
ಬೆಂಗಳೂರು: ನೀಲಸಂದ್ರದ ಇನ್ಫ್ಯಾಂಟ್ ಚರ್ಚ್‌ಗೆ ಸಂಪರ್ಕ ಕಲ್ಪಿಸುವ ಬಜಾರ್ ಮುಖ್ಯ ರಸ್ತೆಯಲ್ಲಿ ಹತ್ತು ತಿಂಗಳ ಹಿಂದೆ ಆರಂಭಿಸಿದ್ದ ರಸ್ತೆ ಅಭಿವೃದ್ಧಿ, ಕೊಳವೆ ಮಾರ್ಗದ ಕಾಮಗಾರಿ ಕುಂಟುತ್ತಾ ಸಾಗಿದೆ. ಇದರಿಂದ ವ್ಯಾಪಾರಿಗಳು, ಖರೀದಿಗೆ ಬರುವ ಗ್ರಾಹಕರು, ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದ ನೀಲಸಂದ್ರದ ಇನ್ಫ್ಯಾಂಟ್ ಚರ್ಚ್‌ನಿಂದ ಸಿಎಂಪಿ ಗೇಟ್‌ವರೆಗಿನ ಬಜಾರ್ ರಸ್ತೆ ಹದಗೆಟ್ಟು ಹೋಗಿದೆ. ಪಾದಚಾರಿ ಮಾರ್ಗದಿಂದ ನಾಲ್ಕು ಅಡಿ ಕೆಳಗಡೆ ರಸ್ತೆಯನ್ನು ಅಗೆದು, ಅಲ್ಲಲ್ಲಿ ಬೃಹತ್ ಗುಂಡಿಗಳನ್ನು ತೋಡಲಾಗಿದೆ. ಸುರಕ್ಷತೆಗೆ ಯಾವುದೇ ರೀತಿಯ ಬ್ಯಾರಿಕೇಡ್‌ಗಳನ್ನು ಅಳವಡಿಸಿಲ್ಲ. ಮಳೆ ಬಂದರೆ ರಸ್ತೆಯು ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ. ಮಳೆ ಬಾರದೇ ಇದ್ದಾಗ ಇಡೀ ಪ್ರದೇಶವೇ ದೂಳುಮಯವಾಗುತ್ತದೆ.
ಇಲ್ಲಿ ರಸ್ತೆ ಅಭಿವೃದ್ಧಿ, ಪೈಪ್‌ಲೈನ್, ಮಳೆ ನೀರು ಚರಂಡಿ ಮತ್ತು ಪಾದಚಾರಿ ಮಾರ್ಗದ ಕಾಮಗಾರಿಯನ್ನು 2024ರ ಡಿಸೆಂಬರ್‌ನಲ್ಲಿಯೇ ಪ್ರಾರಂಭಿಸಲಾಗಿತ್ತು. ಹತ್ತು ತಿಂಗಳ ಹಿಂದೆಯೇ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ಹಾಗೆಯೇ ಬಿಡಲಾಗಿದೆ. ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿದೆ. ಇದರಿಂದ ಇಲ್ಲಿನ ವ್ಯಾಪಾರ–ವಹಿವಾಟಿಗೆ ಪೆಟ್ಟು ಬಿದ್ದಿದೆ. ಈ ರಸ್ತೆಯಲ್ಲಿ ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿ ಬಿಎಂಟಿಸಿ ಬಸ್‌ಗಳೇ ಬರುತ್ತಿಲ್ಲ. ಇದರಿಂದ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ.
‘ಜವಳಿ, ಪಾದರಕ್ಷೆಗಳು, ಮಹಿಳೆಯರ ಆಲಂಕಾರಿಕ ವಸ್ತುಗಳ ಅಂಗಡಿಗಳು, ಮಾಂಸ, ಕಿರಾಣಿ, ಔಷಧಿ ಅಂಗಡಿಗಳಿವೆ. ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಇಲ್ಲಿ ವಾಹನಗಳಷ್ಟೇ ಅಲ್ಲ ಸಾರ್ವಜನಿಕರೂ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಹಿವಾಟು ಸಂಪೂರ್ಣವಾಗಿ ಕುಸಿದಿದೆ. ಅಂಗಡಿಯ ಬಾಡಿಗೆ ಕಟ್ಟಲು ಆಗುತ್ತಿಲ್ಲ’ ಎಂದು ವ್ಯಾಪಾರಿಗಳು ಹೇಳಿದರು.
‘ರಸ್ತೆ ಬದಿಯಲ್ಲಿ ಪಾದಚಾರಿ ಮಾರ್ಗವೂ ಸೇರಿದಂತೆ ಅಲ್ಲಲ್ಲಿ ಮಣ್ಣಿನ ರಾಶಿ ಹಾಕಲಾಗಿದೆ. ಹೀಗಾಗಿ ನಡೆದಾಡುವವರು ಪಾದಚಾರಿ ಮಾರ್ಗವನ್ನು ದಾಟಲಾಗದೇ ಮುಖ್ಯ ರಸ್ತೆಯಲ್ಲೇ ಹಾದು ಹೋಗಬೇಕು. ರಸ್ತೆಯಲ್ಲಿಯೇ ವ್ಯಾಪಾರ–ವಹಿವಾಟು ಮಾಡುವುದರಿಂದ ಸಂಚಾರ ದಟ್ಟಣೆ ಆಗುತ್ತಿದೆ. ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತಿವೆ. ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಶಾಸಕರಿಗೆ ದೂರು ನೀಡಿದರೂ ಕಾಮಗಾರಿ ನಿಧಾನವಾಗಿಯೇ ನಡೆಯುತ್ತಿದೆ’ ಎಂದು ಆರೋಪಿಸಿದರು.
