ಹೊಸೂರು ರಸ್ತೆಯಲ್ಲಿ ಕಂಡುಬರುವ ವಾಹನಗಳ ಸಾಲು
ಬೆಂಗಳೂರು: ನಗರದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ವಾಹನ ದಟ್ಟಣೆಯ ಸಮಸ್ಯೆ ಮತ್ತಷ್ಟು ತೀವ್ರಗೊಂಡಿದೆ. ಕಳೆದ ಎರಡು ತಿಂಗಳಿಂದ ಹಲವು ಮಾರ್ಗಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಹನಗಳು ಮುಂದಕ್ಕೆ ಸಾಗಲು ಸಾಧ್ಯ ಆಗುತ್ತಿಲ್ಲ. ವಾರಾಂತ್ಯದಲ್ಲಿ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ. ಕಳೆದ ಮೂರು ತಿಂಗಳಲ್ಲಿ ವಾಹನ ದಟ್ಟಣೆ ಸಮಸ್ಯೆ ಶೇ 10ರಿಂದ 15ರಷ್ಟು ಹೆಚ್ಚಳವಾಗಿದ್ದು, ವಾಹನ ಚಾಲಕರು ಹೈರಾಣಾಗಿದ್ದಾರೆ.
ಪ್ರತಿನಿತ್ಯ ಬೆಳಿಗ್ಗೆ 8 ರಿಂದ 11 ಹಾಗೂ ಸಂಜೆ 4 ರಿಂದ ರಾತ್ರಿ 9ರವರೆಗೆ ಹೊರ ವರ್ತುಲ ರಸ್ತೆಗಳು, ಮೈಸೂರು ರಸ್ತೆ, ಸರ್ಜಾಪುರ ರಸ್ತೆ, ಹೆಬ್ಬಾಳ ಹಾಗೂ ತುಮಕೂರು ರಸ್ತೆಯಲ್ಲಿ ವಾಹನ ಚಾಲಕರಿಗೆ ದಟ್ಟಣೆಯ ಸಮಸ್ಯೆ ಕಾಡಲಾರಂಭಿಸಿದೆ.
ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರಕ್ಕೆಂದು ನಗರಕ್ಕೆ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೊರ ರಾಜ್ಯದ ಯುವಕರು, ನಗರದ ಐ.ಟಿ– ಬಿ.ಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನವರು ಸ್ವಂತ ವಾಹನಗಳನ್ನೇ ಬಳಸುತ್ತಿರುವ ಪರಿಣಾಮ ಜನರು ದಟ್ಟಣೆ ಯಲ್ಲಿ ಸಿಲುಕಿ ಪರದಾಡುವಂತಾಗಿದೆ.
ಕಿರಿದಾದ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧವಿದ್ದರೂ ಅದೇ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಇದು ಸಹ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ. ನಗರದ ಹೃದಯ ಭಾಗವಾದ ಗಾಂಧಿನಗರದ ಸುತ್ತಮುತ್ತಲ ರಸ್ತೆಗಳಲ್ಲಿ ಈ ದೃಶ್ಯವನ್ನು ಕಾಣಬಹುದಾಗಿದೆ.
‘ನಿರ್ಬಂಧಿತ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಅಂತಹ ವಾಹನಗಳ ಟೋಯಿಂಗ್ ಮಾಡಲು ಸರ್ಕಾರ ಅನುಮತಿ ನೀಡಿದೆ. ಶೀಘ್ರದಲ್ಲೇ ಪ್ರಮುಖ ಸ್ಥಳಗಳಲ್ಲಿ ಟೋಯಿಂಗ್ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ವಾಹನ ಸವಾರರಿಗೆ ಸದ್ಯದಲ್ಲೇ ಟೋಯಿಂಗ್ ಬಿಸಿ ತಟ್ಟುವ ಸಾಧ್ಯತೆಯಿದೆ.
