ADVERTISEMENT

ಹಣ ಸುಲಿಗೆ, ಡ್ರಗ್ಸ್, ಅತ್ಯಾಚಾರದಂತಹ ಆರೋಪ: ಎರಡು ತಿಂಗಳಲ್ಲಿ 25 ಪೊಲೀಸರ ಅಮಾನತು

ಪೆಡ್ಲರ್‌ಗಳೊಂದಿಗೆ ನಂಟು, ಹಣ ಸುಲಿಗೆ, ಅತ್ಯಾಚಾರದಂತಹ ಆರೋಪ

ಆದಿತ್ಯ ಕೆ.ಎ
Published 6 ನವೆಂಬರ್ 2025, 19:16 IST
Last Updated 6 ನವೆಂಬರ್ 2025, 19:16 IST
   

ಬೆಂಗಳೂರು: ಆರೋಪಿಗಳ ಪತ್ತೆ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕಲ್ಪಿಸುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿರುವ ಪೊಲೀಸರೇ ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಸಿಲುಕಿಕೊಂಡು ಅಮಾನತು ಆಗುತ್ತಿರುವುದು ನಗರದಲ್ಲಿ ಕೆಲವು ದಿನಗಳಿಂದ ಹೆಚ್ಚುತ್ತಿದೆ.

ಎರಡು ತಿಂಗಳಲ್ಲಿ ಐವರು ಇನ್‌ಸ್ಪೆಕ್ಟರ್‌, ಒಬ್ಬ ಪಿಎಸ್‌ಐ, ಮೂವರು ಎಎಸ್‌ಐ, ಇಬ್ಬರು ಹೆಡ್‌ಕಾನ್‌ಸ್ಟೆಬಲ್‌ ಹಾಗೂ 14 ಮಂದಿ ಕಾನ್‌ಸ್ಟೆಬಲ್‌ಗಳು ಸೇರಿ 25 ಮಂದಿಯನ್ನು ಅಮಾನತುಗೊಳಿಸಿ, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಡ್ರಗ್ಸ್ ಪೆಡ್ಲರ್‌ಗಳೊಂದಿಗೆ ಶಾಮೀಲಾಗಿ ಪಾರ್ಟಿ ನಡೆಸಿರುವುದು, ದೂರು ನೀಡಲು ಬಂದಿದ್ದ ಯುವತಿಯ ಸ್ನೇಹ ಸಂಪಾದಿಸಿ ಅತ್ಯಾಚಾರ–ಲೈಂಗಿಕ ದೌರ್ಜನ್ಯ ಎಸಗಿರುವ ಹಾಗೂ ಉದ್ಯಮಿಯಿಂದ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿರುವುದು, ಪ್ರಕರಣ ದಾಖಲಿಸಲು ಲಂಚ ಪಡೆದುಕೊಂಡಿರುವ ಪ್ರಕರಣವೂ ಸೇರಿ ಹಲವು ಆರೋಪಗಳ ಅಡಿ ಐವರು ಇನ್‌ಸ್ಪೆಕ್ಟರ್‌ಗಳನ್ನು ನಗರ ಪೊಲೀಸ್‌ ಕಮಿಷನರ್‌ ಸೀಮಾಂತ್‌ಕುಮಾರ್ ಸಿಂಗ್‌ ಅಮಾನತು ಮಾಡಿದ್ದಾರೆ.

ADVERTISEMENT

ಇತರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪದಲ್ಲಿ ಪಿಎಸ್ಐ ಹಾಗೂ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ವಿರುದ್ಧ ಆಯಾ ವಿಭಾಗದ ಡಿಸಿಪಿಯವರು ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ.

ಆರೋಪಿಗಳ ಜತೆಗೆ ಪಾರ್ಟಿ: ಕಾಲೇಜು ವಿದ್ಯಾರ್ಥಿಗಳಿಗೆ ‘ಮತ್ತು’ ಬರುವ ಮಾತ್ರೆ ಮಾರಾಟ ಮಾಡಿದ್ದ ಆರೋಪದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಪೊಲೀಸರ ಜತೆಗೆ ಆರೋಪಿಗಳು ಸಂಪರ್ಕದಲ್ಲಿ ಇದ್ದದ್ದು, ಹಣಕಾಸು ವಹಿವಾಟು ನಡೆಸಿರುವುದು ಪತ್ತೆಯಾಗಿತ್ತು. ಆರೋಪಿಗಳ ಜತೆಗೆ ಪೊಲೀಸರು ಪಾರ್ಟಿ ಮಾಡಿರುವ ಫೋಟೊಗಳು ಸಹ ಮೊಬೈಲ್‌ನಲ್ಲಿ ಸಿಕ್ಕಿದ್ದವು.

