಬೆಳೆಯುತ್ತಿದ್ದು, ಅಂತರರಾಷ್ಟ್ರೀಯ ಪ್ರಯಾಣಿಕರ ಮನ್ನಣೆಗೂ ಪಾತ್ರವಾಗಿದೆ. ವಿದೇಶದಿಂದ ಬಂದು ಹೋಗುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಮಾರ್ಟ್‌ ಆಗುತ್ತಿದೆ. ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ತಂತ್ರಜ್ಞಾನ ಒದಗಿಬಂದಿದೆ.

ಪ್ರಯಾಣಿಕರ ಮಾರ್ಗದರ್ಶನಕ್ಕೆ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದಿದ್ದ ‘ರೋಬೊ’ ಹಾಗೂ ಡಿಜಿ ಯಾತ್ರಾ (ಮುಖಚಹರೆ ಗುರುತಿಸುವಿಕೆ) ಯೋಜನೆ ಯಶಸ್ವಿಯಾಗಿದ್ದು, ಈ ಯೋಜನೆ ವಿಸ್ತರಿಸಲು ಬಿಐಎಎಲ್‌ ಮುಂದಾಗಿದೆ.

ರೋಬೊ ಓಡಾಟದ ದೃಶ್ಯ

ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಬಿಐಎಎಲ್‌ನಲ್ಲಿ 2ನೇ ಟರ್ಮಿನಲ್‌ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅಕ್ಟೋಬರ್‌ ವೇಳೆಗೆ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. ಅದರ ಉದ್ಘಾಟನೆಗೂ ಮೊದಲು ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಮತ್ತಷ್ಟು ರೋಬೊಗಳು ಓಡಾಟ ನಡೆಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಸದ್ಯಕ್ಕೆ 10 ರೋಬೊಗಳು ಮಾತ್ರ ನಿಲ್ದಾಣದಲ್ಲಿವೆ. ಹೊಸದಾಗಿ ವಿಮಾನಯಾನ ಮಾಡುವವರಿಗೆ ರೋಬೊಗಳು ಮಾಹಿತಿ ಒದಗಿಸುತ್ತಿವೆ.

ADVERTISEMENT

‘ಪ್ರವೇಶದ್ವಾರದಲ್ಲಿ ಪುಟ್ಟ ಯಂತ್ರಗಳು ಓಡಾಟ ನಡೆಸುತ್ತಿದ್ದು, ಸಂವಹನ ವ್ಯವಸ್ಥೆಯೂ ಇದೆ. ಉಳಿದಂತೆ ವಿಮಾನಗಳ ಮಾಹಿತಿ, ಪ್ರಯಾಣದ ಅವಧಿ, ಹವಾಮಾನದ ವಿವರ ಪಡೆದುಕೊಳ್ಳಬಹುದು’ ಎಂದು ಬಿಐಎಎಲ್‌ನ ಅಧಿಕಾರಿ ಮಾಹಿತಿ ನೀಡಿದರು. ‘ಆರ್ಟಿಲಿಜೆಂಟ್‌’ ಸಂಸ್ಥೆಯು ಈ ರೋಬೊ ಅಭಿವೃದ್ಧಿಪಡಿಸಿ ನಿಲ್ದಾಣಕ್ಕೆ ನೀಡಿದೆ.

ತಪ್ಪಿದ ಕಿರಿಕಿರಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಮಹತ್ವದ ಯೋಜನೆಯಾದ ‘ಡಿಜಿ ಯಾತ್ರಾ’ಯನ್ನೂ ಜಾರಿಗೆ ತರಲಾಗಿದೆ. ಮೊದಲ ಬಾರಿಗೆ ಬೆಂಗಳೂರು, ವಾರಾಣಸಿ ಹಾಗೂ ದೆಹಲಿ ವಿಮಾನ ನಿಲ್ದಾಣದಲ್ಲೂ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಅನುಷ್ಠಾನಕ್ಕೆ ತರಲಾಗಿದೆ. ಇದರಿಂದ ದಾಖಲೆಗಳ ಅನಗತ್ಯ ತಪಾಸಣೆಯ ಕಿರಿಕಿರಿ ತಪ್ಪಿದೆ.