2024ರಿಂದ ಇದುವರೆಗೆ ವಾರಸುದಾರರಿಲ್ಲದ ಒಟ್ಟು 2,700 ವಾಹನಗಳನ್ನು ಪತ್ತೆಹಚ್ಚಿ, 2,601 ವಾಹನಗಳನ್ನು ಆ ಸ್ಥಳದಿಂದ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಉಳಿದ 99 ವಾಹನಗಳ ಮಾಲೀಕರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಮ್) ಮಾಡುತ್ತಿದ್ದ ಉದ್ಯೋಗಿಗಳು ಕಚೇರಿಗೆ ಕೆಲಸಕ್ಕೆ ಬರಲು ಆರಂಭಿಸಿದ್ದಾರೆ. ಅದರಲ್ಲೂ ಕಂಪನಿಗೆ ಹೋಗುವ ಟೆಕಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಕಂಪನಿಗಳಿರುವ ಹೊರವರ್ತುಲ ರಸ್ತೆಗಳಲ್ಲಿ ವಿಪರೀತ ದಟ್ಟಣೆ ಆಗುತ್ತಿದೆ. ಜೂನ್‌ನಿಂದ ಐ.ಟಿ ಕಂಪನಿಗಳ ಕಚೇರಿಗೆ ಬಂದು ಕೆಲಸ ಮಾಡುವವರ ಸಂಖ್ಯೆಯಲ್ಲಿ ಶೇ 45ರಷ್ಟು ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕ ಸಾರಿಗೆಗಳಾದ ‘ನಮ್ಮ ಮೆಟ್ರೊ’, ಬಿಎಂಟಿಸಿ ಬಸ್‌ಗಳಿದ್ದರೂ ಜನರು ಸ್ವಂತ ವಾಹನಗಳನ್ನೇ
ಬಳಸುತ್ತಿದ್ದಾರೆ
ದಿನದಿಂದ ದಿನಕ್ಕೆ ನಗರಕ್ಕೆ ಬಂದು ಹೋಗುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ
ನಗರದಿಂದ ಹೊರ ರಾಜ್ಯ ಹಾಗೂ ವಿದೇಶಕ್ಕೆ ಹೋಗುವವರ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ‘ನಮ್ಮ ಮೆಟ್ರೊ’ ಸೇವೆ ಇಲ್ಲದ ಪರಿಣಾಮ ಕ್ಯಾಬ್ ಹಾಗೂ ಸ್ವಂತ ವಾಹನಗಳಲ್ಲಿ ಪ್ರಯಾಣಿಕರು ತೆರಳುತ್ತಿದ್ದಾರೆ. ಇದರಿಂದ ಹೆಬ್ಬಾಳ ರಸ್ತೆಯಲ್ಲಿ ನಿತ್ಯ ಸಮಸ್ಯೆಯಾಗುತ್ತಿದೆ
ನಗರದ ಅನೇಕ ರಸ್ತೆಗಳು ಕಡಿಮೆ ಜನಸಂಖ್ಯೆಯಿದ್ದ ಅವಧಿಯಲ್ಲಿ ವಿನ್ಯಾಸಗೊಂಡಿದ್ದು, ಅವುಗಳು ಕಿರಿದಾಗಿವೆ. ಈಗ ಆ ರಸ್ತೆಗಳ ವಿಸ್ತರಣೆ ಹಾಗೂ ಭೂಸ್ವಾಧೀನ ಸವಾಲಾಗಿದೆ
ವಿಪರೀತ ದಟ್ಟಣೆ ಆಗುತ್ತಿರುವ ಪ್ರದೇಶಗಳ ಪೈಕಿ ಎಲೆಕ್ಟ್ರಾನಿಕ್ ಸಿಟಿಯೂ ಒಂದು. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಐ.ಟಿ- ಬಿ.ಟಿ ಕಂಪನಿಗಳಿವೆ. ಬೆಳಿಗ್ಗೆ ಹಾಗೂ ಸಂಜೆಯ ವೇಳೆ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಲ್ಲುತ್ತಿವೆ. ಸದ್ಯ, ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದ ನಡುವೆ ನಿರ್ಮಾಣ ಆಗಿರುವ ನಮ್ಮ ಮೆಟ್ರೊದ ಹಳದಿ ಮಾರ್ಗವು ಉದ್ಘಾಟನೆಗೊಂಡಿದ್ದು, ಹೊಂಗಸಂದ್ರ, ಕೂಡ್ಲುಗೇಟ್, ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ವಾಹನ ದಟ್ಟಣೆ ತುಸು ತಗ್ಗುವ ಸಾಧ್ಯತೆಯಿದೆ ಎಂದು ಸಂಚಾರ ಪೊಲೀಸರು ಹೇಳುತ್ತಾರೆ.
ಹಳದಿ ಮಾರ್ಗದಲ್ಲಿ ಸೋಮವಾರದಿಂದಲೇ ವಾಣಿಜ್ಯ ಸಂಚಾರ ಆರಂಭವಾಗಿದೆ. ಸದ್ಯ ರೈಲುಗಳ ಸಂಖ್ಯೆ ಕಡಿಮೆಯಿದ್ದು, 25 ನಿಮಿಷಕ್ಕೆ ಒಂದರಂತೆ ಒಟ್ಟು ಮೂರು ರೈಲುಗಳು ಸಂಚರಿಸುತ್ತಿವೆ. ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಈ ಭಾಗದಲ್ಲಿ ದಟ್ಟಣೆ ಬಹುತೇಕ ಕಡಿಮೆ ಆಗುವ ಸಾಧ್ಯತೆಯಿದೆ ಎಂದು ಪ್ರಯಾಣಿಕ ರಮೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.