ಆಂತರಿಕ ತನಿಖೆ ನಡೆಸಿದಾಗ ಪೊಲೀಸರು ಆರೋಪಿಗಳ ಜತೆಗೆ ಸ್ನೇಹ ಸಂಪಾದಿಸಿರುವುದು ಗೊತ್ತಾಗಿ, ಚಾಮರಾಜಪೇಟೆ ಠಾಣೆಯ ಇನ್‌ಸ್ಪೆಕ್ಟರ್ ಟಿ.ಮಂಜಣ್ಣ, ಹೆಡ್ ಕಾನ್‌ಸ್ಟೆಬಲ್‌ಗಳಾದ ರಮೇಶ್, ಶಿವರಾಜ್, ಕಾನ್‌ಸ್ಟೆಬಲ್‌ಗಳಾದ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್, ಜೆ.ಜೆ.ನಗರ ಠಾಣೆಯ ಎಎಸ್‌ಐ ಕುಮಾರ್, ಹೆಡ್‌ಕಾನ್‌ಸ್ಟೆಬಲ್ ಆನಂದ್, ಸಿಬ್ಬಂದಿ ಬಸವನಗೌಡ ಸೇರಿ 11 ಮಂದಿಯನ್ನು ಅಮಾನತು ಮಾಡಲಾಗಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಚಿನ್ನಾಭರಣ ಮಾರಾಟಗಾರರಿಂದ ಲಂಚ ತೆಗೆದುಕೊಂಡ ಆರೋಪದಡಿ ಹಲಸೂರು ಗೇಟ್ ಠಾಣೆಯ ಇನ್‌ಸ್ಪೆಕ್ಟರ್‌ ಹನುಮಂತ ಭಜಂತ್ರಿ, ಎಎಸ್‌ಐ ಹಾಗೂ ಕಾನ್‌ಸ್ಟೆಬಲ್‌ ಅವರು ಸೆ.23ರಂದು ಅಮಾನತುಗೊಂಡಿದ್ದರು. ಕರ್ತವ್ಯ ಲೋಪ ಆರೋಪದಲ್ಲಿ ಕೋರಮಂಗಲ ಠಾಣೆಯ ಇನ್‌ಸ್ಪೆಕ್ಟರ್‌ ಲೂಯಿರಾಮ ರೆಡ್ಡಿ ಅವರನ್ನೂ ಅಂದೇ ಅಮಾನತು ಮಾಡಿ ಕಮಿಷನರ್ ಆದೇಶಿಸಿದ್ದರು.

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ದೇವರಜೀವನಹಳ್ಳಿ (ಡಿ.ಜೆ ಹಳ್ಳಿ) ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಸುನಿಲ್ ಮತ್ತು ಸಹಾಯಕ ಸಬ್ ಇನ್‌ಸ್ಪೆಕ್ಟರ್‌ ಪ್ರಕಾಶ್‌ ಅವರ ವಿರುದ್ಧ ಅಕ್ಟೋಬರ್‌ 27ರಂದು ಕ್ರಮ ತೆಗೆದುಕೊಳ್ಳಲಾಗಿದೆ.

‘ಮದುವೆ ಆಗುವುದಾಗಿ ಸುನಿಲ್‌ ಅವರು ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಫೋಟೊ ಹಾಗೂ ವಿಡಿಯೊ ಇಟ್ಟುಕೊಂಡು ಹೆದರಿಸುತ್ತಿದ್ದಾರೆ. ವಿಷಯ ಬಹಿರಂಗ ಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿ, ಮಹಿಳೆ ದೂರು ನೀಡಿದ್ದರು. ದೂರು ಆಧರಿಸಿ ಇನ್‌ಸ್ಪೆಕ್ಟರ್‌ ಹಾಗೂ ಎಎಸ್‌ಐ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಯುವತಿಯ ಮರಣೋತ್ತರ ಪರೀಕ್ಷೆ ಮಾಡಿಸಲು ಲಂಚ ಪಡೆದಿದ್ದ ಆರೋಪದಲ್ಲಿ ಬೆಳ್ಳಂದೂರು ಠಾಣೆ ಇನ್‌ಸ್ಪೆಕ್ಟರ್‌ ರಮೇಶ್ ರೊಟ್ಟಿ, ಪಿಎಸ್‌ಐ ಸಂತೋಷ್, ಕಾನ್‌ಸ್ಟೆಬಲ್‌ ಗೋರಕ್‌ನಾಥ್‌ ಅವರು ಮೂರು ದಿನಗಳ ಹಿಂದಷ್ಟೇ ಅಮಾನತುಗೊಂಡಿದ್ದಾರೆ.