‘ಪಾಲಿಕೆ ಮತ್ತು ಜಲಮಂಡಳಿ ಸಿಬ್ಬಂದಿ ನಾನಾ ಕಾರಣಗಳಿಂದ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ. ರಸ್ತೆಗಳಲ್ಲಿ ಗುಂಡಿಗಳಿರುವ ಕಾರಣ, ಗ್ರಾಹಕರು ಮತ್ತು ವ್ಯಾಪಾರಿಗಳು ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಮಳೆ ಬಂದರೆ ರಸ್ತೆಯಲ್ಲಿ ಓಡಾಡಲು ಆಗುವುದಿಲ್ಲ. ಈ ರೀತಿಯ ಪರಿಸ್ಥಿತಿಯಿಂದಾಗಿ ಖರೀದಿಗೆ ಬರುವ ಗ್ರಾಹಕರ ಸಂಖ್ಯೆ ವಿರಳವಾಗಿದೆ. ಹಬ್ಬಗಳು ಸೇರಿದಂತೆ ವಾರಾಂತ್ಯದಲ್ಲಿ ಸಾವಿರಾರು ಗ್ರಾಹಕರನ್ನು ಸೆಳೆಯುತ್ತಿದ್ದ ಈ ಮಾರುಕಟ್ಟೆ ಹತ್ತು ತಿಂಗಳಿಂದ ದಯನೀಯ ಸ್ಥಿತಿಗೆ ತಲುಪಿದೆ. ಶೇ 70ರಷ್ಟು ವ್ಯಾಪಾರ ಕಡಿಮೆಯಾಗಿದೆ’ ಎಂದು ವ್ಯಾಪಾರಿ ಅಲ್ತಾಫ್ ಅಳಲು ತೋಡಿಕೊಂಡರು.
ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಅವರನ್ನು ಪ್ರತಿಕ್ರಿಯೆಗಾಗಿ ‘ಪ್ರಜಾವಾಣಿ’ ಪ್ರತಿನಿಧಿ ಸಂಪರ್ಕಿಸಿದಾಗ ಅವರು ಮೊಬೈಲ್ ಕರೆಯನ್ನು ಸ್ವೀಕರಿಸಲಿಲ್ಲ.
ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ನಿತ್ಯ ದೂಳಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದ ಇಲ್ಲಿನ ವ್ಯಾಪಾರಿಗಳು ನಾನಾ ರೋಗಗಳಿಂದ ಬಳಲುತ್ತಿದ್ದಾರೆ. ಗ್ರಾಹಕರು ಬಾರದೇ ಅಂಗಡಿಯ ಬಾಡಿಗೆ ಕಟ್ಟುವುದಕ್ಕೂ ಸಮಸ್ಯೆ ಆಗಿದೆಬಾಷಾ, ಬಟ್ಟೆ ಅಂಗಡಿ ಮಾಲೀಕ
ಹತ್ತು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ. ಇದರಿಂದ ಈ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳು ಬರುತ್ತಿಲ್ಲ. ಇದರಿಂದ ಗ್ರಾಹಕರ ಸಂಖ್ಯೆ ಕಡಿಮೆ ಆಗಿದ್ದು, ವ್ಯಾಪಾರ–ವಹಿವಾಟಿಗೆ ಹೊಡೆತ ಬಿದ್ದಿದೆ. ಪ್ರತಿ ತಿಂಗಳು ₹40 ಸಾವಿರ ಬಾಡಿಗೆ ಕಟ್ಟಬೇಕಿದೆ. ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವುದು ಎಷ್ಟು ಸರಿ?ಮಹಮ್ಮದ್ ಮಾಜ್, ಮಾಂಸದ ಅಂಗಡಿಯ ಮಾಲೀಕ
ಮಳೆ ಬಂದರೆ ಇಡೀ ರಸ್ತೆ ಕೆಸರುಮಯವಾಗುತ್ತಿದೆ. ಇಂತಹ ದುಃಸ್ಥಿತಿಯಲ್ಲಿ ಸಾರ್ವಜನಿಕರು ಹೇಗೆ ಓಡಾಡಬೇಕು. ನೀಲಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು. ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆಕುಮಾರ್, ಸ್ಥಳೀಯರು
ಬಜಾರ್ ರಸ್ತೆಯಲ್ಲಿ ಸಂಚರಿಸುವ ಆಟೊಗಳನ್ನು 15 ದಿನಗಳಿಗೊಮ್ಮೆ ರಿಪೇರಿ ಮಾಡಿಸಬೇಕು. ರಸ್ತೆಯನ್ನು ಅಗೆದು ಹಾಕಿರುವುದರಿಂದ ವಾಹನ ಸಂಚಾರವೇ ದುಸ್ತರವಾಗಿದೆ. ಬಜಾರ್ ರಸ್ತೆಗೆ ಸುತ್ತಿ ಬಳಸಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಕಾಮಗಾರಿಗೆ ವೇಗ ನೀಡಬೇಕುಸತೀಶ್, ಆಟೊ ಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.