ನಮ್ಮ ಮೆಟ್ರೊದಲ್ಲಿ ಗುಟ್ಕಾ ಜಗಿದವನಿಗೆ ಸರಿಯಾಗಿ ‘ಉಗಿದ’ ಸಹ ಪ್ರಯಾಣಿಕರು!
ಬೆಂಗಳೂರು: ಹಸಿರು ಮಾರ್ಗದಲ್ಲಿ ‘ನಮ್ಮ ಮೆಟ್ರೊ’ದಲ್ಲಿ ಪ್ರಯಾಣದ ವೇಳೆ ಗುಟ್ಕಾ ಹಾಕುತ್ತಿದ್ದ ವ್ಯಕ್ತಿಗೆ ಸಹ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಸೋಮವಾರ ಬೆಳಿಗ್ಗೆ 10 ಗಂಟೆಗೆ ಸಂಪಿಗೆ ರಸ್ತೆ ಮೆಟ್ರೊ ನಿಲ್ದಾಣದಿಂದ ರೈಲು ಮುಂದಕ್ಕೆ ಚಲಿಸುವಾಗ ಮೆಟ್ರೊ ಪ್ರಯಾಣಿಕ ಗುಟ್ಕಾ ತಿನ್ನುತ್ತಿರುವುದನ್ನು ಕಂಡು ಪ್ರಶ್ನಿಸಿದೆ’ ಎಂದು ಸಹ ಪ್ರಯಾಣಿಕ ಮದನ್ ರೆಡ್ಡಿ ಅವರು ‘ಎಕ್ಸ್’ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ‘ಭದ್ರತಾ ತಪಾಸಣೆಯ ಸಮಯದಲ್ಲಿ ಪಾನ್ ಮಸಾಲಾ ಸ್ಕ್ಯಾನರ್‌ಗಳು ಕೂಡ ಅಗತ್ಯವಿವೆ ಎಂದು ತೋರುತ್ತಿದೆ’ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಮೆಟ್ರೊ ನಮ್ಮ ಸೊತ್ತು. ಗುಟ್ಕಾ ಜಗಿದು ಉಗಿದು ಹಾಳು ಮಾಡಬೇಡಿ’ ಎಂದು ಪ್ರಯಾಣಿಕರು ಹೇಳುವುದು, ‘ನಾನು ಗುಟ್ಕಾ ಹಾಕಿದರೆ ನಿಮಗೇನು ಸಮಸ್ಯೆ? ಮೆಟ್ರೊ ನನ್ನ ಸೊತ್ತು ಕೂಡ’ ಎಂದು ಗುಟ್ಕಾ ಹಾಕಿದವರು ಪ್ರತಿಕ್ರಿಯಿಸಿದ್ದರು. ‘ಮೆಟ್ರೊದಲ್ಲಿ ಗುಟ್ಕಾ ಹಾಕುವಂಗಿಲ್ಲ’ ಎಂದು ಪ್ರಯಾಣಿಕರು ತಿಳಿಸಿದಾಗ, ‘ಸರಿ ಆಯ್ತು ಬಿಡಿ’ ಎಂದು ಮರು ಉತ್ತರ ನೀಡಿದ್ದರು. ‘ಏನು ಆಯ್ತು ಬಿಡಿ. ಮೊದಲು ಮೆಟ್ರೊದಿಂದ ಇಳಿಯಿರಿ’ ಎಂದು ಪ್ರಯಾಣಿಕರು ಹೇಳುತ್ತಿರುವುದು ವಿಡಿಯೊದಲ್ಲಿದೆ.
ಇದೇ ವಿಡಿಯೊವನ್ನು ಸಂಸದ ಪಿ.ಸಿ. ಮೋಹನ್ ‘ಎಕ್ಸ್’ನಲ್ಲಿ ಮರು ಹಂಚಿಕೊಂಡಿದ್ದು, ‘ಮೆಟ್ರೊ ಸಂಚಾರ ಇರುವುದು ವಿಮಲ್ ಹಾಕಿಕೊಂಡು ಅನೈರ್ಮಲ್ಯ ಸೃಷ್ಟಿಸಲು ಅಲ್ಲ. ಸಾರ್ವಜನಿಕ ಸಾರಿಗೆ ನಿಮ್ಮ ಪಾನ್ ಅಂಗಡಿಯಲ್ಲ. ನಮ್ಮ ಮೆಟ್ರೊ ಸ್ಥಳಗಳ ನೈರ್ಮಲ್ಯವನ್ನು ಕಾಪಾಡಲು ಕಟ್ಟುನಿಟ್ಟಿನ ಕ್ರಮ ಮತ್ತು ಜಾಗೃತಿ ಅಗತ್ಯವಿದೆ. ಬಿಎಂಆರ್‌ಸಿಎಲ್ ಕ್ರಮ ಕೈಗೊಳ್ಳಬೇಕು. ನಮ್ಮ ಮೆಟ್ರೊವನ್ನು ಪಾನ್‌ಗಳಿಂದ ವರ್ಣಮಯಗೊಳಿಸುವುದು ಬೇಡ. ಸ್ವಚ್ಛವಾಗಿ ಇಡಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.