ನಿಲ್ದಾಣದ ಇ-ಗೇಟ್‌ನಲ್ಲಿ ಡಿಜಿ ಯಾತ್ರಾ ಬಯೋಮೆಟ್ರಿಕ್‌ ಬೋರ್ಡಿಂಗ್‌ ಸಿಸ್ಟಮ್‌ ಅಳವಡಿಸಲಾಗಿದೆ. ಇದು ಸಂಪರ್ಕರಹಿತ ಸೌಕರ್ಯ. ಪ್ರಯಾಣಿಕರು ತಮ್ಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿಕೊಂಡು ನಿಲ್ದಾಣದ ಮುಖಚಹರೆ ಗುರುತಿಸಿಕೊಂಡು ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದೆ. ಆ್ಯಂಡ್ರಾಯ್ಡ್‌ ಮೊಬೈಲ್‌ನಲ್ಲಿ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡು ಆಧಾರ್‌ ಕಾರ್ಡ್‌ ಸಹಿತ ಮಾಹಿತಿ ದಾಖಲು ಮಾಡಬೇಕು. ಪ್ರಯಾಣಿಕರಿಗೆ ನೋಂದಣಿ ಸಂಖ್ಯೆ ಬರಲಿದ್ದು, ವಿಮಾನವನ್ನೇರುವ ಮೊದಲು ಬೋರ್ಡ್‌ನ ಮುಂದೆ ಸ್ಕ್ಯಾನ್‌ಗೆ ಒಳಗಾಗುವ ಮೂಲಕ ನಿಲ್ದಾಣ ಪ್ರವೇಶಿಸಬಹುದು. ಪ್ರತ್ಯೇಕ ಪಾಸ್‌ ಪಡೆಯುವ ಅಗತ್ಯವಿಲ್ಲ. ಡಿಜಿಟಲ್‌ ವ್ಯವಸ್ಥೆಯ ಮೂಲಕವೇ ದಾಖಲೆಗಳ ಪರಿಶೀಲಿಸಿ ಬೋರ್ಡಿಂಗ್‌ ಪಾಸ್‌ ದೃಢೀಕರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರನ್‌ ವೇ

‘ಈ ವ್ಯವಸ್ಥೆ ಅಳವಡಿಕೆಗೂ ಮೊದಲು ಸಿಬ್ಬಂದಿಯೇ ಹಲವು ರೀತಿಯಲ್ಲಿ ತಪಾಸಣೆ ನಡೆಸುತ್ತಿದ್ದರು. ಈಗ ಪ್ರಯಾಣಿಕರಿಗೆ ಸಮಯ ಉಳಿತಾಯವಾಗುತ್ತಿದೆ. ಯಾರ ಸಂಪರ್ಕವನ್ನೂ ಪಡೆಯದೆ ಪ್ರಯಾಣಿಸಬಹುದಾಗಿದೆ. ಪ್ರಯಾಣಿಕರ ಮಾಹಿತಿ ಸಹ ಸುರಕ್ಷಿತವಾಗಿ ಇರಲಿದೆ. ದತ್ತಾಂಶ ನೀಡುವುದಕ್ಕೆ ಆತಂಕ ಪಡಬೇಕಿಲ್ಲ. 24 ಗಂಟೆಯ ನಂತರ ಪ್ರಯಾಣಿಕರ ಮಾಹಿತಿ ಅಳಿಸಿಹೋಗಲಿದೆ’ ಎಂದು ಬಿಐಎಎಲ್‌ನ ಸಿಇಒ ಹರಿಮರಾರ್‌ ತಿಳಿಸಿದ್ದಾರೆ.

ಎತ್ತರ ಹೆಚ್ಚಿಸಲು ಸಲಹೆ

ರೋಬೊ ಯಂತ್ರಗಳು ಚಿಕ್ಕದಾಗಿವೆ. ಇದರಿಂದ ವಯಸ್ಕರರಿಗೆ ತೊಂದರೆ ಆಗುತ್ತಿದೆ. ಅವುಗಳ ಎತ್ತರ ಹೆಚ್ಚಿಸಬೇಕು. ಸೀಮಿತವಾದ ಮಾಹಿತಿ ಮಾತ್ರ ಸಿಗುತ್ತಿದ್ದು ಮತ್ತಷ್ಟು ಮಾಹಿತಿ ದೊರೆಯುವಂತೆ ಮಾಡಬೇಕು.

- ಸುನಿಲ್‌,ಉದ್ಯಮಿ, ಕೆ.ಆರ್‌. ಪುರದ ಬೈರತಿ

ಎರಡು ಸಂಸ್ಥೆಗಳಲ್ಲಿ ಅಳವಡಿಕೆ

ಡಿಜಿ ಯಾತ್ರಾ ಆ್ಯಪ್‌ ಅನ್ನು ವಿಸ್ತಾರ ಏರ್‌ಲೈನ್ಸ್‌ ಹಾಗೂ ಏರ್‌ಏಷ್ಯಾ ಸಂಸ್ಥೆಗಳು ಮಾತ್ರ ಅಳವಡಿಸಿಕೊಂಡಿವೆ. ಈ ವಿಮಾನಗಳ ಪ್ರಯಾಣಿಕರಿಂದ ಉತ್ತಮ ಸ್ಪಂದನ ಸಿಕ್ಕಿದೆ.

****

ನಿಲ್ದಾಣದಲ್ಲಿ ಪ್ರಯಾಣಿಕರಸ್ನೇಹಿ ವ್ಯವಸ್ಥೆ ಜಾರಿಗೆ ತರಲಾಗಿದೆ. ದಾಖಲಾತಿ ಪರಿಶೀಲನೆ ಸರಳೀಕರಣ ಮಾಡುವ ಉದ್ದೇಶ ಮೊದಲಿನಿಂದಲೂ ಇತ್ತು. ಈಗ ಅದು ಈಡೇರಿದೆ.

- ಹರಿಮರಾರ್‌, ಸಿಇಒ, ಬಿಐಎಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.