ಕಳ್ಳತನ ಪ್ರಕರಣದಲ್ಲಿ ಮಹಿಳೆಯನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ವರ್ತೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಂಜಯ್‌ ರಾಥೋಡ್, ಸಂತೋಷ್ ಕುದ್ರಿ ಹಾಗೂ ಅರ್ಚನಾ ಅವರ ವಿರುದ್ಧ ಸೆ.4ರಂದು ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಎನ್‌ಸಿಆರ್ ದಾಖಲಿಸಿಕೊಂಡು ಠಾಣೆಯಿಂದ ಹೊರಹೋಗಿ ಲೋಪ ಎಸಗಿದ್ದ ಪಿಎಸ್‌ಐ ಮೌನೇಶ್‌ ದೊಡ್ಡಮನಿ ಅವರ ವಿರುದ್ಧವೂ ರೂಲ್ಸ್ 7 ಜಾರಿ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಯದ್ದು ತಪ್ಪು ಎಂಬುದು ಸಾಬೀತಾದಾದರೆ ಅವರ ವಿರುದ್ಧ ಕ್ರಮ ತೆಗೆದುಕೊಂಡು ಇಲಾಖಾ ತನಿಖೆಗೆ ಆದೇಶಿಸಲಾಗುತ್ತಿದೆ
ಸೀಮಾಂತ್‌ಕುಮಾರ್ ಸಿಂಗ್‌ ಪೊಲೀಸ್ ಕಮಿಷನರ್‌ ಬೆಂಗಳೂರು

ರಿಯಲ್‌ ಎಸ್ಟೇಟ್‌: ಪೊಲೀಸರ ಮಧ್ಯಸ್ಥಿಕೆ

ನಗರದಲ್ಲಿ ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ಏರುಗತಿಯಲ್ಲಿವೆ. ಅದೇ ರೀತಿ ಸಿವಿಲ್‌ ವ್ಯಾಜ್ಯಗಳೂ ಹೆಚ್ಚುತ್ತಿವೆ. ಈ ಪ್ರಕರಣಗಳಲ್ಲಿ ಪೊಲೀಸರು ಮಧ್ಯಸ್ಥಿಕೆ ವಹಿಸುತ್ತಿರುವುದು ಕಂಡುಬಂದಿದೆ ಎಂದು ಮೂಲಗಳು ಹೇಳಿವೆ.‌ ‘ಸಿವಿಲ್‌ ಸ್ವರೂಪದ ವ್ಯಾಜ್ಯಗಳು ಠಾಣೆಗೆ ಬಂದಾಗ ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿ ಕುರಿತು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ಈಚೆಗೆ ಸುತ್ತೋಲೆ ಹೊರಡಿಸಿದ್ದರು. ಆದರೆ ಪೊಲೀಸರು ಮಾರ್ಗಸೂಚಿ ಪಾಲನೆ ಮಾಡುತ್ತಿಲ್ಲ’ ಎಂಬ ಆರೋಪವಿದೆ.

ಕಳ್ಳನಿಗೆ ಆಶ್ರಯ ನೀಡಿದ್ದ ಪೊಲೀಸ್‌

ಕುಖ್ಯಾತ ಕಳ್ಳ ಬಾಂಬೆ ಸಲೀಂಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ ಗೋವಿಂದಪುರ ಠಾಣೆಯ ಕಾನ್‌ಸ್ಟೆಬಲ್‌ ಎಚ್.ಆರ್.ಸೋನಾರ ಅವರನ್ನು ಕೆಲವು ದಿನಗಳ ಹಿಂದೆ ಅಮಾನತು ಮಾಡಲಾಗಿತ್ತು. ಅಂಗವಿಕಲ ವ್ಯಕ್ತಿಯಿಂದ ₹37 ಸಾವಿರ ಸುಲಿಗೆ ಮಾಡಿದ್ದ ಆರೋಪದಲ್ಲಿ ಇಂದಿರಾನಗರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಶರಣ ಬಸಪ್ಪ ಪೂಜಾರಿ ಮತ್ತು ಕಾನ್‌ಸ್ಟೆಬಲ್‌ ಪರಮೇಶ್ವರ ನಾಯಕ್ ಅವರೂ ಅಮಾನತು ಆಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.